ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್, ಮೋದಿ ನೀಚ ವ್ಯಕ್ತಿ ಎಂಬ ತಮ್ಮ ಹೇಳಿಕೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ.
2017ರ ಗುಜರಾತ್ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ಮಣಿಶಂಕರ್ ಅಯ್ಯರ್, ಪ್ರಧಾನಿ ಮೋದಿ ವಿರುದ್ಧ ಹರಿಹಾಯುತ್ತಾ ಅವರೊಬ್ಬ ನೀಚ ವ್ಯಕ್ತಿ ಎಂದು ಹೇಳಿದ್ದರು. ಇದೀಗ ಲೇಖನವೊಂದರಲ್ಲಿ ಮಣಿಶಂಕರ್ ಅಯ್ಯರ್ ಅದೇ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ರಾಷ್ಟ್ರ ರಾಜಕಾರಣದಲ್ಲಿ ಚರ್ಚೆಗೆ ಒಳಪಟ್ಟಿದೆ.
‘ಮೇ 23ರಂದು ದೇಶದ ಜನತೆ ಮೋದಿ ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಿದಲ್ಲಿ, ಈ ದೇಶ ಕಂಡ ಅತ್ಯಂತ ಹೊಲಸು ಮಾತಿನ ಪ್ರಧಾನಿಗೆ ಸೂಕ್ತ ಅಂತ್ಯ ಕಾಣಿಸಿದಂತಾಗುತ್ತದೆ. 2017ರ ಡಿಸೆಂಬರ್ 7ರಂದು ನಾನು ಅವರನ್ನು ಹೇಗೆ ಬಣ್ಣಿಸಿದ್ದೆ ಎಂದು ನೆನಪಿಸಿಕೊಳ್ಳಿ. ನನ್ನ ಮಾತು ಪ್ರವಾದಿಯಂತೆ ಭವಿಷ್ಯ ನುಡಿಯಂತೆ ಇರಲಿಲ್ಲವೆ?’ ಎಂದು ದಿ ಪ್ರಿಂಟ್ ನಲ್ಲಿ ಬರೆದ ಲೇಖನದಲ್ಲಿ ಅಯ್ಯರ್ ಪ್ರಶ್ನಿಸಿದ್ದಾರೆ.
‘ದೇಶ ಕಂಡ ಪ್ರಧಾನ ಮಂತ್ರಿಗಳಲ್ಲೇ ಮೋದಿ ಅವರು ಅತ್ಯಂತ ಹೊಲಸು ಬಾಯಿಯ ಪ್ರಧಾನಿ’ ಎಂದು ಬಣ್ಣಿಸಿರುವ ಅಯ್ಯರ್, ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನ ಇನ್ನೂ ಬಾಕಿಯಿರುವಂತೆಯೇ ವಿವಾದ ಸೃಷ್ಟಿಸಿದ್ದಾರೆ.
2017ರ ಡಿಸೆಂಬರ್ನಲ್ಲಿ ಇದೇ ರೀತಿ ಮೋದಿ ಅವರನ್ನು ನೀಚ ಎಂದು ಮಣಿಶಂಕರ್ ಅಯ್ಯರ್ ಕರೆದಿದ್ದರು. ಅವರ ಈ ಹೇಳಿಕೆಯಿಂದಾಗಿ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ತೀವ್ರ ಹಿನ್ನಡೆಯಾದ ಕಾರಣ ಕಾಂಗ್ರೆಸ್ ಹೈಕಮಾಂಡ್ ಅಯ್ಯರ್ ಅವರನ್ನು ಪಕ್ಷದಿಂದ ಉಚ್ಚಾಟಿಸಿತ್ತು. ನಂತರ ಅವರು ಕ್ಷಮೆಯಾಚಿಸಿದ ಬಳಿಕ ಪುನಃ ಸೇರ್ಪಡೆ ಮಾಡಿಕೊಂಡಿತ್ತು.
Mani Shankar Aiyar again justifies his Neech comment