ಬಿಬಿಎಂಪಿಯಿಂದ ದಾಖಲೆ ಆಸ್ತಿ ತೆರಿಗೆ ಸಂಗ್ರಹ

ಬೆಂಗಳೂರು, ಮೇ 14- ಕೇವಲ ಎರಡು ತಿಂಗಳಲ್ಲಿ 1221 ಕೋಟಿ ಆಸ್ತಿ ತೆರಿಗೆ ಸಂಗ್ರಹ ಮಾಡುವ ಮೂಲಕ ಬಿಬಿಎಂಪಿ ದಾಖಲೆ ಬರೆದಿದೆ.

ತೆರಿಗೆ ಸಂಗ್ರಹವಾಗಿರುವುದನ್ನು ಗಮನಿಸಿದರೆ ನಗರದ ನಾಗರಿಕರಲ್ಲಿ ತೆರಿಗೆ ಕಟ್ಟುವ ಬಗ್ಗೆ ಆಸಕ್ತಿ ಹೆಚ್ಚಾಗುತ್ತಿರುವುದಕ್ಕೆ ಇದು ತಾಜಾ ಉದಾಹರಣೆ.

ಜನರಲ್ಲಿ ಆಸ್ತಿ ತೆರಿಗೆ ಕಟ್ಟುವುದಕ್ಕೆ ಪ್ರಚೋದನೆ ನೀಡುವ ಉದ್ದೇಶದಿಂದ ಬಿಬಿಎಂಪಿ ಏಪ್ರಿಲ್ ತಿಂಗಳಲ್ಲಿ ಶೇ.5ರಷ್ಟು ರಿಯಾಯ್ತಿ ಘೋಷಿಸುತ್ತದೆ. ಹಾಗಾಗಿ ಏಪ್ರಿಲ್‍ನಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವುದು ಮಾಮೂಲಿ.

ಆದರೆ, ಈ ಬಾರಿಯ ವಿಶೇಷವೆಂದರೆ ವಿನಾಯಿತಿ ಅವಧಿ ಪೂರ್ಣಗೊಂಡಿದ್ದರೂ ನಾಗರಿಕರು ನಾಮುಂದು ತಾಮುಂದು ಎಂದು ಆನ್‍ಲೈನ್‍ನಲ್ಲಿ ತೆರಿಗೆ ಪಾವತಿಸುತ್ತಿರುವುದರಿಂದ ದಾಖಲೆಯ ತೆರಿಗೆ ಸಂಗ್ರಹವಾಗಿದೆ.

ಈ ತಿಂಗಳಲ್ಲಿ ತೆರಿಗೆ ಪಾವತಿಸಿದರೆ ದಂಡ ಕಟ್ಟುವಂತಿಲ್ಲ. ಜೂನ್‍ನಲ್ಲಿ ಪಾವತಿಸಿದರೆ ದಂಡ ಕಟ್ಟಬೇಕಾಗುತ್ತದೆ. ಹಾಗಾಗಿ ಜನ ಮುಗಿಬಿದ್ದು ತೆರಿಗೆ ಕಟ್ಟುತ್ತಿದ್ದಾರೆ.

ಬೆಂಗಳೂರು ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿರುವ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಲ್ಲಿ 4100 ಕೋಟಿ ಆಸ್ತಿ ತೆರಿಗೆ ಸಂಗ್ರಹದ ಗುರಿ ನೀಡಿತ್ತು.

ಈ ಟಾರ್ಗೆಟ್ ಹಿನ್ನೆಲೆಯಲ್ಲಿ ತೆರಿಗೆ ಸಂಗ್ರಹ ಕಾರ್ಯ ಮುಂದುವರೆದಿದೆ. ಇಲ್ಲಿಯವರೆಗೂ 1221 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿದೆ.

ಆಸ್ತಿ ತೆರಿಗೆ ಪಾವತಿಸಲು ಮುಂದಿನ ಮಾರ್ಚ್‍ವರೆಗೂ ಸಮಯವಿದೆ. ಇನ್ನೂ 10 ತಿಂಗಳಿದ್ದು, ಈಗಾಗಲೇ 1221 ಕೋಟಿ ಸಂಗ್ರಹವಾಗಿದೆ. ಹಾಗಾಗಿ ನಿಗದಿತ ಆಸ್ತಿ ತೆರಿಗೆ ಗುರಿಯನ್ನು ನಾವು ತಲುಪಲಿದ್ದೇವೆ ಎಂದು ಪಾಲಿಕೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಚಲನ್ ಮತ್ತು ಡಿಡಿ ಮುಖಾಂತರ ಆಯಾ ವಲಯಗಳ ಕಂದಾಯ ಕಚೇರಿಗೆ ತೆರಳಿ ಸರತಿ ಸಾಲಲ್ಲಿ ನಿಂತು ಕಂದಾಯ ಕಟ್ಟಬೇಕಿತ್ತು. ಹಾಗಾಗಿ ನಿಗದಿತ ಗುರಿ ತಲುಪಲಾಗುತ್ತಿರಲಿಲ್ಲ. ಪಾಲಿಕೆಯಲ್ಲಿ ಆನ್‍ಲೈನ್ ವ್ಯವಸ್ಥೆ ಜಾರಿಗೊಳಿಸಿದ್ದರಿಂದ ಜನ ಜಾಗೃತರಾಗಿ ತಾವಾಗಿಯೇ ಮುಂದೆ ಬಂದು ತೆರಿಗೆ ಪಾವತಿಸುತ್ತಿದ್ದಾರೆ.

ಈ ಬಾರಿ ಆನ್‍ಲೈನ್‍ನಲ್ಲಿ ಯಾವುದೇ ತಾಂತ್ರಿಕ ದೋಷ ಕಾಣಿಸದೆ ಇರುವುದರಿಂದ ಹೆಚ್ಚು ಮಂದಿ ತೆರಿಗೆ ಕಟ್ಟಲು ಸಾಧ್ಯವಾಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ 3600 ಕೋಟಿ ತೆರಿಗೆ ಸಂಗ್ರದ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ, 2500 ಕೋಟಿ ಮಾತ್ರ ಸಂಗ್ರವಾಗಿತ್ತು.

ಈಗ ಪರಿಸ್ಥಿತಿ ಬದಲಾಗಿದೆ. ಜನ ಉತ್ಸುಕರಾಗಿ ತೆರಿಗೆ ಪಾವತಿಸಲು ಬರುತ್ತಿದ್ದಾರೆ.

ಆಸ್ತಿ ತೆರಿಗೆ ಸಂಗ್ರಹಿಸುವಲ್ಲಿ ಕಂದಾಯ ವಿಭಾಗದ ಅಧಿಕಾರಿಗಳು ಇನ್ನೂ ಹೆಚ್ಚು ಮುತುವರ್ಜಿ ವಹಿಸಿದರೆ 4100 ಕೋಟಿ ತೆರಿಗೆ ಸಂಗ್ರಹದ ಗುರಿ ತಲುಪುವುದಲ್ಲಿ ಯಾವುದೇ ಸಂಶಯವಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ