ಬೆಳಗಾವಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್ ವಿರುದ್ಧ ಸಿಡಿದೆದ್ದ ಬೆನ್ನಲ್ಲೇ ಇತ್ತ ಶಾಸಕ ರಮೇಶ್ ಜಾರಕಿಹೊಳಿ ಅವರು ದಿಢೀರ್ ಆಗಿ ಬೆಂಗಳೂರಿಗೆ ಹೊರಟಿದ್ದು, ಇದೀಗ ತೀವ್ರ ಕುತೂಹಲ ಹುಟ್ಟಿಸಿದೆ.
ಸಿದ್ದರಾಮಯ್ಯ ಅವರು ರಮೇಶ್ ಜಾರಕಿಹೊಳಿಗೆ ಕರೆ ಮಾಡಿ ತುರ್ತಾಗಿ ಬೆಂಗಳೂರಿಗೆ ಬರುವಂತೆ ಹೇಳಿದ್ದಾರೆ. ಮಾಜಿ ಸಿಎಂ ಅವರ ದೂರವಾಣಿ ಕರೆಯ ಬೆನ್ನಲ್ಲೇ ಜಾರಕಿಹೊಳಿ ಬೆಂಗಳೂರಿನತ್ತ ಹೊರಟಿದ್ದಾರೆ. ಈ ಮೂಲಕ ಆಪರೇಷನ್ ಕಮಲಕ್ಕಾಗಿ ಅತೃಪ್ತ ಶಾಸಕರು ಮತ್ತೆ ಒಂದಾಗ್ತಾರಾ ಎಂಬ ಪ್ರಶ್ನೆ ಕಾಂಗ್ರೆಸ್ ವಲಯದಲ್ಲಿ ಮೂಡಿದೆ.
ಒಂದು ಫೋನ್ ಕರೆ ಬಂದಿದ್ದಕ್ಕೆ ಬೆಂಗಳೂರಿಗೆ ರೆಬೆಲ್ ಶಾಸಕ ಕೊನೆ ಘಳಿಗೆಯಲ್ಲಿ ವಿಮಾನದ ಟಿಕೆಟ್ ಬುಕ್ ಮಾಡಿ ಮಗ ಅಮರ್ ಜೊತೆ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ.
ಕೈ ಮತ್ತು ದಳ ನಾಯಕರ ಪರಸ್ಪರ ಮಾತಿನ ವಿವಾದ ಹಿನ್ನೆಲೆಯಲ್ಲಿ ಇದನ್ನೇ ಲಾಭವಾಗಿ ಬಳಸಿಕೊಳ್ಳಲು ರಮೇಶ್ ಮುಂದಾಗಿದ್ದು, ರೆಬೆಲ್ ಶಾಸಕರನ್ನು ಒಟ್ಟುಗೂಡಿಸುವ ಕೆಲಸ ಮಾಡಲಿದ್ದಾರೆ. ಅಲ್ಲದೆ ಬೆಂಬಲಿಗರಿಗೆ ಹೊಸ ಸಂದೇಶ ತರುವುದಾಗಿ ಹೇಳಿ ಜಾರಕಿಹೊಳಿ ಹೊರಟಿದ್ದಾರೆ ಎಂಬುದಾಗಿ ಅವರ ಆಪ್ತರಿಂದ ತಿಳಿದುಬಂದಿದೆ.