ಬಾಗಲಕೋಟೆ: ವಿಪಕ್ಷ ಬಿಜೆಪಿ ಹಾಗೂ ರಾಜ್ಯ ಸಮ್ಮಿಶ್ರ ಸರ್ಕಾರದ ವಾಕ್ಸಮರ ತಾರಕಕ್ಕೇರಿದೆ. ಈ ನಡುವೆ ಬಿಜೆಪಿ ಮುಖಂಡ ಕೆ ಎಸ್ ಈಶ್ವರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗುವ ಹೇಳಿಕೆ ನೀಡುತ್ತಿದ್ದು, ಇದು ಮುದುಕಿ ಯೌವನದಲ್ಲಿನ ತನ್ನ ತುರುಬನ್ನು ನೆನಪಿಸಿಕೊಂಡಂತೆ ಎಂದು ವ್ಯಂಗ್ಯವಾಡಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಈಶ್ವರಪ್ಪ, ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಆದ್ದರಿಂದಲೇ ಅವರು ತಮ್ಮ ಬೆಂಬಲಿಗರ ಮೂಲಕ ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಎಂದು ಹೇಳಿಸಿಕೊಳ್ಳುತ್ತಿದ್ದಾರೆ. ಈ ಜನ್ಮದಲ್ಲಿ ಸಿದ್ದರಾಮಯ್ಯ ಮತ್ತೆಂದೂ ಸಿಎಂ ಆಗಲ್ಲ. ಇದು ತಿರುಕನ ಕನಸಿನಂತೆ ಎಂದರು.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಈ ಜನ್ಮದಲ್ಲಿ ಮದುವೆ ಆಗುವುದಿಲ್ಲ. ಅದೇರೀತಿ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಲ್ಲ ಎಂದು ಈಶ್ವರಪ್ಪ ಲೇವಡಿ ಮಾಡಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಅವರು ಈ ಹುಚ್ಚು ಕನಸಿನಿಂದ ಹೊರಬಂದು ಸಾಮಾನ್ಯ ಜೀವನ ಸಾಗಿಸಬೇಕು ಎಂದು
ಸಿದ್ದರಾಮಯ್ಯ ಜೆಡಿಎಸ್ನಿಂದ ಉಚ್ಛಾಟನೆ ಆದಂತೆ ಕಾಂಗ್ರೆಸ್ ನಿಂದಲೂ ಅಮಾನತು ಆಗುತ್ತಾರೆ. ದಿನೇಶ್ ಗುಂಡೂರಾವ್ ಒಬ್ಬ ಬಟ್ಟೆ ಹಾವು. ಅವರು ಸಿದ್ದರಾಮಯ್ಯ ಚೇಲಾಗಳ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ. ಸಿದ್ದರಾಮಯ್ಯ ಮತ್ತೆ ಸಿಎಂ ಆಗುತ್ತಾರೆ ಎಂದು ಹೇಳಿಕೆ ಕೊಟ್ಟ ಶಾಸಕರಿಗೆ ನೋಟಿಸ್ ಕೊಟ್ಟಿಲ್ಲ. ಬದಲಾಗಿ ವಿಶ್ವನಾಥ್ ವಿರುದ್ಧ ಗುಂಡೂರಾವ್ ಹರಿಹಾಯ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ತಾಕತ್ತಿದ್ದರೆ ಈಶ್ವರಪ್ಪ ಸಿಎಂ ಎಂದು ಹೇಳಲಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಈಶ್ವರಪ್ಪ, ಬಿಜೆಪಿ ಶಿಸ್ತಿನ ಪಕ್ಷ, ನಾಟಕದ ಪಕ್ಷವಲ್ಲ. ಲೋಕಸಭಾ ಚುನಾವಣೆಯಲ್ಲಿ ಜನರ ಒಲವು ಬಿಜೆಪಿ ಮೇಲಿದೆ. ಮತ್ತೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಹಾಗೆಯೇ ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಗಿಂತ ಬಿಜೆಪಿ ಹೆಚ್ಚು ಸ್ಥಾನ ಗಳಿಸಲಿದೆ ಎಂದರು.
bagalakote, K S Eshwarappa, Siddaramaiah