![mysuru-rain-april7](http://kannada.vartamitra.com/wp-content/uploads/2019/05/mysuru-rain-april7-677x381.jpg)
ಮೈಸೂರು, ಮೇ 9- ನಿನ್ನೆ ಸುರಿದ ಮಳೆಗೆ ನಗರದ ಕೆಲವೆಡೆ ಮರಗಳು ಧರೆಗುರುಳಿವೆ.
ನಿನ್ನೆ ಬೆಳಗಿನಿಂದ ಮೋಡಕವಿದ ವಾತಾವರಣವಿತ್ತು. ಸಂಜೆ ವೇಳೇಗೆ ಗುಡುಗು-ಮಿಂಚಿನೊಂದಿಗೆ ಜೋರು ಮಳೆ ಸುರಿಯಿತು. ಜತೆಗೆ ಗಾಳಿ ಬೀಸಿದ್ದರಿಂದ ಮರಗಳು ಮುರಿದುಬಿದ್ದಿವೆ.
ರಾಮಕೃಷ್ಣ ನಗರದ ವಾಸು ಬಡಾವಣೆಯಲ್ಲಿ ಮರವೊಂದು ವಿದ್ಯುತ್ ಕಂಬದ ಮೇಲೆ ಬಿದ್ದ ಪರಿಣಾಮ ತಂತಿಗಳು ತುಂಡಾಗಿ ಮನೆಗಳ ಮೇಲೆ ಚೆಲ್ಲಾಡಿದ್ದರೂ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ನ್ಯೂ ಕಾಂತರಾಜ ಅರಸು ರಸ್ತೆಯಲ್ಲಿ ವಿದ್ಯುತ್ ಕಂಬ ಬೈಕ್ ಮೇಲೆ ಉರುಳಿದೆ. ಸವಾರ ನಾಗಭೂಷಣ್ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಇದಲ್ಲದೆ, ಇನ್ನೂ ಕೆಲ ಕಡೆ ಮರಗಳು ಉರುಳಿವೆ. ಜತೆಗೆ ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡಬೇಕಾಯಿತು. ಕೆಲವೆಡೆ ವಿದ್ಯುತ್ ಇಲ್ಲದೆ ಜನರು ತೊಂದರೆ ಅನುಭವಿಸಿದರು.