ಶ್ರೀರಾಮುಲು ಹೇಳಿಕೆಯನ್ನು ಸಮರ್ಥಿಸಿಕೊಂಡ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ, ಮೇ 9- ಶಿವಳ್ಳಿ ಅವರ ಸಾವಿಗೆ ಮೈತ್ರಿ ಸರ್ಕಾರ ಕಾರಣ ಎಂಬ ಶ್ರೀರಾಮುಲು ಹೇಳಿಕೆಯನ್ನು ಬಿಜೆಪಿ ಮುಖಂಡ, ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಸಮರ್ಥಿಸಿಕೊಂಡಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯ ಶಾಸಕರಾದ ಶಿವಳ್ಳಿ ಅವರನ್ನು ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿ ಮಾಡಲಿಲ್ಲ ಎಂಬ ಕೊರಗಿತ್ತು.ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಅವರನ್ನು ಮಂತ್ರಿ ಮಾಡಲಾಯಿತು.

ಶಿವಳ್ಳಿ ಮತ್ತು ಎಂ.ಟಿ.ಬಿ.ನಾಗರಾಜ್ ಅವರನ್ನು ಮಂತ್ರಿ ಮಾಡದಿದ್ದರೆ ಬಿಜೆಪಿ ಸೇರುತ್ತಾರೆ ಎಂಬ ವದಂತಿ ಇತ್ತು. ಹಾಗಾಗಿ ಅವರನ್ನು ಸಚಿವರನ್ನಾಗಿ ಮಾಡಲಾಯಿತು. ಇದೇ ಅರ್ಥದಲ್ಲಿ ಶ್ರೀರಾಮುಲು ಮಾತನಾಡಿದ್ದಾರೆ. ಇದನ್ನು ಮೈತ್ರಿ ನಾಯಕರು ಅರ್ಥ ಮಾಡಿಕೊಂಡರೆ ದೂರು ನೀಡುವ ಅಗತ್ಯವಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ನಿನ್ನೆ ಸುದ್ದಿಗೋಷ್ಠಿಯಲ್ಲಿ ಶ್ರೀರಾಮುಲು ಅವರು ಸಚಿವ ಶಿವಳ್ಳಿ ಸಾವಿಗೆ ಮೈತ್ರಿ ಸರ್ಕಾರ ಕಾರಣ ಎಂದು ಹೇಳಿದ್ದರು. ಇದರ ವಿರುದ್ಧ ಕಾಂಗ್ರೆಸ್ ನಾಯಕರು ಉಗ್ರಪ್ಪ ನೇತೃತ್ವದಲ್ಲಿಂದು ದೂರು ನೀಡಲು ಮುಂದಾಗಿದ್ದಾರೆ.

ರಾಮುಲು ಪರವಾಗಿ ಬೊಮ್ಮಾಯಿ ಬ್ಯಾಟಿಂಗ್ ಮಾಡಿ ದೂರು ನೀಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ