ಕಾಂಗ್ರೇಸ್ ಗೆಲುವಿಗೆ ಒಂದಾದ ಲವ-ಕುಶರು

ಚಿಂಚೋಳಿ, ಮೇ 9- ಚಿಂಚೋಳಿ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಲವ-ಕುಶರು ಒಂದಾಗಿದ್ದಾರೆ.

ಹಕ್ಕ-ಬುಕ್ಕರಂತಿದ್ದ ಮಲ್ಲಿಕಾರ್ಜುನ ಖರ್ಗೆ ಮತ್ತು ಧರಂಸಿಂಗ್ ಅವರ ಪುತ್ರರಾದ ಪ್ರಿಯಾಂಕ್ ಖರ್ಗೆ ಮತ್ತು ಅಜಯ್ ಧರಂಸಿಂಗ್ ಅವರು ಈಗ ಚುನಾವಣಾ ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ. ಜೋಡೆತ್ತುಗಳಂತೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಡಾ.ಉಮೇಶ್ ಜಾಧವ್ ಅವರನ್ನು ರಾಜಕೀಯಕ್ಕೆ ಕರೆತಂದಿದ್ದೇ ಮಾಜಿ ಮುಖ್ಯಮಂತ್ರಿ ದಿ.ಧರಂಸಿಂಗ್ ಅವರು. ಜಾಧವ್ ಅವರ ಎಲ್ಲ ರಾಜಕೀಯ ಪಟ್ಟುಗಳ ಅರಿವು ಅವರ ಕುಟುಂಬಕ್ಕಿದೆ. ಹಾಗಾಗಿ ಪ್ರಿಯಾಂಕ ಖರ್ಗೆ ಅವರಿಗೆ ಅಜಯ್ ಧರಂಸಿಂಗ್ ಅವರು ಸಾಥ್ ನೀಡಿದ್ದಾರೆ.

ಇಬ್ಬರು ಶಾಸಕರು ಸೇರಿ ಕೈ ಅಭ್ಯರ್ಥಿ ಗೆಲುವಿಗೆ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಉಮೇಶ್ ಜಾಧವ್ ಅವರನ್ನು ರಾಜಕೀಯಕ್ಕೆ ಕರೆತಂದ ಧರಂಸಿಂಗ್ ಮತ್ತು ರಾಜಕೀಯ ಪಾಠ ಹೇಳಿಕೊಟ್ಟ ಮಲ್ಲಿಕಾರ್ಜುನ ಖರ್ಗೆ ಅವರಿಂದ ಜಾಧವ್ ಅವರ ಪಟ್ಟುಗಳನ್ನು ತಿಳಿದುಕೊಂಡು ಈಗ ಚಿಂಚೋಳಿ ಕ್ಷೇತ್ರದ ಅಭ್ಯರ್ಥಿ ಸುಭಾಷ್ ರಾಥೋಡ್ ಅವರ ಗೆಲುವಿಗೆ ಈ ಇಬ್ಬರು ರಣತಂತ್ರ ರೂಪಿಸಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ.

ಚಿಂಚೋಳಿ ಉಪಕದನ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜು ಖರ್ಗೆ ಕ್ಷೇತ್ರದಲ್ಲೇ ಮೊಕ್ಕಾಂ ಹೂಡಿದ್ದಾರೆ. ನಾಳೆಯಿಂದ ಮೂರು ದಿನಗಳ ಕಾಲ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮತ್ತಿತರ ನಾಯಕರು ಪ್ರಚಾರ ನಡೆಸಲಿದ್ದಾರೆ.

ಒಟ್ಟಾರೆ ಚಿಂಚೋಳಿ ಮತ್ತು ಕುಂದಗೋಳ ಎರಡೂ ಕ್ಷೇತ್ರಗಳು ಕಾಂಗ್ರೆಸ್‍ಗೆ ಪ್ರತಿಷ್ಠೆಯ ಕಣವಾಗಿದ್ದು, ಎರಡೂ ಕ್ಷೇತ್ರಗಳನ್ನು ಸವಾಲಾಗಿ ಸ್ವೀಕರಿಸಿರುವ ನಾಯಕರು ಗೆಲುವಿನ ರಣತಂತ್ರ ರೂಪಿಸಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.

ಎಲ್ಲ ನಾಯಕರ, ಸಮುದಾಯದ ಮುಖಂಡರು ವಿವಿಧ ಪಕ್ಷಗಳ ನಾಯಕರನ್ನು ತಮ್ಮತ್ತ ಸೆಳೆಯುವ ಯತ್ನ ನಡೆಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ