ಗ್ರಹ ಸಚಿವರಿಂದ ಅಧಿಕಾರ ದುರುಪಯೋಗ : ಯಡಿಯೂರಪ್ಪ

ಹುಬ್ಬಳ್ಳಿ, ಮೇ 5- ರಾಜ್ಯದಲ್ಲಿ ಗೃಹ ಸಚಿವರ ಒತ್ತಡದಿಂದ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿ ಕಿರುಕುಳ ನೀಡಲಾಗುತ್ತಿದೆ. ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ನಾಳೆ ಪ್ರತಿಭಟನೆ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಹೇಳಿದರು.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಸಚಿವರು ಅಧಿಕಾರ ದುರುಪಯೋಗ ಮಾಡಿಕೊಂಡು ಬಿಜೆಪಿ ಕಾರ್ಯಕರ್ತರನ್ನು ಕಿರುಕುಳ ನೀಡುತ್ತಿದ್ದಾರೆ. ಇದನ್ನು ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದ್ದೇವೆ ಎಂದರು.

ಕುಂದಗೋಳ ಉಪ ಚುನಾವಣೆಯಲ್ಲಿ ಬಹಳ ಅಂತರದಿಂದ ಗೆಲುವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎಂ.ಆರ್.ಪಾಟೀಲ್ ಅವರ ಸಹಕಾರದಿಂದ ನಮಗೆ ಗೆಲವು ಸುಲಭವಾಗುತ್ತದೆ. ಈ ಕ್ಷೇತ್ರದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಹಣ ಬಲದ ಮೇಲೆ ಚುನಾವಣೆ ಮಾಡುತ್ತಿದ್ದಾರೆ. ನಾವು ಜನರ ಆರ್ಶಿವಾದದೊಂದಿಗೆ ಚುನಾವಣೆ ಎದುರಿಸುತ್ತೇವೆ ಎಂದರು.

ಮುಖ್ಯಮಂತ್ರಿಗಳು ಅಧಿಕಾರಕ್ಕೆ ಬಂದು 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ಹತ್ತು ತಿಂಗಳಾದರೂ ರೈತರ ಸಾಲಮನ್ನಾ ಆಗಿಲ್ಲ. ಈಗ ರೈತರಿಗೆ ಸಾಂತ್ವನ ಪತ್ರ ಬರೆಯುವುದಾಗಿ ಹೇಳುತ್ತಿರುವುದು ನಗೆಪಾಟಲು ಎಂದರು.

ಸರ್ಕಾರಕ್ಕೆ ಬರಗಾಲದ ಬಗ್ಗೆ ಗಮನವಿಲ್ಲ. ಕಾಂಗ್ರೆಸ್ ಜೆಡಿಎಸ್ ಭಿನ್ನಾಭಿಪ್ರಾಯ ರಾಜ್ಯದ ಅಭಿವೃದ್ದಿಗೆ ಮಾರಕವಾಗಿದೆ. ಈ ಸರ್ಕಾರಕ್ಕೆ ಬರದ ಬಗ್ಗೆ ಕಾಳಜಿಯಿಲ್ಲ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರನ್ನು ಇಡೀ ಜಗತ್ತೇ ಗೌರವಿಸುತ್ತಿದೆ. ಪ್ರಧಾನಿ ಬಗ್ಗೆ ಹಗುರವಾಗಿ ಮಾತನಾಡುವುದರಿಂದ ದೊಡ್ಡವನಾಗುತ್ತೇನೆ ಎನ್ನುವ ಭ್ರಮೆಯಲ್ಲಿ ಸಿದ್ದರಾಮಯ್ಯ ಇದ್ದಾರೆ ಎಂದು ತಿರುಗೇಟು ನೀಡಿದರು.

ಲೋಕಸಭಾ ಫಲಿತಾಂಶದಲ್ಲಿ ಕಾಂಗ್ರೆಸ್‍ನ ಅತಿರಥ ಮಹಾರಥರು ಮನೆಗೆ ಹೋಗುತ್ತಾರೆ. ಕಾಂಗ್ರೆಸ್‍ನ ಎಲ್ಲರೂ ಪ್ರಧಾನಿ ಬಗ್ಗೆ ಹಗುರವಾಗಿ, ಏಕವಚನದಿಂದ ಮಾತನಾಡುತ್ತಿದ್ದಾರೆ. ದೇಶದ ಜನರು ಅವರಿಗೆ ಉತ್ತರ ಕೊಡುತ್ತಾರೆ ಎಂದರು.

ನಾನು ರೈತರ ಸಾಲಮನ್ನಾ ಮಾಡಲು ನೋಟು ಪ್ರಿಂಟ್ ಮಷಿನ್ ಇಟ್ಟಿಲ್ಲ ಅಂದಿದ್ದೇನೆ ಎನ್ನುವ ಕಾಂಗ್ರೆಸ್ ಟೀಕೆ ಅರ್ಥ ಇಲ್ಲದಿರುವ ಮಾತು ಎಂದರು.

ಕುಂದಗೋಳದಲ್ಲಿ ಇಡೀ ಸರ್ಕಾರ ಬಂದು ಕುಳಿತಿದೆ. ಹಣದ ಹೊಳೆ ಹರಿಸುತ್ತಿದ್ದಾರೆ. ಕಾಂಗ್ರೆಸ್- ಜೆಡಿಎಸ್ ಭ್ರಷ್ಟಾಚಾರ ಮತ್ತು ಕಚ್ಚಾಟದಿಂದ ಜನ ರೋಸಿ ಹೋಗಿದ್ದಾರೆ. ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಸ್ಕಾರ್ಪಿನ್ ಹಗರಣದ ಬಗ್ಗೆ ರಾಹುಲ್ ಗಾಂಧಿಯವರು ಅರುಣ್ ಜೇಟ್ಲಿ ಪ್ರಶ್ನೆಗೆ ಮೊದಲು ಉತ್ತರ ಕೊಡಲಿ. ನಂತರ ಬಿಜೆಪಿಯವರ ಬಗ್ಗೆ ಮಾತನಾಡಲಿ ಎಂದರು.

ನಾನು ಹಗಲುಗನಸು ಕಾಣುತ್ತಿದ್ದೇನೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು, ನಾನು ಕನಸೇ ಕಂಡಿಲ್ಲ ಹಗಲುಗನಸು ಎಲ್ಲಿಯ ಮಾತು…? ಮೇ 23ಕ್ಕೆ ಫಲಿತಾಂಶ ಬರುತ್ತದೆ.ಎಲ್ಲವೂ ಗೊತ್ತಾಗಲಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ