ಬಿಜೆಪಿಯ ನಾಯಕರಿಂದ ನಡೆದ ಮಹತ್ವದ ಸಭೆ

ಹುಬ್ಬಳ್ಳಿ,ಮೇ 5- ರಾಜ್ಯ ಸರ್ಕಾರದ ಅಳಿವು ಉಳಿವು ಪ್ರಶ್ನೆ ಎಂದೇ ವ್ಯಾಖ್ಯಾನ ಮಾಡುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮತ್ತು ಬಿಜೆಪಿ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಕುಂದಗೋಳ ಮತ್ತು ಚಿಂಚೋಳಿ ಉಪ ಚುನಾವಣೆಯಲ್ಲಿ ಶತಾಯ ಗತಾಯ ಗೆಲ್ಲಲೇಬೇಕೆಂದು ಬಿಜೆಪಿಯ ಘಟಾನು ಘಟಿ ನಾಯಕರು ಇಂದು ಮಹ್ವದ ಸಭೆ ನಡೆಸಿದರು.

ನಗರದ ಖಾಸಗಿ ಹೊಟೇಲ್‍ನಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜ್ಯ ಬಿಜೆಪಿಯ ಉಪಾಧ್ಯಕ್ಷ ಗೊವಿಂದ ಕಾರಜೋಳ, ಕುಂದಗೋಳ ಚುನಾವಣೆಯ ಉಸ್ತುವಾರಿ ಜಗದೀಶ್ ಶೆಟ್ಟರ್, ಶ್ರೀರಾಮುಲು, ಕೋಟಾ ಶ್ರೀನಿವಾಸ್ ಪೂಜಾರಿ, ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಹಿಂದುಳಿದ ನಾಯಕರೊಂದಿಗೆ ರಣತಂತ್ರ ರೂಪಿಸಿದರು.

ಸಭೆಯಲ್ಲಿ ಬಸವರಾಜಬೊಮ್ಮಾಯಿ, ಸಿ.ಸಿ.ಪಾಟೀಲ್, ಅಭ್ಯರ್ಥಿ ಚಿಕ್ಕನಗೌಡರ್, ಈಶ್ವರ್ ಚಂದ್ರಹೊಸಮನಿ, ಎಂ.ಆರ್.ಪಾಟೀಲ್ ಮುಂತಾದವರು ಪಾಲ್ಗೊಂಡು ಕುಂದಗೋಳ, ಚಿಂಚೋಳಿ ಕ್ಷೇತ್ರದಲ್ಲಿ ಹಿಂದುಳಿದ, ದಲಿತ ಮತಗಳನ್ನು ಸೆಳೆಯಲು ಯಾವ ಯಾವ ನಾಯಕರಿಗೆ ಉಸ್ತುವಾರಿ ನೀಡಬೇಕೆಂಬುದರ ಬಗ್ಗೆ ಗಂಭೀರ ಚರ್ಚೆ ನಡೆಸಿದರು.

ಈಗಾಗಲೇ ಕಾಂಗ್ರೆಸ್ ಎರಡು ಸುತ್ತಿನ ಪ್ರಚಾರ ನಡೆಸಿದ್ದು, ಒಂದು ಬಹಿರಂಗ ಸಭೆ ಮೂಲಕ ಮತಯಾಚನೆ ಮಾಡಿದೆ. ಮಾಜಿ ಸಿಎಂ ಸಿದ್ದರಾಮಯ್ಯಾ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಡಿ.ಕೆ.ಶಿವಕುಮಾರ್, ಸತೀಶ್ ಜಾರಕಿಹೊಳಿ ಸ್ವತಃ ರಣರಂಗಕ್ಕೆ ಇಳಿದ್ದಾರೆ. ಚುನಾವಣೆ ದಿನಾಂಕ ಪ್ರಕಟಗೊಳ್ಳುತಿದ್ದಂತೆ ಹಿರಿಯ ಮುಖಂಡರ ಮುಂದಾಳತ್ವದಲ್ಲಿ ಸಭೆ ನಡೆಸಿ ಕುಂದಗೋಳ ಮತ್ತು ಚಿಂಚೋಳಿ ಚುನಾವಣೆಯ ಗೆಲುವಿನ ಕುರಿತು ಯೋಜನೆ ರೂಪಿಸಿದ್ದರು.

ಆ ಯೋಜನೆಯಂತೆ ಕೈ ನಾಯಕರು ಚುನಾವಣೆ ಎದುರಿಸುತ್ತಿದ್ದಾರೆ.ಇದಕ್ಕೆ ಪ್ರತಿತಂತ್ರ ರೂಪಿಸಿ ಕಮಲ ಪಾಳೆಯದ ನಾಯಕರು ಇಂದು ಮಹತ್ವದ ಚರ್ಚೆ ನಡೆಸಿದರು.ನಂತರ ಕುಂದಗೋಳದ ಶಿವಾನಂದ ಮಠದಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಸಿ ಕ್ಷೇತ್ರವನ್ನು ಶತಾಯಗತಾಯ ಗೆಲ್ಲಲೇ ಬೇಕು ಎಂಬ ಸೂಚನೆ ರವಾನಿಸಿದರು.

ಬಿಜೆಪಿಯ ಪ್ರತಿತಂತ್ರ;
ಪ್ರತಿ ಮನೆ ಮನೆಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಗಳು ಬಗ್ಗೆ ಜಾಗೃತಿ, ಹಿಂದುಳಿದ ವರ್ಗಗಳ ನಾಯಕರಿಂದ ಮತಯಾಚನೆ, ಆಯಾ ಜಾತಿಗಳ, ವರ್ಗಗಳ ಮುಖಂಡರಿಂದ ಪ್ರದೇಶವಾರು ಮತ್ತು ಜಾತಿವಾರು ಮತಯಾಚನೆ ಮಾಡುವ ಮೂಲಕ ಕುಂದಗೋಳ ಮತ್ತು ಚಿಂಚೋಳಿ ಉಪ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದು ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ