ರೈಲು ವಿಳಂಬ ಹಿನ್ನಲೆ-ವೈದ್ಯರಾಗಬೇಕೆಂಬ ಸಾವಿರಾರು ವಿದ್ಯಾರ್ಥಿಗಳ ಆಸೆ ನಿರಾಸೆ

ಬೆಂಗಳೂರು, ಮೇ 5-ಪಿಯುಸಿ ನಂತರದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಶಿಕ್ಷಣ ಕೋರ್ಸ್ ಮಾಡಿ ವೈದ್ಯರಾಗಬೇಕೆಂಬ ಸಾವಿರಾರುವ ವಿದ್ಯಾರ್ಥಿಗಳ ಆಸೆಗೆ ರೈಲ್ವೆ ಇಲಾಖೆ ಹಾಗೂ ರಾಷ್ಟ್ರೀಯಪರೀಕ್ಷಾ ಪ್ರಾಧಿಕಾರ ಬೆಂಕಿಯಿಟ್ಟಿದೆ.

ದಿಢೀರ್ ಪರೀಕ್ಷಾ ಕೇಂದ್ರಗಳ ಬದಲಾವಣೆ ಹಾಗೂ ಹಂಪಿ ಎಕ್ಸ್‍ಪ್ರೆಸ್ ಸೇರಿ ಎರಡು ರೈಲಗಳ ವಿಳಂಬದಿಂದಾಗಿ ಇಂದು ನಡೆದ ನೀಟ್ ಪರೀಕ್ಷೆಯನ್ನು ಬರೆಯಲಾಗದೆ ಬಹಳಷ್ಟು ಸಾವಿರಾರುವ ವಿದ್ಯಾರ್ಥಿಗಳು ಅಮೂಲ್ಯ ಅವಕಾಶವನ್ನು ಕಳೆದುಕೊಂಡಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿ ನಡವಳಿಕೆಗೆ ವಿದ್ಯಾರ್ಥಿಗಳ ಜತೆ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈಲು ವಿಳಂಬ:
ಇಂದು ಮಧ್ಯಾಹ್ನ 2ರಿಂದ ಸಂಜೆ 5 ಗಂಟೆವರೆಗೂ ನೀಟ್ ಪರೀಕ್ಷೆ ನಡೆಯುತ್ತಿದ್ದು, ಸಾವಿರಾರು ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದ ಕೋರ್ಸ್‍ನ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆದು ಸೀಟು ಗಿಟ್ಟಿಸುವ ಕನಸಿನೊಂದಿಗೆ ಇಂದು ಪರೀಕ್ಷೆಗೆ ಹಾಜರಾಗಲು ಆಗಮಿಸಿದ್ದರು.

ನಿನ್ನೆ ರಾತ್ರಿ 10 ಗಂಟೆಗೆಹುಬ್ಬಳ್ಳಿಯಿಂದಹೊರಟ 16591ಹಂಪಿ ಎಕ್ಸ್‍ಪ್ರೆಸ್ ರೈಲು ಇಂದು ಬೆಳಗ್ಗೆ 6ಗಂಟೆಗೆ ಬೆಂಗಳೂರು ತಲುಪಬೇಕಿತ್ತು.ಆದರೆ ತಲುಪಿದ್ದು 2.30ಕ್ಕೆ.ಈ ರೈಲಿನಲ್ಲಿ ಹೈದರಾಬಾದ್ ಕರ್ನಾಟಕ ಭಾಗದ ಬಳ್ಳಾರಿ, ಕೊಪ್ಪಳ, ಹೊಸಪೇಟೆ ಸೇರಿದಂತೆ ಇತರ ಭಾಗಗಳ900ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆಯಲು ಬೆಂಗಳೂರಿನತ್ತ ಪ್ರಯಾಣಿಸುತ್ತಿದ್ದರು.ಆದರೆ, ರೈಲು ನಿಗದಿತ ಸಮಯಕ್ಕಿಂತಲೂ 8 ಗಂಟೆ ವಿಳಂಬವಾಗಿ ಬೆಂಗಳೂರು ತಲುಪಿದ್ದರಿಂದ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ.

ಮಾರ್ಗ ಬದಲಾವಣೆ, ನಿಧಾನಗತಿಯ ಚಲನೆ ಮತ್ತು ಪ್ರಯಾಣಿಕರ ರೈಲಿಗೆ ತಡೆ ನೀಡಿ, ಸರಕು ಸಾಗಾಣಿಕೆ ರೈಲು ಚಲಿಸಲು ಅವಕಾಶ ನೀಡಿದ್ದರಿಂದ ರೈಲು ಪ್ರಯಾಣ ವಿಳಂಬಕ್ಕೆ ಪ್ರಮುಖ ಕಾರಣ ಎಂದು ಆರೋಪಿಸಲಾಗಿದೆ.

ಸಾಮಾನ್ಯವಾಗಿ ಹುಬ್ಬಳ್ಳಿಯಿಂದ ಗುಂತಕಲ್-ಅನಂತಪುರ ಮಾರ್ಗವಾಗಿ ಬೆಂಗಳೂರು ತಲುಪುವ ರೈಲನ್ನು ಇದ್ದಕ್ಕಿದ್ದ ಹಾಗೆ ಮಾರ್ಗ ಬದಲಾವಣೆ ಮಾಡಿ ಚಿತ್ರದುರ್ಗ, ಹಿರಿಯೂರು, ಬೀರೂರು, ಅರಸೀಕೆರೆ ಮಾರ್ಗವಾಗಿ ಬಿಡಲಾಗಿದೆ.ಕಡೂರು-ಅರಸೀಕೆರೆ ಮಾರ್ಗ ಮಧ್ಯೆ ಲೆವೆಲ್ ಕ್ರಾಸಿಂಗ್‍ಗಾಗಿ ಸುಮಾರು 45 ನಿಮಿಷ ರೈಲನ್ನು ನಿಲ್ಲಿಸಲಾಗಿತ್ತು ಎಂದು ಆರೋಪಿಸಲಾಗಿದೆ.

ನೀಟ್ ಪರೀಕ್ಷೆ ತೆಗೆದುಕೊಂಡ ವಿದ್ಯಾರ್ಥಿಗಳು ಮಧ್ಯಾಹ್ನ 12.30ಕೆಪರೀಕ್ಷಾ ಕೇಂದ್ರದಲ್ಲಿ ವರದಿ ಮಾಡಿಕೊಳ್ಳಬೇಕಿತ್ತು.ಮಧ್ಯಾಹ್ನ 1.30ಕ್ಕೆ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಉತ್ತರ ಪತ್ರಿಕೆಗಳನ್ನು ಹಂಚಲಾಗುತ್ತದೆ, 2 ಗಂಟೆಗೆ ಪ್ರಶ್ನೆ ಪತ್ರಿಕೆಗಳನ್ನು ನೀಡಲಾಗಿದೆ.ಆನಂತರ ಬಂದ ಯಾವುದೇ ವಿದ್ಯಾರ್ಥಿಗಳಿಗೂ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಲಾಗುವುದಿಲ್ಲ.

ಬೆಳಗ್ಗೆ 11.30 ಗಂಟೆಯಾದರೂ ಹಂಪಿ ಎಕ್ಸ್ ಪ್ರೆಸ್ ಹಿರಿಯೂರು ತಲುಪಿರಲಿಲ್ಲ. ಕೆಲವು ಪೋಷಕರು ರೈಲು ಪ್ರಯಾಣ ವಿಳಂಬವಾಗುವುದನ್ನು ಅರಿತು ಬಳ್ಳಾರಿ, ಹಿರಿಯೂರು ನಿಲ್ದಾಣಗಳಲ್ಲಿ ಇಳಿದು ಅಲ್ಲಿಂದ ಖಾಸಗಿ ವಾಹನಗಳಪರೀಕ್ಷಾ ಕೇಂದ್ರ ತಲುಪುವ ಪ್ರಯತ್ನ ಮಾಡಿದ ಸಂಚಾರ ದಟ್ಟಣೆಯಿಂದಾಗಿ ಅದು ಸಾಧ್ಯವಾಗಿಲ್ಲ. ನಿಗದಿತ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ಬರಲಾಗದೆ ತಮ್ಮ ಕನಸನ್ನು ನುಚ್ಚು ನೂರು ಮಾಡಿಕೊಂಡ ವಿದ್ಯಾರ್ಥಿಗಳ ಗೋಳು ಹೇಳತೀರದಾಗಿತ್ತು.

ರೈಲು ವಿಳಂಬದಿಂದ ತೊಂದರೆಯಾಗಿದೆ. ಪರೀಕ್ಷೆಯನ್ನು ಒಂದು ಗಂಟೆ ಮುಂದೂಡಿ ಎಂದು ಪೋಷಕರು ಹಾಗೂ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಧಾನಿ ಸೇರಿದಂತೆ ಕೇಂದ್ರ ಸರ್ಕಾರದ ಸಚಿವಾಲಯದ ಅಧಿಕಾರಿಗಳನ್ನು ಅಂಗಲಾಚಿ ಬೇಡಿಕೊಂಡಿದ್ದಾರೆ.

ಪರೀಕ್ಷೆಯ ಮಹತ್ವ ಅರ್ಥ ಮಾಡಿಕೊಳ್ಳದ ರೈಲ್ವೆ ಇಲಾಖೆ ಅಧಿಕಾರಿಗಳು ಸರಕು ಸಾಗಾಣಿಕೆಯ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟು. ಹಂಪಿ ಎಕ್ಸ್‍ಪ್ರೆಸ್ ಮತ್ತು ರಾಣಿ ಚೆನ್ನಮ್ಮ ರೈಲುಗಿಳಿಗೆ ಅಲ್ಲಲ್ಲಿ ರೈಲು ನಿಲುಗಡೆ ನೀಡಿ ಮಾಡಿ ಅನಗತ್ಯ ವಿಳಂಬ ಮಾಡಿದರು ಎಂದು ವಿದ್ಯಾರ್ಥಿ ಕಾರ್ತಿಕ್‍ನಾಯ್ಡು ಅವರ ತಂದೆ ಹೊಸಪೇಟೆಯ ರಾಘವೇಂದ್ರಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈಲಿನಲ್ಲಿದ್ದ ಕೆಲವು ವಿದ್ಯಾರ್ಥಿಗಳು ರೈಲ್ವೆ ಅಧಿಕಾರಿಗಳನ್ನು ಸಂಪರ್ಕಿಸಿ ಪರೀಕ್ಷೆ ಇರುವುದರಿಂದ ನಮ್ಮನ್ನು ಬೇಗ ಬೆಂಗಳೂರಿಗೆ ತಲುಪಿಸುವಂತೆ ಕಾಲು ಹಿಡಿದು ಬೇಡಿಕೊಂಡರೂ ಅಧಿಕಾರಿಗಳ ಮನಸ್ಸು ಕರಗಲಿಲ್ಲ. ಅವರ ಮಕ್ಕಳಿಗೆ ಇದೇ ಪರಿಸ್ಥಿತಿ ಬಂದಿದ್ದರೆ ಅಧಿಕಾರಿಗಳು ಏನು ಮಾಡುತ್ತಿದ್ದರು ಎಂದು ಅವರು ಪ್ರಶ್ನಿಸಿದ್ದಾರೆ.

ಪೋಷಕರ ಜತೆ ಬಂದ ಕೆಲ ವಿದ್ಯಾರ್ಥಿಗಳು ಅರ್ಧದಲ್ಲೇ ಇಳಿದು ಖಾಸಗಿ ವಾಹನದ ಮೂಲಕ ಬೆಂಗಳೂರಿಗೆ ಬರುವ ಪ್ರಯತ್ನ ಮಾಡಿದ್ದಾರೆ. ಆದರೂ ಸಾಧ್ಯವಾಗಿಲ್ಲ. ಪೋಷಕರಿಲ್ಲದ ವಿದ್ಯಾರ್ಥಿಗಳ ಗೋಳಂತು ಮನಕಲಕುವಂತಿತ್ತು.

ರೈಲ್ವೆ ಕಾಮಗಾರಿಯ ಕಾರಣದಿಂದಾಗಿ ಹಂಪಿ ಎಕ್ಸ್‍ಪ್ರೆಸ್‍ನ ಮಾರ್ಗ ಬದಲಾವಣೆ ಮಾಡಲಾಗಿತ್ತು. ರೈಲು ವಿಳಂಬವಾಗಿ ಬೆಂಗಳೂರು ತಲುಪಲಿದೆ ಎಂದು ಈ ಮೊದಲೇ ಟಿಕೆಟ್ ಕಾಯ್ದಿರಿಸಿದ್ದವರಿಗೆ ಮಾಹಿತಿ ನೀಡಲಾಗಿತ್ತು ಎಂದು ರೈಲ್ವೆ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.

ಪರೀಕ್ಷಾ ಕೇಂದ್ರ ಬದಲಾವಣೆ:
ರೈಲು ವಿಳಂಬದ ಸಮಸ್ಯೆ ಒಂದು ಕಡೆಯಾದರೆ, ಮತ್ತೊಂದು ಕಡೆ ಪರೀಕ್ಷಾ ಕೇಂದ್ರಗಳನ್ನು ಬದಲಾವಣೆ ಮಾಡಿ ಗೊಂದಲ ಸೃಷ್ಟಿಸಲಾಗಿದೆ.

ರಾಜ್ಯದಲ್ಲಿ ಮೈಸೂರು, ಕಲಬುರ್ಗಿ, ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ದಾವಣಗೆರೆ, ಮಂಗಳೂರು, ಉಡುಪಿ ಹಾಗೂ ಬೆಂಗಳೂರು ನಗರಗಳ ವಿವಿಧ ಕಾಲೇಜುಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಆಯೋಜಿಸಲಾಗಿತ್ತು.

ಅದರಲ್ಲಿ ಕಲಬುರ್ಗಿ, ಬೆಂಗಳೂರು ಹಾಗೂ ಮೈಸೂರಿನ ಪರೀಕ್ಷಾ ಕೇಂದ್ರಗಳನ್ನು ಕಳೆದ ಎರಡು ದಿನಗಳ ಹಿಂದೆ ಬದಲಾವಣೆ ಮಾಡಲಾಗಿದೆ.ಆದರೆ, ಈ ಬಗ್ಗೆ ವಿದ್ಯಾರ್ಥಿಗಳಿಗೆ ಸೂಕ್ತ ಮಾಹಿತಿ ತಲುಪಿಲ್ಲ ಎಂಬ ಆಕ್ರೋಶ ಕೇಳಿ ಬಂದಿದೆ.

ಬೆಂಗಳೂರಿನ ಯಲಹಂಕ ಅವಲಹಳ್ಳಿಯ ಪ್ರೆಸಿಡೆನ್ಸಿ ಶಾಲೆಯ ಪರೀಕ್ಷಾ ಕೇಂದ್ರವನ್ನು ಕೂಡ್ಲುಗೇಟ್ ಬಳಿಯ ಹೊಸೂರು ಮುಖ್ಯರಸ್ತೆಯಲ್ಲಿರುವ ದಯಾನಂದ ಸಾಗರ ಇಂಜಿನಿಯರಿಂಗ್ ಕಾಲೇಜಿಗೆ ಬದಲಾವಣೆ ಮಾಡಲಾಗಿತ್ತು.

ಕಲಬುರ್ಗಿಯ ಎಸ್‍ಬಿಆರ್ ಪಿಯು ಕಾಲೇಜಿನ ಎರಡು ಪರೀಕ್ಷಾ ಕೇಂದ್ರಗಳನ್ನು ಏಕಾಏಕಿ ಬದಲಾವಣೆ ಮಾಡಿ, ಸೆಂಟ್‍ಗ್ಸೇವಿಯರ್ ಪಿಯು ಕಾಲೇಜು ಹಾಗೂ ನೂತನ್ ವಿದ್ಯಾಲಯಕ್ಕೆ ಸ್ಥಳಾಂತರಿಸಲಾಗಿತ್ತು.

ಮೈಸೂರಿನ ಕೇಂದ್ರೀಯ ವಿದ್ಯಾಲಯ ಶಾಲೆಯ ಪರೀಕ್ಷಾ ಕೇಂದ್ರವನ್ನು ಅದೇ ಶಾಲೆಯ ಆವರಣದಲ್ಲಿರುವ ಹೊಸ ಪರೀಕ್ಷಾ ಕೇಂದ್ರಕ್ಕೆ ವರ್ಗಾಯಿಸಲಾಗಿತ್ತು.

ಬದಲಾವಣೆಯಾದ ಕೆಲವು ಪರೀಕ್ಷಾ ಕೇಂದ್ರಗಳು ಬಹಳಷ್ಟು ಅಂತರ ದೂರ ಇದ್ದುದರಿಂದ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸಿದ್ದಲ್ಲದೆ, ಮಾಹಿತಿ ಇಲ್ಲದ ವಿದ್ಯಾರ್ಥಿಗಳು ತಡವಾಗಿ ಬಂದು ಸಮಯ ಅಭಾವದ ಒತ್ತಡಕ್ಕೆ ಒಳಗಾದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ