ಪ್ರಧಾನಿ ಮೋದಿ ವಿರುದ್ಧ ಮಾತನಾಡಿದ್ದಕ್ಕೆ ನನ್ನ ಮೇಲೆ ಹಲ್ಲೆ ನಡೆಸಲಾಯಿತು; ಸಿಎಂ ಕೇಜ್ರಿವಾಲ್ ದೂರು

ನವದೆಹಲಿ: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡಿದರೆ ಅವರನ್ನು ಶಿಕ್ಷಿಸಲಾಗುತ್ತದೆ. ಈ ಸಂದೇಶವನ್ನು ರವಾನಿಸಲೆಂದೇ ಯುವಕನನ್ನು ಕಳುಹಿಸಿ ನನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ವಿರುದ್ಧ ಮಾತನಾಡುವವರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ಇದೊಂದು ರೀತಿಯಲ್ಲಿ ಸರ್ವಾಧಿಕಾರಿ ಧೋರಣೆಯಾಗಿದೆ. ಆದರೆ ಹಲ್ಲೆ ನಡೆಸುವುದರಿಂದ ನನ್ನ ಧ್ವನಿಯನ್ನಾಗಲಿ ಅಥವಾ ನನ್ನ ಸ್ಥೈರ್ಯವನ್ನಾಗಲಿ ಕುಗ್ಗಿಸಲಾಗದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೆಹಲಿಯ ಮೋತಿ ನಗರದಲ್ಲಿ ಶನಿವಾರ ಚುನಾವಣಾ ಪ್ರಚಾರ ನಿಮಿತ್ತ ರೋಡ್​ ಶೋ ನಡೆಸುತ್ತಿದ್ದ ಅರವಿಂದ ಕೇಜ್ರಿವಾಲ್​ ಅವರಿಗೆ ಯುವಕನೊಬ್ಬ ಕಪಾಳ ಮೋಕ್ಷ ಮಾಡಿದ್ದ. ಈ ದಾಳಿ ನಡೆಸಿದ್ದ ಸುರೇಶ್​ ಚವ್ಹಾಣ್​ ಎಂಬಾತನನ್ನು ವಶಕ್ಕೆ ಪಡೆದಿರುವ ದೆಹಲಿ ಪೊಲೀಸರು ಆತನ ವಿರುದ್ಧ ಎಫ್​ಐಆರ್​ ದಾಖಲಿಸಿದ್ದಾರೆ.

ಮೋತಿ ನಗರದಲ್ಲಿ ಆದ ದಾಳಿ ಕಳೆದ 5 ವರ್ಷಗಳಲ್ಲಿ ಆದ 9ನೇ ದಾಳಿ ಎಂದು ಕೇಜ್ರಿವಾಲ್​ ಹೇಳಿದ್ದಾರೆ. ದೆಹಲಿ ಸಿಎಂ ಆದ ನಂತರದಲ್ಲಿ ನಡೆದಿರುವ 5ನೇ ದಾಳಿ ಇದಾಗಿದೆ. ದೆಹಲಿ ಸಿಎಂ ಭದ್ರತೆ ವಿಷಯ ಕೇಂದ್ರದ ಕೈಯಲ್ಲಿ ಇರುವುದೇ ತಮ್ಮ ಮೇಲೆ ದಾಳಿಗಳಾಗಲು ಕಾರಣ ಎಂದು ದೂರಿದ್ದಾರೆ.

Attacks will not kill my voice or my spirit, says Arvind Kejriwal

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ