ಡಬ್ಲಿಂಗ್ ಕಾಮಗಾರಿ ಹಿನ್ನಲೆ ಹಂಪಿ ಎಕ್ಸಪ್ರೆಸ್ ಮಾರ್ಗ ಬದಲಾವಣೆ

ಬೆಂಗಳೂರು, ಮೇ 5-ಗುಂತಕಲ್ಲು ರೈಲ್ವೆ ವಿಭಾಗದಲ್ಲಿ ಡಬ್ಲಿಂಗ್ ಕಾಮಗಾರಿಯಿಂದಾಗಿ ಮಾರ್ಗ ಬದಲಾವಣೆಯಾಗಿದ್ದು, ಹಂಪಿ ಎಕ್ಸ್‍ಪ್ರೆಸ್ ವಿಳಂಬವಾಗಿ ಬೆಂಗಳೂರು ತಲುಪುವಂತಾಗಿದೆ ಎಂದು ರೈಲ್ವೆ ಇಲಾಖೆ ಸ್ಪಷ್ಟನೆ ನೀಡಿದೆ.

ಹುಬ್ಬಳ್ಳಿ-ಮೈಸೂರು ನಡುವಿನ ಹಂಪಿ ಎಕ್ಸ್‍ಪ್ರೆಸ್ ಬೆಳಗ್ಗೆ 6.20ಕ್ಕೆ ಬೆಂಗಳೂರಿಗೆ ತಲುಪಬೇಕಿತ್ತು. ಆದರೆ ಮಾರ್ಗಬದಲಾವಣೆಯಿಂದಾಗಿ ಎರಡು ಗಂಟೆ ವಿಳಂಬವಾಗಿ ಬೆಳಗ್ಗೆ 8.20ಕ್ಕೆ ಬಂದು ತಲುಪಲಿದೆ ಎಂಬ ನಿರೀಕ್ಷೆ ಇತ್ತು.ನಿರೀಕ್ಷೆಗೂ ಮೀರಿ ರೈಲು ಪ್ರಯಾಣ ವಿಳಂಬವಾಗಿದ್ದು, ಬೆಳಗ್ಗೆ 2.30ರ ವೇಳೆಗೆ ಬೆಂಗಳೂರಿಗೆ ಆಗಮಿಸಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಸಾಮಾನ್ಯವಾಗಿ ಬಳ್ಳಾರಿ, ಗುಂತಕಲ್, ಧರ್ಮಾವರಂ, ಪೆನಗೊಂಡ, ಯಲಹಂಕ ಮೂಲಕವಾಗಿ ಬೆಂಗಳೂರು ತಲುಪಬೇಕಿತ್ತು.ಅಲ್ಲಿ ಗುಂತಕಲ್-ಕಲ್ಲೂರು ನಡುವೆ ಡಬ್ಲಿಂಗ್ ಕಾಮಗಾರಿ ನಡೆಯುತ್ತಿರುವುದರಿಂದ ಬಳ್ಳಾರಿ ಬಳಿ ಮಾರ್ಗ ಬದಲಾವಣೆಯಾಗಿ ರಾಯದುರ್ಗ, ಚಿಕ್ಕಜಾಜೂರು, ಅರಸೀಕೆರೆ, ತುಮಕೂರು ಮಾರ್ಗವಾಗಿ ಬೆಂಗಳೂರು ತಲುಪಿದೆ. ಸುಮಾರು 120 ಕಿಲೋಮೀಟರ್ ದೂರ ಹೆಚ್ಚಾಗಿದ್ದರಿಂದ ರೈಲು ಪ್ರಯಾಣ ವಿಳಂಬವಾಗಿದೆ.

ರೈಲು ವಿಳಂಬದ ಬಗ್ಗೆ ಈಗಾಗಲೇ ಟಿಕೆಟ್ ಮುಂಗಡ ಕಾಯ್ದಿರಿಸಿದವರಿಗೆ ಎಸ್‍ಎಂಎಸ್ ಮೂಲಕ ಮಾಹಿತಿ ನೀಡಲಾಗಿತ್ತು ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿ ಅಶೋಕ್‍ಕುಮಾರ್ ವರ್ಮಾ ಪತ್ರಿಕೆಗೆ ತಿಳಿಸಿದ್ದಾರೆ.

ರೈಲು ವಿಳಂಬದ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸ್ವಲ್ಪ ದಿನ ಸರಿಯಾಗಿ ಕೆಲಸ ಮಾಡಿ. ಆಮೇಲೆ ನಾವು ಅಧಿಕಾರಕ್ಕೆ ಬರುತ್ತೇವೆ. ಎಲ್ಲವನ್ನು ಸರಿ ಮಾಡುತ್ತೇವೆ ಎಂದು ಪ್ರಧಾನಿನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಟ್ವೀಟರ್ ಮೂಲಕ ಹೇಳಿದ್ದಾರೆ.

ಹಂಪಿ ಎಕ್ಸ್‍ಪ್ರೆಸ್ ರೈಲು ವಿಳಂಬದಿಂದ ತೊಂದರೆಗೀಡಾಗಿರುವ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆ ಬರೆಯಲು ಮತ್ತೊಂದು ಅವಕಾಶ ನೀಡಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಇತರರ ಸಲಹೆಗಳನ್ನು ತಮ್ಮದೆಂದು ಬಿಂಬಿಸಿಕೊಂಡು ಹೆಸರು ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಅದೇ ರೀತಿ ಅವರ ಸಂಪುಟದ ಸಚಿವರುಗಳ ಅಸಮರ್ಥತೆಯಿಂದಾಗುವ ಅನಾಹುತಗಳ ಹೊಣೆಯನ್ನು ಹೊತ್ತುಕೊಳ್ಳಬೇಕೆಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ