ಬೆಂಗಳೂರು, ಮೇ 4-ಉಪಚುನಾವಣೆ ನಡೆಯುತ್ತಿರುವ ಕುಂದಗೋಳ ಮತ್ತು ಚಿಂಚೋಳಿ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕರು, ಕ್ಷೇತ್ರಗಳಲ್ಲೇ ಬಿಡಾರ ಹೂಡಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.
ಎರಡೂ ಕ್ಷೇತ್ರಗಳು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಾಗಿದ್ದವು. ಅವುಗಳನ್ನು ಉಳಿಸಿಕೊಳ್ಳುವ ಮೂಲಕ ಸಮ್ಮಿಶ್ರ ಸರ್ಕಾರದ ಸಂಖ್ಯಾಬಲವನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳುವುದು ಕಾಂಗ್ರೆಸ್ಗೆ ಅನಿವಾರ್ಯವಾಗಿದೆ. ಹೀಗಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಕುಂದಗೋಳ ಕ್ಷೇತ್ರದಲ್ಲಿ ಬಿಡಾರ ಹೂಡಿದರೆ, ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ಖರ್ಗೆ ಸೇರಿದಂತೆ ಮತ್ತಿತರರು ಚಿಂಚೋಳಿಯಲ್ಲಿ ಬಿಡಾರ ಹೂಡಿದ್ದಾರೆ.
ನಿನ್ನೆ ಕುಂದಗೋಳದಲ್ಲಿ ಭರ್ಜರಿ ರೋಡ್ಶೋಗಳನ್ನು, ಬಹಿರಂಗ ಸಭೆಗಳನ್ನು ನಡೆಸಲಾಗಿದೆ. ಚಿಂಚೋಳಿ ಕ್ಷೇತ್ರದಲ್ಲಿ ಇನ್ನು ಚುನಾವಣೆಯ ಕಾವು ತೀವ್ರಗೊಂಡಿಲ್ಲ. ಏಕಕಾಲಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಎದುರಾಗಿರುವುದರಿಂದ ಪ್ರಭಾವಿ ನಾಯಕರು ತಮ್ಮ ಕ್ಷೇತ್ರದಲ್ಲಿ ಸ್ಥಳೀಯ ನಾಯಕರನ್ನು ಗುರುತಿಸಿ ಟಿಕೆಟ್ ನೀಡುವ ಚಡಪಡಿಕೆಯಲ್ಲಿದ್ದಾರೆ.
ಸ್ಥಳೀಯ ನಾಯಕತ್ವವನ್ನು ನಿರ್ಲಕ್ಷಿಸಿದರೆ, ಮುಂದಿನ ಚುನಾವಣೆಯಲ್ಲಿ ತಮ್ಮ ರಾಜಕೀಯ ಭವಿಷ್ಯವೇ ಅತಂತ್ರವಾಗಲಿದೆ ಎಂಬ ಆತಂಕದಿಂದ ಒಂದು ಕಡೆ ಪ್ರಭಾವಿ ನಾಯಕರುಗಳಿಗೆ ಉಪಚುನಾವಣೆ ಮೇಲೆಯೂ ಆಸೆ, ಸ್ಥಳೀಯ ಸಂಸ್ಥೆ ಚುನಾವಣೆ ಮೇಲೂ ಪ್ರೀತಿ ಎಂಬಂತಾಗಿದೆ.
ಈ ಡೋಲಾಯಮಾನದ ನಡುವೆಯೂ ಪ್ರಮುಖ ನಾಯಕರು ಉಪಚುನಾವಣಾ ಕಣದಲ್ಲಿ ಭಾರೀ ಪ್ರಚಾರ ನಡೆಸುತ್ತಿದ್ದಾರೆ.