ಗೃಹ ಸಚಿವ ಎಂ.ಬಿ.ಪಾಟೀಲ್ ಅವರಿಂದ ಅಧಿಕಾರ ದುರುಪಯೋಗ

ಬೆಂಗಳೂರು, ಮೇ 4-ಅಧಿಕಾರ ದುರುಪಯೋಗ ಪಡಿಸಿಕೊಂಡು ಬಿಜೆಪಿ ಕಾರ್ಯಕರ್ತರನ್ನು ಬಂಧಿಸುವುದನ್ನು ತಕ್ಷಣವೇ ಗೃಹ ಸಚಿವ ಎಂ.ಬಿ.ಪಾಟೀಲ್ ನಿಲ್ಲಿಸಬೇಕು. ಇಲ್ಲದಿದ್ದರೆ ಅವರ ವಿರುದ್ಧ ರಾಜ್ಯಪಾಲರಿಗೆ ದೂರು ಕೊಡಲಾಗುವುದು ಎಂದು ವಿಧಾನಪರಿಷತ್‍ನ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಎಂ.ಬಿ.ಪಾಟೀಲ್ ಕಳೆದ ಒಂದು ತಿಂಗಳಿನಿಂದ ಬಿಜೆಪಿ ಕಾರ್ಯಕರ್ತರು ಹಾಗೂ ಬಲಪಂಥೀಯ ಬೆಂಬಲಿತ ಪತ್ರಕರ್ತರನ್ನು ಗುರಿಯಾಗಿಟ್ಟುಕೊಂಡು ಪೊಲೀಸರ ಮೂಲಕ ಬಂಧಿಸುವಂತಹ ಹೀನ ಕೃತ್ಯಕ್ಕೆ ಕೈ ಹಾಕಿದ್ದಾರೆ. ಕೂಡಲೇ ತಮ್ಮ ತಪ್ಪನ್ನು ತಿದ್ದಿಕೊಳ್ಳಬೇಕು. ಇಲ್ಲದಿದ್ದರೆ ರಾಜ್ಯಪಾಲರಿಗೆ ದೂರು ನೀಡುವ ಜೊತೆಗೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂ.ಬಿ.ಪಾಟೀಲ್ ಗೃಹ ಸಚಿವರಾಗಿದ್ದ ವೇಳೆ ನಮಗೆ ಅಪಾರವಾದ ನಿರೀಕ್ಷೆ ಇತ್ತು. ಪೊಲೀಸ್, ಗೃಹ ಇಲಾಖೆಯನ್ನು ಸುಧಾರಣೆ ಮಾಡುವುದರ ಜೊತೆಗೆ ಪೊಲೀಸರ ವೇತನ ಪರಿಷ್ಕರಣೆ ಮಾಡುವ ರಾಘವೇಂದ್ರ ಔರಾದ್ಕರ್ ವರದಿಯನ್ನು ಅನುಷ್ಠಾನ ಮಾಡುತ್ತಾರೆಂದು ನಿರೀಕ್ಷೆ ಮಾಡಿದ್ದೆವು. ಆದರೆ ಇವರು ಮಾಡಬೇಕಾದ ಕೆಲಸ ಬಿಟ್ಟು ತಮ್ಮ ವಿರುದ್ಧ ಧ್ವನಿ ಎತ್ತಿದವರನ್ನು ಅಡಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಕರಾವಳಿ ಜಿಲ್ಲೆಯಲ್ಲಿ ಬಂಧಿಸಿರುವ ಬಿಜೆಪಿ ಕಾರ್ಯಕರ್ತರು ಹಾಗೂ ಬಲಪಂಥೀಯ ಬೆಂಬಲಿತ ಪತ್ರಕರ್ತರು ಯಾವ ತಪ್ಪು ಮಾಡದಿದ್ದರೂ ಬಂಧಿಸಿ ಜೈಲಿಗಟ್ಟಿದ್ದಾರೆ. ರಾಜ್ಯದ ನಾನಾ ಕಡೆ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ. ಅಂತವರ ಮೇಲೆ ನೀವು ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.

ನಿಮ್ಮ ರಾಜೀನಾಮೆ ಕೇಳುವಂತಹ ಪರಿಸ್ಥಿತಿ ಬಂದಿಲ್ಲ. ಗೃಹ ಸಚಿವರಾಗಿ ನೀವು ತಪ್ಪುಗಳನ್ನು ತಿದ್ದಿಕೊಳ್ಳುತ್ತೀರಾ ಎಂಬ ನಿರೀಕ್ಷೆ ಇದೆ. 10ರಲ್ಲಿ 11 ಎಂಬಂತೆ ನೀವು ಅದೇ ರೀತಿ ವರ್ತಿಸಿದರೆ ಬಿಜೆಪಿ ಕಾರ್ಯಕರ್ತರು ಬೀದಿಗಿಳಿಯಲಿದ್ದಾರೆ. ಬಂಧಿಸಿರುವವರ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಯಲಿ ಎಂದು ಆಗ್ರಹಿಸಿದರು.

ಬಿಬಿಎಂಪಿ ಅಧಿಕಾರಿಯಾಗಿದ್ದ ಮಥಾಯ್‍ಗೆ ನಾಲ್ಕು ವರ್ಷಗಳಿಂದ ನಿಮ್ಮ ಸರ್ಕಾರ ಸಂಬಳ ಕೊಡಲು ಸಾಧ್ಯವಾಗಿಲ್ಲ. ಎಷ್ಟರಮಟ್ಟಿಗೆ ನಿಮ್ಮ ಸರ್ಕಾರ ನಡೆಯುತ್ತದೆ ಎಂಬುದಕ್ಕೆ ಇದೊಂದು ಘಟನೆ ಸಾಕ್ಷಿ. ಅನಗತ್ಯವಾಗಿ ನಮ್ಮ ಕಾರ್ಯಕರ್ತರನ್ನು ಬಂಧಿಸಿದರೆ ಸುಮ್ಮನಿರುವುದಿಲ್ಲ ಎಂದು ಕೋಟಾ ಶ್ರೀನಿವಾಸ ಪೂಜಾರಿ ಎಚ್ಚರಿಸಿದರು.

ಸ್ವಾಗತ:
ವಿಧಾನಪರಿಷತ್ ಸದಸ್ಯ ಅರುಣ್ ಶಹಾಪುರ್ ಮಾತನಾಡಿ, ಮಕ್ಕಳಿಗೆ ಶಾಲಾಬ್ಯಾಗ್ ಹೊರೆಯಾಗುವುದನ್ನು ತಪ್ಪಿಸಲು ರಾಜ್ಯಸರ್ಕಾರ ತೆಗೆದುಕೊಂಡಿರುವ ಕ್ರಮ ಸ್ವಾಗತಾರ್ಹ. ಹಿಂದೆ ಕೇಂದ್ರ ಮಾನವ ಸಂಪನ್ಮೂಲ ಸಚಿವರಾಗಿದ್ದ ಪ್ರಕಾಶ್ ಜಾವಡೇಕರ್ ಚಿಂತನೆ ಮಾಡಿದ್ದರು.ಆಗ ಕೆಲವು ಕಾರಣಗಳಿಂದ ಸಾಧ್ಯವಾಗಿರಲಿಲ್ಲ.

ಕಡೆ ಪಕ್ಷ ರಾಜ್ಯ ಸರ್ಕಾರ ಈಗಲಾದರೂ ಇಂತಹ ಕ್ರಮಕ್ಕೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.

ಮಕ್ಕಳು ಅನಗತ್ಯವಾಗಿ ಭಾರ ಹೊರುವುದರಿಂದ ಅವರ ದೈಹಿಕ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ ಎಂದು ವೈಜ್ಞಾನಿಕವಾಗಿ ಅಧ್ಯಯನಗಳು ಹೇಳಿವೆ. ಶಿಕ್ಷಕರು ಅನಗತ್ಯವಾಗಿ ಪಠ್ಯ ಚಟುವಟಿಕೆಗಳನ್ನು ನೀಡುವುದರಿಂದ ಭಾರ ಹೊರಬೇಕಾಗಿತ್ತು. ಈಗ ಸರ್ಕಾರ ತೆಗೆದುಕೊಂಡಿರುವ ಕ್ರಮ ಸ್ವಾಗತಾರ್ಹ ಎಂದು ತಿಳಿಸಿದರು.

ಪರೀಕ್ಷಾ ಫಲಿತಾಂಶಗಳಲ್ಲೂ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ರಾಜಕಾರಣ ಬೆರೆಸಿರುವುದು ಅತ್ಯಂತ ಬೇಜವಾಬ್ದಾರಿತನದಿಂದ ಕೂಡಿದೆ.

ಹಾಸನ ಜಿಲ್ಲೆ ಪ್ರಥಮ ಸ್ಥಾನ ಗಳಿಸಲು ಜಿ.ಪಂ.ನ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಕಾರಣ ಎಂದು ರೇವಣ್ಣ ಹೇಳಿರುವುದು ಅತ್ಯಂತ ಕ್ಷುಲ್ಲಕ ವಿಚಾರ. ರಾಜಕೀಯವನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಬೆರೆಸದಂತೆ ಮನವಿ ಮಾಡಿದರು.

ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣಾಧಿಕಾರಿಗಳ ಪರಿಶ್ರಮದಿಂದ ಉತ್ತಮ ಫಲಿತಾಂಶ ಬಂದಿದೆ ಎಂದು ಮುಖ್ಯಮಂತ್ರಿಗಳ ಸಚಿವಾಲಯ ಸ್ಪಷ್ಟನೆ ನೀಡಲು ಮುಂದಾಗಿದ್ದು, ರೇವಣ್ಣನವರು ಅರ್ಥ ಮಾಡಿಕೊಳ್ಳಬೇಕಿತ್ತು. ಆದರೆ ಮೊಂಡು ಹಠಕ್ಕೆ ಬಿದ್ದು ತಮ್ಮ ಹೇಳಿಕೆ ಸಮರ್ಥಿಸಿಕೊಳ್ಳಲು ಮುಂದಾಗಿರುವುದು ಅತ್ಯಂತ ದುರ್ದೈವದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಹಿಂದೆ ಶಿಕ್ಷಣ ಸಚಿವರಾಗಿದ್ದ ತನ್ವೀರ್‍ಸೇಠ್ ಅವರು ರ್ಯಾಂಕಿಂಗ್ ವ್ಯವಸ್ಥೆಯನ್ನು ಕೈಬಿಡಲಾಗುವುದು ಎಂದು ಹೇಳಿದ್ದರು.ಆದರೆ ಪುನಃ ಸರ್ಕಾರ ಅದೇ ವ್ಯವಸ್ಥೆ ಮುಂದುವರೆಸುತ್ತಿರುವುದು ನೋವಿನ ಸಂಗತಿ. ಕಳೆದ ಹಲವು ತಿಂಗಳಿನಿಂದ ಶಿಕ್ಷಣ ಇಲಾಖೆಗೆ ಸಚಿವರಿಲ್ಲದಿರುವುದು ಈ ಸರ್ಕಾರ ಹೇಗೆ ನಡೆಯುತ್ತದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಎಂದು ಶಹಾಪುರ್ ಕುಟುಕಿದರು.

ಪತ್ರಿಕಾಗೋಷ್ಠೀಯಲ್ಲಿ ವಿಧಾನಪರಿಷತ್ ಸದಸ್ಯರಾದ ವಿ.ಎಸ್.ಸಂಕನೂರ, ಲೆಹರ್‍ಸಿಂಗ್ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ