ಇಂದು ಬೆಳಿಗ್ಗೆ ಬಿಬಿಎಂಪಿ ಅಧಿಕಾರಿಗಳ ಕಾರ್ಯಾಚರಣೆ

ಬೆಂಗಳೂರು, ಮೇ 4- ಬೆಳ್ಳಂ ಬೆಳಗ್ಗೆ ಕಾರ್ಯಾಚರಣೆಗಿಳಿದ ಬಿಬಿಎಂಪಿ ಅಧಿಕಾರಿಗಳು ರಸೆಲ್ ಮಾರ್ಕೆಟ್ ಅನಧಿಕೃತ ಒತ್ತುವರಿಯನ್ನು ತೆರವುಗೊಳಿಸಿದರು.

ಹೈಕೋರ್ಟ್ ಆದೇಶದ ಮೇರೆಗೆ ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ ಅವರ ನೇತೃತ್ವದಲ್ಲಿ ಜೆಸಿಬಿ ಯಂತ್ರಗಳೊಂದಿಗೆ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿಗಳು ಒತ್ತುವರಿ ತೆರವು ನಡೆಸಿದರು.

ಸ್ಥಳೀಯ ವ್ಯಾಪಾರಿಗಳು ರಸೆಲ್ ಮಾರುಕಟ್ಟೆ ಸುರಕ್ಷತೆ ದೃಷ್ಟಿಯಿಂದ ಫೈರ್ ಎಂಜಿನ್ ಮತ್ತು ಆ್ಯಂಬುಲೆನ್ಸ್‍ಗಳಿಗೆ ಮೀಸಲಾಗಿಟ್ಟಿದ್ದ ಪ್ರದೇಶದಲ್ಲೂ ಅನಧಿಕೃತ ಮಳಿಗೆಗಳನ್ನು ತೆರೆದು ವ್ಯಾಪಾರ, ವಹಿವಾಟು ನಡೆಸುತ್ತಿದ್ದರು.

ಮಾರುಕಟ್ಟೆಯ ಸುತ್ತ ನಿರ್ಮಿಸಲಾಗಿದ್ದ ಅನಧಿಕೃತ ಮಳಿಗೆಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಯಿತು.

ನ್ಯಾಯಾಲಯದ ಆದೇಶದ ಮೇರೆಗೆ ಈ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದ್ದು , ಭವಿಷ್ಯದಲ್ಲಿ ಯಾವುದೇ ಅನಧಿಕೃತ ಮಳಿಗೆ ತಲೆ ಎತ್ತಲು ಅವಕಾಶ ನೀಡುವುದಿಲ್ಲ ಎಂದು ವಿಶೇಷ ಆಯುಕ್ತ ರವೀಂದ್ರ ಸುದ್ದಿಗಾರರಿಗೆ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ