ಮಂಡ್ಯ : ಮಂಡ್ಯ ಚುನಾವಣೆ ಮುಗಿದು ದಿನಗಳು ಉರುಳಿದರು ಅದರ ಕಾವು ಮಾತ್ರ ಇನ್ನೂ ಆರುವ ಸೂಚನೆಗಳು ಕಾಣಿಸುತ್ತಿಲ್ಲ. ಮಂಡ್ಯದ ಫಲಿತಾಂಶದ ಬಗ್ಗೆ ತೀರಾ ತಲೆ ಕೆಡಿಸಿಕೊಂಡಿರುವ ಸಿಎಂ ಕುಮಾರಸ್ವಾಮಿ ಇದೀಗ ಅಧಿಕಾರಿಗಳಿಗೆ ಮತ್ತೊಂದು ಸುತ್ತಿನ ಸಮೀಕ್ಷೆಗೆ ಆದೇಶಿಸಿದ್ದಾರೆ.
ಎಲ್ಲಾ ಚುನಾವಣೆಯಲ್ಲೂ ಜಾತಿ ಆಧಾರದಲ್ಲಿ ಗೆಲುವಿನ ಲೆಕ್ಕಾಚಾರ ನಡೆಯುವ ಮಂಡ್ಯದ ಕಣದಲ್ಲಿ ಮೊದಲ ಬಾರಿಗೆ ಅಭಿವೃದ್ಧಿ ಹಾಗೂ ಸ್ವಾಭಿಮಾನದ ಹೆಸರಲ್ಲಿ ಚುನಾವಣೆ ನಡೆದಿತ್ತು. ಸ್ವತಂತ್ರ್ಯ ಅಭ್ಯರ್ಥಿ ಸುಮಲತಾ ಅಂಬರೀಶ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಸಾಕಷ್ಟು ಪೈಪೋಟಿ ನೀಡಿದ್ರು ಇದು ಸಾಮಾನ್ಯವಾಗಿ ಕುಮಾರಸ್ವಾಮಿಯವರ ತಲೆ ಕೆಡಿಸಿತ್ತು.
ಇದೇ ಕಾರಣಕ್ಕೆ ಚುನಾವಣೆ ಮುಗಿಯುತ್ತಿದ್ದಂತೆ ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಒಂದು ಸುತ್ತಿನ ಸಮೀಕ್ಷೆ ನಡೆಸಲು ಸೂಚನೆ ನೀಡಿದ್ದರು. ಅದರಂತೆ ಸಮೀಕ್ಷೆ ನಡೆಸಿದ್ದ ಅಧಿಕಾರಿಗಳು ಸಹ ಕಡಿಮೆ ಅಂತರದಲ್ಲಿ ನಿಖಿಲ್ ಗೆಲುವು ಖಚಿತ ಎಂದು ವರದಿ ನೀಡಿದ್ದರು. ಆದರೆ, ಸಿಎಂ ಇಷ್ಟಕ್ಕೆ ಸುಮ್ಮನಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.
ಮಹಿಳಾ ಮತದಾರರ ಸಮೀಕ್ಷೆ : ಇದೇ ಮೊದಲ ಬಾರಿಗೆ ಮಂಡ್ಯದಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಅಧಿಕವಾಗಿತ್ತು. ಅಲ್ಲದೆ ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ್ದರು.
ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯ ಬಹುತೇಕ ಮಹಿಳೆಯರು ಸುಮಲತಾ ಅಂಬರೀಶ್ ಪರ ಒಲವು ತೋರಿಸಿದ್ದರು. ಶೇ.50 ರಷ್ಟು ಮಹಿಳೆಯರು ಸುಮಲತಾ ಪರ ಮತ ಚಲಾಯಿಸಿದ್ದರೂ ಸಹ ಮಂಡ್ಯದಲ್ಲಿ ನಿಖಿಲ್ ಗೆಲುವು ಅಸಾಧ್ಯ. ಏಕೆಂದರೆ ಈಗಾಗಲೆ ಬಿಜೆಪಿ, ರೈತ ಸಂಘ, ರೆಬೆಲ್ ಕಾಂಗ್ರೆಸ್ ನಾಯಕರು ಹಾಗೂ ಜಿಲ್ಲೆಯ ಯುವಕ ಯುವತಿಯರು ಸುಮಲತಾ ಕೈ ಹಿಡಿದ್ದಾರೆ. ಇದು ಸಹ ಕುಮಾರಸ್ವಾಮಿಯವರ ಚಿಂತೆಗೆ ಕಾರಣವಾಗಿದ್ದು, ಇದೇ ಕಾರಣಕ್ಕೆ ಮಹಿಳೆಯರನ್ನು ಆಧರಿಸಿ ಮತ್ತೊಂದು ಸಮೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ಮಹಿಳಾ ಮಣಿಗಳ ನಿರ್ಧಾರ ಏನು ಎಂಬುದರ ಆಧಾರದಲ್ಲಿ ಈ ಬಾರಿ ಮಂಡ್ಯದ ಫಲಿತಾಂಶ ನಿರ್ಧಾರವಾಗಲಿದ್ದು, ಈ ಫಲಿತಾಂಶ ಸಕ್ಕರೆ ನಾಡಿನ ಚುನಾವಣಾ ಇತಿಹಾಸದಲ್ಲಿ ಹೊಸ ಮೈಲುಗಲ್ಲಾದರೂ ಅಚ್ಚರಿ ಇಲ್ಲ.