ಬ್ಯಾಗ್ ತೂಕಕ್ಕೆ ಮಿತಿ; ಬ್ಯಾಗ್ ರಹಿತ ದಿನ; ಶಾಲಾ ಮಕ್ಕಳಿಗೆ ಹೊರೆ ಇಳಿಸಿದ ಸರಕಾರ

ಬೆಂಗಳೂರು: ಶಾಲಾ ಮಕ್ಕಳು ದೊಡ್ಡದೊಡ್ಡ ಬ್ಯಾಗುಗಳನ್ನ ನೇತುಹಾಕಿಕೊಂಡು ಹೋಗುವುದರಿಂದ ಅವರ ಆರೋಗ್ಯಕ್ಕೆ ಬಾಧೆ ಉಂಟಾಗುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು 1ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಬ್ಯಾಗ್ ಭಾರದ ಮೇಲೆ ಮಿತಿ ಏರಿದೆ. ಸರಕಾರಿ ಶಾಲೆ, ಅನುದಾನಮತ್ತು ಅನುದಾನರಹಿತ ಶಾಲೆಗಳಿಗೂ ಈ ನಿಯಮ ಅನ್ವಯವಾಗುತ್ತದೆ.

ತರಗತಿಯ ಅನುಗುಣವಾಗಿ ಸರಕಾರವು ಮಕ್ಕಳಿಗೆ ಬ್ಯಾಗ್ ಭಾರವನ್ನು ನಿಗದಿಪಡಿಸಿದೆ. ಇದರ ಜೊತೆಗೆ ಮಕ್ಕಳು ನೀರಿನ ಬಾಟಲ್ ಒಯ್ಯುವಂತಿಲ್ಲ, ಮಕ್ಕಳು ಬಳಸುವ ನೋಟ್​ಬುಕ್ 100 ಪುಟ ಮೀರುವಂತಿಲ್ಲ. ಬ್ಯಾಗ್ ಕೂಡ ಹೆಚ್ಚು ಭಾರದ್ದಾಗಿರುವಂತಿಲ್ಲ. ಹಗುರವಾದ ಮತ್ತು ಬಾಳಿಕೆ ಬರುವ ಶಾಲಾ ಬ್ಯಾಗ್ ಅನ್ನು ವಿದ್ಯಾರ್ಥಿಗಳಿಗೆ ತೊಡಿಸಬೇಕು ಎಂದು ಸರಕಾರ ತಿಳಿಸಿದೆ.

ಬ್ಯಾಗ್ ಭಾರದ ವಿಚಾರದಲ್ಲಿ ಒಂದರಿಂದ ಹತ್ತನೇ ತರಗತಿಯವರೆಗೆ ಸರಕಾರ ವಿವಿಧ ಮಿತಿಗಳನ್ನ ಹಾಕಿದೆ. 2ನೇ ತರಗತಿಯವರೆಗಿನ ಮಕ್ಕಳ ಬ್ಯಾಗ್ ಹೊರೆ 2 ಕಿಲೋ ಮೀರುವಂತಿಲ್ಲ. ಹಾಗೆಯೇ 9 ಮತ್ತು 10ನೇ ತರಗತಿಯ ಮಕ್ಕಳ ಬ್ಯಾಗ್ ತೂಕ 4-5 ಮಾತ್ರ ಇರಬೇಕು ಎಂಬ ನಿಯಮವನ್ನು ಸರಕಾರ ಮಾಡಿದೆ.

ಕುಡಿಯುವ ನೀರಿನ ಬಾಟಲ್​ಗಳು ಮಕ್ಕಳ ಬೆನ್ನ ಮೇಲಿನ ಹೊರೆಗೆ ಒಂದು ಪ್ರಮುಖ ಕಾರಣವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ನೀರಿನ ಬಾಟಲ್ ಕೊಡುವಂತಿಲ್ಲ. ಶಾಲೆಯಲ್ಲೇ ಪರಿಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಸರಕಾರ ಕ್ರಮ ಕೈಗೊಳ್ಳಲಿದೆ. ಇದರ ಜೊತೆಗೆ, 2ನೇ ತರಗತಿಯವರೆಗಿನ ಮಕ್ಕಳಿಗೆ ಪೋಷಕರು ಯಾವುದೇ ಮನೆಗೆಲಸ ಮಾಡಿಸುವಂತಿಲ್ಲ ಎಂದೂ ಸರಕಾರ ಮಹತ್ವದ ಸೂಚನೆ ನೀಡಿದೆ.

ಸರಕಾರ ಹಾಕಿದ ಮಿತಿಗಳು ಮತ್ತು ನಿಯಮಗಳು:
1-2 ತರಗತಿ ಮಕ್ಕಳ ಬ್ಯಾಗ್ ಭಾರ: 1.5-2 ಕಿಲೋ.
3-5 ತರಗತಿ ಮಕ್ಕಳ ಬ್ಯಾಗ್ ಭಾರ: 2-3 ಕಿಲೋ.
6-8 ತರಗತಿ ಮಕ್ಕಳ ಬ್ಯಾಗ್ ಭಾರ: 3-4 ಕಿಲೋ.
9-10ನೇ ತರಗತಿ ಮಕ್ಕಳ ಬ್ಯಾಗ್ ಭಾರ: 4-5 ಕಿಲೋ.
* 1-2 ತರಗತಿ ಮಕ್ಕಳ ಕೈಯಲ್ಲಿ ಮನೆಗೆಲಸ ಮಾಡಿಸುವಂತಿಲ್ಲ.
* ಮಕ್ಕಳಿಗೆ ನೀರಿನ ಬಾಟಲ್ನ ಹೊರೆ ಬೇಡ; ಶಾಲೆಯಲ್ಲೇ ಶುದ್ಧ ನೀರಿನ ವ್ಯವಸ್ಥೆ ಮಾಡಬೇಕು.
* ವಿದ್ಯಾರ್ಥಿಗಳಿಗೆ ನಾಳೆಯ ವೇಳಾಪಟ್ಟಿಯನ್ನು ಮುಂಚಿತವಾಗಿ ತಿಳಿಸಬೇಕು. ಅದಕ್ಕೆ ಅನುಗುಣವಾಗಿ ಮಾತ್ರ ಮಕ್ಕಳು ಪುಸ್ತಕಗಳನ್ನ ತರುವಂತಾಗಬೇಕು.
* ಕಡಿಮೆ ಖರ್ಚಿನ, ಹಗುರವಾದ ಮತ್ತು ಬಾಳಿಕೆ ಬರುವ ಶಾಲಾ ಬ್ಯಾಗ್​ಗೆ ಉತ್ತೇಜನ ನೀಡಬೇಕು.
* ವಿದ್ಯಾರ್ಥಿಗಳಲ್ಲಿರುವ ನೋಟ್​ಬುಕ್​ನ ಪುಟಗಳ ಸಂಖ್ಯೆ 100 ಮೀರದಂತೆ ನೋಡಿಕೊಳ್ಳಬೇಕು.
* ತಿಂಗಳ 3ನೇ ಶನಿವಾರವನ್ನು ಬ್ಯಾಗ್ ರಹಿತ ದಿನವನ್ನಾಗಿ ಆಚರಿಸಬೇಕು.
* ಹೆಚ್ಚು ಬ್ಯಾಗ್ ಹೊರೆಯಿಂದ ಮಕ್ಕಳಿಗಾಗುವ ದುಷ್ಪರಿಣಾಮದ ಬಗ್ಗೆ ಪೋಷಕರಿಗೆ ಅರಿವು ಮೂಡಿಸುವ ಕೆಲಸವಾಗಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ