ಹವಾಮಾನ ಮುನ್ಸೂಚನೆ ಪ್ರಕಾರ ಇನ್ನೂ ಎರಡು ದಿನ ಮಳೆ

ಬೆಂಗಳೂರು, ಮೇ 1-ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ತೀವ್ರ ಸ್ವರೂಪದ ಫನಿ ಚಂಡಮಾರುತದ ಪರಿಣಾಮ ರಾಜ್ಯದ ಮೇಲೂ ಅಲ್ಪ ಮಟ್ಟಿಗೆ ಉಂಟಾಗಿದ್ದು, ನಿನ್ನೆ ಸಂಜೆ ಹಾಗೂ ರಾತ್ರಿ ದಕ್ಷಿಣ ಒಳನಾಡಿನ ಹಲವುಭಾಗಗಳಲ್ಲಿ ವ್ಯಾಪಕ ಪ್ರಮಾಣದ ಮಳೆಯಾಗಿದೆ. ಹವಾ ಮುನ್ಸೂಚನೆ ಪ್ರಕಾರ ಇನ್ನೂ ಎರಡು ದಿನ ಸಂಜೆ ಹಾಗೂ ರಾತ್ರಿ ವೇಳೆ ಮಳೆ ಬೀಳಲಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದರು.

ನಿನ್ನೆ ಬಿದ್ದ ಮಳೆ ಸಂಪೂರ್ಣ ಚಂಡಮಾರುತದ ಪರಿಣಾಮವಲ್ಲ. ರಾಜ್ಯದಲ್ಲೇ ಉಂಟಾಗಿದ್ದ ವಾಯುಭಾರ ಕುಸಿತದಿಂದಾಗಿ ಗುಡುಗು ಮಿಂಚು ಬಿರುಗಾಳಿ ಸಹಿತ ಹಲವೆಡೆ ಮಳೆಯಾಗಿದೆ ಎಂದರು.

ವಿಶಾಖ ಪಟ್ಟಣದಿಂದ ಸುಮಾರು 400 ಕಿಲೋ ಮೀಟರ್ ದೂರದಲ್ಲಿ ಚಂಡಮಾರುತ ಕೇಂದ್ರೀಕೃತವಾಗಿದ್ದು, ಅದು ತನ್ನ ಶಕ್ತಿಯನ್ನು ವೃದ್ಧಿಸಿಕೊಳ್ಳುತ್ತಿದೆ.

ಮೇ 3 ರವರೆಗೂ ಚಂಡಮಾರುತದ ಫಲ ಹೆಚ್ಚಾಗುತ್ತಲೇ ಹೋಗಲಿದ್ದು, ಆನಂತರ ದುರ್ಬಲವಾಗಲಿದೆ. ಪ್ರಬಲ ಚಂಡಮಾರುತವಾಗಿದ್ದರೂ ಇದು ಸೂಪರ್ ಸೈಕ್ಲೋನ್ ಆಗಿ ಪರಿವರ್ತನೆಗೊಳ್ಳುವ ಸಾಧ್ಯತೆಗಳು ಕಡಿಮೆ ಇವೆ ಎಂದರು.

ಚಂಡಮಾರುತದ ಪ್ರಭಾವ ಮೇ 5ರವರೆಗೂ ಇರಲಿದೆ. ಸಮುದ್ರದಲ್ಲೇ ಇರುವುದರಿಂದ ಅದರ ವೇಗ ಹೆಚ್ಚುತ್ತಿದ್ದು, ಗಂಟೆಗೆ 175 ಕಿಲೋಮೀಟರ್‍ನಿಂದ 200 ಕಿಲೋಮೀಟರ್‍ನಷ್ಟು ವೇಗ ಪಡೆದುಕೊಳ್ಳುತ್ತಿದೆ. ಇದರ ನೇರ ಪರಿಣಾಮ ನಮ್ಮ ರಾಜ್ಯದ ಮೇಲೆ ಉಂಟಾಗುವುದಿಲ್ಲ. ಒಡಿಸ್ಸಾ ಕರಾವಳಿ, ಆಂಧ್ರಪ್ರದೇಶದ ಉತ್ತರ ಭಾಗ, ಪಶ್ಚಿಮ ಬಂಗಾಳದ ಕರಾವಳಿಗೆ ಚಂಡಮಾರುತದ ಪರಿಣಾಮ ಉಂಟಾಗಲಿದ್ದು ಭಾರೀ ಮಳೆಯಾಗಲಿದೆ.

ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕಾಗಿದೆ. ಅಲ್ಲದೆ, ಚಂಡಮಾರುತದ ಪರಿಣಾಮದಿಂದ ರಾಜ್ಯದಲ್ಲಿ ಭಾಗಶಃ ಮೋಡದ ವಾತಾವರಣ ಕಂಡು ಬಂದಿದೆ. ತಾಪಮಾನವೂ ಗಣನೀಯವಾಗಿ ಏರಿಕೆ ಉಂಟಾಗಿದ್ದರಿಂದ ಸ್ಥಳೀಯವಾಗಿ ವಾಯುಭಾರ ಕುಸಿತವಾಗಿ ಬೆಂಗಳೂರು, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ವ್ಯಾಪಕ ಪ್ರಮಾಣದ ಮಳೆಯಾಗಿದ್ದು, ಕೆಲವೆಡೆ ಭಾರೀ ಮಳೆಯಾಗಿದೆ.

ಮೈಸೂರು, ಚಾಮರಾಜನಗರ, ರಾಮನಗರ ಸೇರಿದಂತೆ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಭಾಗಶಃ ವ್ಯಾಪಕ ಪ್ರಮಾಣದ ಮಳೆಯಾಗಿದ್ದರೆ, ಹಾಸನ, ಚಿತ್ರದುರ್ಗ, ರಾಯಚೂರು, ಬಳ್ಳಾರಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಚದುರಿದಂತೆ ಮಳೆಯಾಗಿದೆ. ಹವಾ ಮುನ್ಸೂಚನೆ ಪ್ರಕಾರ ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಗಳು ಕಂಡು ಬಂದಿವೆ.

ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಮಳೆಯಾಗುತ್ತಿರುವುದರಿಂದ ತಾಪಮಾನದಲ್ಲಿ ಸ್ವಲ್ಪ ಇಳಿಮುಖವಾಗಲಿದೆ. ಹೈದರಾಬಾದ್-ಕರ್ನಾಟಕ ಭಾಗದಲ್ಲೂ ಒಂದೆರಡು ದಿನ ಮಳೆಯಾಗುವ ಸಾಧ್ಯತೆಗಳು ಇವೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ