ಶೋಷಣೆಯ ವ್ಯವಸ್ಥೆಗೆ ಕಾರ್ಮಿಕರು ಭಯಪಡುವ ಅವಶ್ಯಕತೆಯಿಲ್ಲ

ಬೆಂಗಳೂರು,ಮೇ1-ಶೋಷಣೆಯ ವ್ಯವಸ್ಥೆಗೆ ಕಾರ್ಮಿಕರು ಭಯಪಡುವ ಅವಶ್ಯಕತೆ ಇಲ್ಲ.ನ್ಯಾಯಾಂಗ ಮತ್ತು ಕಾನೂನು ಅಡಿಯಲ್ಲಿ ಪರಿಹಾರ ಸಿಗುತ್ತದೆ ಎಂದು ಕರ್ನಾಟಕ ಲೋಕಾಯುಕ್ತ ಪಿ.ವಿಶ್ವನಾಥ ಶೆಟ್ಟಿ ತಿಳಿಸಿದರು.

ಇಂದು ನಗರದ Dr.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಇಂಡಸ್ಟ್ರಿಯಲ್ ಅಂಡ್ ಅದರ್ ಎಸ್ಟಾಬ್ಲಿಷ್‍ಮೆಂಟ್ ಎಂಪ್ಲಾಯಿಸ್ ಫೆಡರೇಷನ್ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಮಿಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಕಾರ್ಮಿಕರು ಸಂಘಟನೆಯ ಮೂಲಕ ಅನೈತಿಕವಾಗಿ ಗಲಾಟೆ, ಗೊಂದಲ ಮಾಡಿಕೊಳ್ಳದೆ ಕಾರ್ಮಿಕರು ಮತ್ತು ಮಾಲಿಕರು ಪರಸ್ಪರ ಮಾತನಾಡಿ ಬಗೆಹರಿಸಿಕೊಳ್ಳಬೇಕು. ಒಂದು ವೇಳೆ ಪರಿಹಾರ ಸಿಗದಿದ್ದ ವೇಳೆ ಕಾನೂನು ನ್ಯಾಯಾಂಗದಲ್ಲಿ ಬಗೆಹರಿಸಿಕೊಳ್ಳಬೇಕೆ ಹೊರತು ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಹೇಳಿದರು.

ತಾವಿರುವ ಸ್ಥಳದಲ್ಲಿ ಕಾನೂನು ತಿಳಿದುಕೊಂಡು ಅಲ್ಲಿ ಬದಲಾವಣೆಯನ್ನು ತರಲು ಪ್ರಯತ್ನಿಸುವುದು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಿ ಅವರಿಗೂ ಸಹ ನ್ಯಾಯವನ್ನು ಒದಗಿಸಿಕೊಡುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಪ್ರಸನ್ನ ಮಾತನಾಡಿ, ಅತಿಯಾದ ಉತ್ಪಾದನೆಯ ಹಿಂದೆ ಬಿದ್ದು ಮಾನವ ಕಲ್ಯಾಣವನ್ನು ಕಡೆಸಲಾಗುತ್ತಿದೆ. ಅತಿಯಾದ ಯಾಂತ್ರೀಕರಣದಿಂದ ಕಾರ್ಮಿಕರು ಕೆಲಸವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದರು.

ಕಾರ್ಮಿಕರ ಚಳುವಳಿಯನ್ನು ರಾಜಕೀಯದವರು ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿ ಬುಡಸಮೇತ ಚಳುವಳಿಯನ್ನು ಹುಟ್ಟುಹಾಕಿ ಹೊಸದಾಗಿ ಚಳುವಳಿಯನ್ನು ಕಟ್ಟಬೇಕಿದೆ.

ಭಾರತದ ಭವಿಷ್ಯದ ನಾಯಕರು ಕಾರ್ಮಿಕರು.ದೇಶವನ್ನು ಬದಲಾಯಿಸಲು ಯಾವುದೇ ರಾಜಕಾರಣದಿಂದ ಸಾಧ್ಯವಾಗುವುದಿಲ್ಲ. ಕಾರ್ಮಿಕರು ಬದಲಾಯಿಸುವುದಕ್ಕೆ ಸಾಧ್ಯ ಎಂದರು.

ಉತ್ಪಾದನೆಯನ್ನು ಹೆಚ್ಚಿಸುವುದಕ್ಕಾಗಿ ರಾಜಕಾರಣಿಗಳು ಕೈಗಾರಿಕೆ ಉದ್ದಿಮೆಗಳ ಮೇಲೆ ಒತ್ತಡ ಹಾಕುತ್ತಾರೆ.ಕಾರ್ಮಿಕರ ಮೇಲೆ ಒತ್ತಡ ಹೇರಿ ಶೋಷಣೆಗೊಳಪಡಿಸುತ್ತಾರೆ. ಕಾರ್ಖಾನೆಗಳಲ್ಲಿ ಕಾರ್ಮಿಕರನ್ನು ಇಳಿಸುವ ಹುನ್ನಾರ ನಡೆಯುತ್ತಿದೆ.ಪಾಳೆಗಾರಿಕೆ ಇನ್ನು ಜೀವಂತವಾಗಿದೆ ಅದಕ್ಕಾಗಿ ಎಲ್ಲರೂ ಹೋರಾಡಬೇಕಿದೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ