ಕೇಂದ್ರ ಸರ್ಕಾರದಿಂದ ದ್ವೇಷದ ರಾಜಕಾರಣ-ದಿನೇಶ್ ಗುಂಡುರಾವ್

ಬೆಂಗಳೂರು, ಮೇ 1- ರಾಹುಲ್‍ಗಾಂಧಿ ಅವರ ಪೌರತ್ವವನ್ನು ಪ್ರಶ್ನಿಸುವ ಮೂಲಕ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಭವನದಲ್ಲಿಂದು ಕಾರ್ಮಿಕ ದಿನಾಚರಣೆ ಉದ್ದೇಶಿಸಿ ಮಾತನಾಡಿದ ಅವರು, ರಾಹುಲ್‍ಗಾಂಧಿ ಅವರ ತಾತ, ಅಜ್ಜಿ, ತಂದೆ ಎಲ್ಲರ ಬಗ್ಗೆ ದೇಶಕ್ಕೆ ಗೊತ್ತಿದೆ.

ಆದರೂ 2015ರಲ್ಲಿ ಸುಬ್ರಹ್ಮಣ್ಯಸ್ವಾಮಿ ನೀಡಿದ ದೂರನ್ನು ನಾಲ್ಕು ವರ್ಷ ತಟಸ್ಥವಾಗಿಟ್ಟು ಚುನಾವಣೆ ವೇಳೆ ತನಿಖೆ ಕೈಗೆತ್ತಿಕೊಳ್ಳಲಾಗಿದೆ.

ಸುಪ್ರೀಂಕೋರ್ಟ್ ವಜಾಗೊಳಿಸಿರುವ ಪ್ರಕರಣ ಇದಾಗಿದ್ದು, ಕೇಂದ್ರ ವಿದೇಶಾಂಗ ಸಚಿವಾಲಯದ ಮೂಲಕ ಈಗ ನೋಟಿಸ್ ನೀಡಿರುವುದು ಕೀಳುಮಟ್ಟದ ರಾಜಕಾರಣ.ಅಧಿಕಾರ ದುರುಪಯೋಗದ ಸ್ಪಷ್ಟ ಉದಾಹರಣೆ ಎಂದು ಕಿಡಿಕಾರಿದರು.

ಬಿಜೆಪಿ ಸರ್ಕಾರ ದೇಶವನ್ನು ಅಧೋಗತಿಯತ್ತ ತೆಗೆದುಕೊಂಡು ಹೋಗಿದೆ.ನೋಟು ಅಮಾನ್ಯೀಕರಣದಿಂದಾಗಿ ಲಕ್ಷಾಂತರ ಉದ್ಯೋಗಗಳು ನಷ್ಟವಾಗಿವೆ. ಬಿಜೆಪಿಯ ನೀತಿಗಳು ಕಾರ್ಮಿಕ ವಿರೋಧಿಯಾಗಿವೆ. ಸಣ್ಣಪುಟ್ಟ ವ್ಯಾಪಾರಗಳು, ಉದ್ಯಮಗಳು ನೋಟು ಅಮಾನೀಕರಣದ ನಂತರ ಮುಚ್ಚಿಹೋಗಿವೆ. ಲಕ್ಷಾಂತರ ರೂ.ಸಾಲ ಪಡೆದು ದೇಶ ಬಿಟ್ಟು ಹೊಗುವವರಿಗೆ ಕೇಂದ್ರ ಸರ್ಕಾರ ಬೆಂಬಲವಾಗಿ ನಿಂತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ನೋಟು ಅಮಾನ್ಯೀಕರಣದಿಂದಾದ ಅವಾಂತರವನ್ನು ದೇಶಾದ್ಯಂತ ಎಲ್ಲ ಕಾರ್ಮಿಕ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿವೆ. ಆದರೆ, ಮಾಧ್ಯಮಗಳು ಮೋದಿಯವರ ದುರಾಡಳಿತವನ್ನು ಪ್ರಶ್ನೆ ಮಾಡಲಿಲ್ಲ. ಒಂದು ರೀತಿಯಲ್ಲಿ ಸಾಮ್ರಾಜ್ಯಶಾಹಿ, ಹಿಟ್ಲರ್ ಶಾಹಿ ಆಡಳಿತವನ್ನು ಮೋದಿ ನಡೆಸುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ಭಾರೀ ಪ್ರಚಾರ ಮಾಡಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಮಾತನಾಡಿ, ಕಾಂಗ್ರೆಸ್‍ಗೆ ಕಾರ್ಮಿಕರು, ಜನಸಾಮಾನ್ಯರೇ ಬೆನ್ನೆಲುಬು. ಅಂಬಾನಿ, ಅದಾನಿಯಂತಹ ಶ್ರೀಮಂತ ಉದ್ಯಮಿಗಳನ್ನು ಕಾಂಗ್ರೆಸ್ ಆಶ್ರಯಿಸಿಲ್ಲ ಎಂದು ಹೇಳಿದರು.

ಕೇಂದ್ರ ಸರ್ಕಾರದ ನೀತಿಗಳನ್ನು ಇದೇ ಸಂದರ್ಭದಲ್ಲಿ ಎಚ್.ಕೆ.ಪಾಟೀಲ್ ಟೀಕಿಸಿದರು.

ಕಾರ್ಮಿಕ ಘಟಕದ ಅಧ್ಯಕ್ಷ ಎಸ್.ಎಸ್.ಪ್ರಕಾಶಂ, ಹಿಂದುಳಿದ ವರ್ಗಗಳ ಘಟಕಗಳ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ್, ಬೆಂಗಳೂರು ಉತ್ತರ ಕಾಂಗ್ರೆಸ್ ಜಿಲ್ಲೆಯ ಅಧ್ಯಕ್ಷ ರಾಜ್‍ಕುಮಾರ್, ಮುಖಂಡರಾದ ಷಫೀವುಲ್ಲಾ, ಆರ್.ಕೆ.ರಮೇಶ್, ಶಾಂತಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ