ಬೆಂಗಳೂರು,ಮೇ1- ಸಕಾಲಕ್ಕೆ ಆಸ್ತಿ ವಿವರ ಸಲ್ಲಿಸದ ಹಾಗೂ ಸುಳ್ಳು ಮಾಹಿತಿ ನೀಡಿದ 30 ಪುರಪಿತೃಗಳು ಅವಧಿಗೂ ಮುನ್ನವೇ ತಮ್ಮ ಸ್ಥಾನ ಕಳೆದುಕೊಳ್ಳುವರೇ..?!
ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ್ ಅವರು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ಪತ್ರ ಬರೆದು ಸಕಾಲಕ್ಕೆ ಆಸ್ತಿ ವಿವರ ಸಲ್ಲಿಸದ ಬಿಬಿಎಂಪಿ ಪಾಲಿಕೆ ಸದಸ್ಯರ ಸದಸ್ಯತ್ವ ಅನೂರ್ಜಿತಗೊಳಿಸಿ ಮಾಹಿತಿ ನೀಡುವಂತೆ ಸೂಚನೆ ನೀಡಿರುವುದರಿಂದ 30 ಸದಸ್ಯರಿಗೆ ಅನರ್ಹತೆಯ ಭೀತಿ ಎದುರಾಗಿದೆ.
ನವಭಾರತ್ ಡೆಮಾಕ್ರಟಿಕ್ ಪಾರ್ಟಿಯ ಅಧ್ಯಕ್ಷ ಅನಿಲ್ ಶೆಟ್ಟಿ ಎಂಬುವರು 30ಕ್ಕೂ ಹೆಚ್ಚು ಬಿಬಿಎಂಪಿ ಸದಸ್ಯರು ಸಮಯಕ್ಕೆ ಸರಿಯಾಗಿ ಆಸ್ತಿ ವಿವರ ಸಲ್ಲಿಸದ ಹಿನ್ನೆಲೆಯಲ್ಲಿ ಕೆಎಂಸಿ ಕಾಯ್ದೆ 1976 ಕಲಂ 19ರ ಅನ್ವಯ ಅವರ ಸದಸ್ಯತ್ವವನ್ನು ಅನೂರ್ಜಿತಗೊಳಿಸುವಂತೆ ಮನವಿ ಮಾಡಿಕೊಂಡಿದ್ದರು.
ಅನಿಲ್ ಶೆಟ್ಟಿ ಅವರ ಮನವಿ ಮೇರೆಗೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ಪತ್ರ ಬರೆದಿರುವ ಶಿವಯೋಗಿ ಕಳಸದ್ ಅವರು ಕರ್ನಾಟಕ ಪೌರ ನಿಗಮಗಳ ಅಧಿನಿಯಮ 1976ರಂತೆ ಆಸ್ತಿ ವಿವರ ಘೋಷಿಸಿಕೊಂಡಿರದ ಸದಸ್ಯರ ಸದಸ್ಯತ್ವ ರದ್ದುಗೊಳಿಸುವ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ಕ್ರಮ ಕೈಗೊಂಡು, ಕೈಗೊಂಡ ಕ್ರಮಗಳ ಬಗ್ಗೆ ಅರ್ಜಿದಾರರಿಗೆ ಹಾಗೂ ಪ್ರಾದೇಶಿಕ ಆಯುಕ್ತರ ಕಚೇರಿಗೆ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದಾರೆ.
ಯಾರಿಗೆ ಎದುರಾಗಿದೆ ಅನರ್ಹತೆ ಭೀತಿ:
ಮಮತಾ, ವೇಲುನಾಯ್ಕರ್, ಬಿ.ಎನ್.ಜಯಪ್ರಕಾಶ್, ಎಂ.ಎನ್.ಶ್ರೀಕಾಂತ್, ಏಳುಮಲೈ(ನಿಧನ), ಜಿ.ಮೋಹನ್ಕುಮಾರ್, ರಮೇಶ್.ಎನ್, ಫರಿದಾ ಇಷ್ತಿಯಾಕ್, ಆರ್.ವಿ.ಯುವರಾಜ್, ಜಿ.ಬಾಲಕೃಷ್ಣ, ಡಿ.ಪ್ರಮೋದ್, ಗಾಯತ್ರಿ, ಅಜ್ಮಲ್ ಬೇಗ್, ಜಿ.ಮಂಜುನಾಥ್, ಎನ್.ನಾಗರಾಜ್, ಅನ್ಸರ್ ಪಾಷಾ ಅವರುಗಳು 2017ರ ಸಾಲಿನ ಆಸ್ತಿ ವಿವರ ಸಲ್ಲಿಸಿರಲಿಲ್ಲ.
ಅದೇ ರೀತಿ2016ರಲ್ಲಿ ಆಸ್ತಿ ವಿವರ ಸಲ್ಲಿಸದ ರಾಜಶೇಖರ್, ಉಮಾದೇವಿ, ಪದ್ಮಾವತಿ, ಕೋದಂಡರೆಡ್ಡಿ, ಲಾವಣ್ಯ ಗಣೇಶ್ ರೆಡ್ಡಿ, ಮೀನಾಕ್ಷಿ , ರಾಜ, ವಿ.ಶಿವಪ್ರಕಾಶ್, ಬಾಲಕೃಷ್ಣ, ಸರಳ ಮಹೇಶ್ಬಾಬು, ಟಿ.ರಾಮಚಂದ್ರ, ಎಂ.ಚಂದ್ರಪ್ಪ , ಜಿ.ಮಂಜುನಾಥ್, ಆರ್ಯ ಶ್ರೀನಿವಾಸ್ ಅವರುಗಳಿಗೆ ಅನರ್ಹತೆಯ ಭೀತಿ ಎದುರಾಗಿದೆ.
ನೌಷೇರ್ ಅಹಮ್ಮದ್,ಜಿ.ಪದ್ಮಾವತಿ, ಶ್ವೇತಾ, ರಮೀಳಾ ಉಮಾಶಂಕರ್(ನಿಧನ), ಮಹಾದೇವಮ್ಮ ನಾಗರಾಜ್(ನಿಧನ), ಆರ್.ಮಹಾಲಕ್ಷ್ಮಿ ಅವರು ಸಮರ್ಪಕ ಮಾಹಿತಿ ನೀಡದೆ ವಿವರ ಮುಚ್ಚಿಟ್ಟ ಆರೋಪಕ್ಕೆ ಗುರಿಯಾಗಿದ್ದು ಇವರು ಸದಸ್ಯತ್ವ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.
ಯಾವಾಗ ಸಲ್ಲಿಸಬೇಕು ಆಸ್ತಿ ವಿವರ:
ಬಿಬಿಎಂಪಿಗೆ ಚುನಾವಣೆ ನಡೆದು ಮೊದಲ ಮೇಯರ್ ಆಯ್ಕೆಯಾಗುವ ಸಂದರ್ಭದಲ್ಲಿ ಎಲ್ಲ ಬಿಬಿಎಂಪಿ ಸದಸ್ಯರು ಕಡ್ಡಾಯವಾಗಿ ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸಬೇಕು.
ಇದೇ ರೀತಿ ಪ್ರತಿ ವರ್ಷ ಕಡ್ಡಾಯವಾಗಿ ತಮ್ಮ ಪರಿಷ್ಕøತ ಆಸ್ತಿ ವಿವರಗಳನ್ನು ಸಲ್ಲಿಸಬೇಕು.ಒಂದು ವೇಳೆ ಆಸ್ತಿ ವಿವರ ಸಲ್ಲಿಸದಿದ್ದರೆ ಅಂಥವರ ಸದಸ್ಯತ್ವ ಅನೂರ್ಜಿತಗೊಳಿಸಲು ಕೆಎಂಸಿ ಕಾಯ್ದೆಯಲ್ಲಿ ಅವಕಾಶವಿದೆ.
ಈ ಎಲ್ಲ ಕಾನೂನು ಅಂಶಗಳು ಗೊತ್ತಿದ್ದರೂ ತಮ್ಮನ್ನು ತಾವೇ ಸರ್ವಾಧಿಕಾರಿಗಳೆಂದು ಬಿಂಬಿಸಿಕೊಳ್ಳುವ ಕೆಲವು ಸದಸ್ಯರು ತಮ್ಮ ಸಂವಿಧಾನದತ್ತ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ.
ತಮ್ಮ ಈ ಉಡಾಫೆ ತೀರ್ಮಾನದಿಂದಲೇ ಇದೀಗ 30 ಪುರಪಿತೃಗಳು ತಮ್ಮ ಸದಸ್ಯತ್ವವನ್ನು ಕಳೆದುಕೊಳ್ಳುವ ಹಂತದಲ್ಲಿದ್ದಾರೆ.