ಮೊದಲ ಮಹಾ ಮಳೆಗೆ ವ್ಯಕ್ತಿಯೊಬ್ಬ ಬಲಿ

ಬೆಂಗಳೂರು, ಮೇ1- ಫನಿ ಚಂಡಮಾರುತದ ಅಬ್ಬರಕ್ಕೆ ನಗರ ತತ್ತರಿಸಿದ್ದು, ನಿನ್ನೆ ಸುರಿದ ಮೊದಲ ಮಹಾ ಮಳೆಗೆ ವ್ಯಕ್ತಿಯೊಬ್ಬ ಬಲಿಯಾಗಿದ್ದಾನೆ.

ನಿನ್ನೆ ಸುರಿದ ಭಾರೀ ಮಳೆಗೆ ಗರುಡಾಚಾರ್‍ಪಾಳ್ಯ ವಾರ್ಡ್‍ನಲ್ಲಿರುವ ಹೊರವರ್ತುಲ ರಸ್ತೆಯ ಭಾಗಾಮನೆ ಟೆಕ್‍ಪಾರ್ಕ್‍ನ ಸ್ಯಾಮ್‍ಸಂಗ್ ಸಂಸ್ಥೆ ಸಮೀಪದ ಗೋಶಾಲಾ ಕಾಂಪೌಂಡ್ ಕುಸಿದು ಪಾದಚಾರಿ ಶಿವ ಕೈಲಾಸ ರೆಡ್ಡಿ ಎಂಬುವರು ಮೃತಪಟ್ಟಿದ್ದಾರೆ.

ಮೃತ ವ್ಯಕ್ತಿ ನಗರದ ಖಾಸಗಿ ಸಂಸ್ಥೆಯೊಂದರ ಉದ್ಯೋಗಿಯಾಗಿದ್ದು, ಮೂಲತಃ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯವರಾಗಿದ್ದು, ಅವರಿಗೆ ಒಂದು ತಿಂಗಳಲ್ಲಿ ವಿವಾಹ ನಿಶ್ಚಯವಾಗಿತ್ತು.

ನಿನ್ನೆ ರಾತ್ರಿ ಕೆಲಸ ಮುಗಿಸಿ ದೊಡ್ಡನಕ್ಕುಂದಿ ಗರುಡಾಚಾರ್‍ಪಾಳ್ಯದ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಜೋರಾಗಿ ಬೀಸಿದ ಗಾಳಿಗೆ ಗೋಶಾಲಾ ಕಾಂಪೌಂಡ್ ಕುಸಿದು ಬಿದ್ದ ಪರಿಣಾಮ ತಲೆ ತೀವ್ರ ಪೆಟ್ಟು ಬಿದ್ದು ಶಿವರೆಡ್ಡಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಟ್ರಸ್ಟ್ ವಿರುದ್ಧ ದೂರು ದಾಖಲು:
ಕುಸಿದು ಬಿದ್ದ ಕಾಂಪೌಂಡ್ ಗೋ ರಕ್ಷಣಾ ಟ್ರಸ್ಟ್‍ಗೆ ಸೇರಿದ್ದು, ಆ ಟ್ರಸ್ಟ್ ವಿರುದ್ಧ ಎಫ್‍ಐಆರ್ ದಾಖಲಿಸಿ ಅಗತ್ಯ ಕ್ರಮ ಕೈಗೊಳ್ಳಲು ಮೇಯರ್ ಅಧಿಕಾರಿಗಳಿಗೆ ಸೂಚಿಸಿದರು.

ಗುಡುಗು-ಸಿಡಿಲು ಸಹಿತ ಬಿದ್ದ ಮಹಾಮಳೆಗೆ ನಗರದ ಹಲವೆಡೆ ಮರಗಳು ಉರುಳಿಬಿದ್ದಿವೆ. ಅಜಾದ್‍ನಗರ, ಬಸವನಗುಡಿ, ಸದಾಶಿವನಗರ, ಬಾಣಸವಾಡಿ, ಕಾವಲಭೆರಸಂದ್ರಹಾಗೂ ಜಯನಗರದ ಹಲವು ಪ್ರದೇಶಗಳಲ್ಲಿ 20ಕ್ಕೂ ಹೆಚ್ಚು ಮರಗಳು ಉರುಳಿಬಿದ್ದಿವೆ.

ಲೀ ಮೆರಿಡಿಯನ್ ಹೋಟೆಲ್ ಮುಂಭಾಗದ ಕೆಳಸೇತುವೆಯಲ್ಲಿ ಆಳುದ್ದ ನೀರು ನಿಂತ ಪರಿಣಾಮ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿ ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಕೆಆರ್ ಮಾರ್ಕೆಟ್, ಕಾರ್ಪೋರೇಶನ್, ಮೆಜೆಸ್ಟಿಕ್, ಬಸವನಗುಡಿ, ಜಯನಗರ, ವಿಲ್ಸನ್ ಗಾರ್ಡನ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ.

ಇನ್ನು ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಅಲ್ಲದೆ ಹಲವು ಪ್ರದೇಶಗಳಲ್ಲಿ ಒಂದು ಗಂಟೆಗೂ ಅಧಿಕ ಕಾಲ ವಿದ್ಯುತ್ ವ್ಯತ್ಯಯವಾಗಿತ್ತು.

ಎಚ್ಚೆತ್ತ ಮೇಯರ್:
ನಗರದ ಎಲ್ಲೆಡೆ ಭಾರೀ ಮಳೆಯಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಮೇಯರ್ ಗಂಗಾಂಬಿಕೆಯವರು ವಲಯವಾರು ಕಂಟ್ರೋಲ್‍ರೂಮ್‍ಗಳಿಗೆ ಸ್ವತಃ ಕರೆ ಮಾಡಿ ರಸ್ತೆಗಳಲ್ಲಿ ವಾಟರ್ ಲಾಗಿಂಗ್ ತೆರವುಗೊಳಿಸುವಂತೆ ಪಾಲಿಕೆ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಎಲ್ಲ ವಾರ್ಡ್‍ಗಳಲ್ಲಿರುವ ಶಿಥಿಲಾವಸ್ಥೆಯ ಕಾಂಪೌಂಡ್ ಗೋಡೆ ಮತ್ತು ಕಟ್ಟಡಗಳನ್ನು ಗುರುತಿಸಿ ಅವುಗಳನ್ನು ದುರಸ್ತಿಗೊಳಿಸಲು ಇಲ್ಲವೇ ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆಯುಕ್ತರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಮೇಯರ್ ಗಂಗಾಂಬಿಕೆ ತಿಳಿಸಿದರು.

ಮಳೆ ಸಂದರ್ಭದಲ್ಲಿ ಎಲ್ಲ ಕಾರ್ಯಪಾಲಕ ಅಭಿಯಂತರರು ಅಲರ್ಟ್ ಆಗಿರಬೇಕು.ಯಾವುದೇ ರೀತಿಯ ಅನಾಹುತಗಳಾಗದಂತೆ ಎಚ್ಚರವಹಿಸಬೇಕು, ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ತೊಂದರೆಯಾದರೆ ಕೂಡಲೇ ಸ್ಥಳಕ್ಕೆ ಧಾವಿಸಿ ವಾಟರ್ ಲಾಗಿಂಗ್ ಕ್ಲಿಯರ್‍ಗೊಳಿಸುವಂತೆ ಎಚ್ಚರಿಕೆ ನೀಡಿದರು.

ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆಯಾಗುವ ಸಾಧ್ಯತೆ ಇರುವುದರಿಂದ ನಗರದಲ್ಲಿ ಎಲ್ಲೆಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಗುವುದೋ ಅಂತಹ ಸ್ಥಳಗಳನ್ನು ಗುರುತಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಯೋಜನೆ ರೂಪಿಸಲು ಗಂಗಾಂಬಿಕೆಯವರು ಅಧಿಕಾರಿಗಳಿಗೆ ಸೂಚಿಸಿದರು.

ಸಿಟಿ ರೌಂಡ್ಸ್:
ಗರುಡಾಚಾರ್‍ಪಾಳ್ಯ ಸಮೀಪ ಗೋಶಾಲಾ ಕಾಂಪೌಂಡ್ ಕುಸಿದು ವ್ಯಕ್ತಿಯೊಬ್ಬ ಮೃತಪಟ್ಟ ಘಟನಾ ಸ್ಥಳಕ್ಕೆ ಮೇಯರ್ ಗಂಗಾಂಬಿಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ನಗರದ ಹಲವಾರು ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವಂತೆ ಸ್ಥಳದಲ್ಲೇ ಮೇಯರ್ ಆದೇಶಿಸಿದರು.

24X7 ನಿಗಾ:
ಇನ್ನು ಮೂರು ದಿನಗಳ ಕಾಲ ನಗರದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ ಪ್ರಹರಿ ವಾಹನ ಹಾಗೂ ರಕ್ಷಣಾ ಸಿಬ್ಬಂದಿಯನ್ನು ದಿನದ 24 ಗಂಟೆ ಜಾಗೃತರಾಗಿರಿಸಲಾಗಿದೆ.

ನಿಯಂತ್ರಣ ಕೊಠಡಿಗಳಲ್ಲಿ ಮೂರು ಪಾಳಿಯಲ್ಲಿ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದು, ಮಳೆ ಅನಾಹುತದ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಕೂಡಲೇ ರಕ್ಷಣಾ ಸಿಬ್ಬಂದಿಯನ್ನು ಸ್ಥಳಕ್ಕೆ ರವಾನಿಸಿ ಸಮಸ್ಯೆಬಗೆಹರಿಸಲು ಬಿಬಿಎಂಪಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ