ಬೆಂಗಳೂರು,ಮೇ1- ಕುಡಿಯುವ ನೀರಿಗೂ ಪರದಾಟ, ಜಾನುವಾರುಗಳಿಗೆ ಮೇವಿಲ್ಲ, ದುಡಿಯುವ ಕೈಗಳಿಗೆ ಕೆಲಸವೂ ಇಲ್ಲ. ತಲೆಮೇಲೆ ಕೈ ಹೊತ್ತ ಅನ್ನದಾತ ದಿಕ್ಕು ಕಾಣದೆ ಕಂಗಾಲಾಗಿದ್ದಾನೆ.
ರಾಜ್ಯದಲ್ಲಿ ಈ ಬಾರೀ ಭೀಕರ ಬರಗಾಲ ಆವರಿಸಿರುವುದರಿಂದ ಎಲ್ಲೆಡೆ ಮುಂಗಾರು ಆರಂಭಕ್ಕೆ ಮುನ್ನವೇ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ಕೆಲವು ಕಡೆ ವಾರಕ್ಕೆ ಒಂದು ಬಾರಿ ನೀರು ಬಂದರೆ ಇನ್ನು ಕೆಲವು ಕಡೆ 15 ದಿನಕ್ಕೊಮ್ಮೆ ಬರುತ್ತದೆ.
ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಅಂತರ್ಜಲದ ಮಟ್ಟ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದ್ದು, 1112 ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ.
ಎರಡು ದಶಕಗಳ ನಂತರ ಬರಗಾಲಕ್ಕೆ ತುತ್ತಾಗಿರುವ ರಾಜ್ಯದಲ್ಲಿ ಜಾನುವಾರುಗಳಿಗೆ ಮೇವು ಇಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಗೋಶಾಲೆಗಳಲ್ಲಿ ಇರುವ ಜಾನುವಾರುಗಳಿಗೆ ಹಾಕಲು ಮೇವಿಲ್ಲ.
ಬಹುತೇಕ ಎಲ್ಲ ಗೋಶಾಲೆಗಳಲ್ಲಿ ಮೇವು ಖಾಲಿ ಖಾಲಿಯಾಗಿದ್ದು, ಜಾನುವಾರುಗಳು ತಿನ್ನಲು ಮೇವೂ ಇಲ್ಲ, ಕುಡಿಯಲು ನೀರಿಲ್ಲದೆ ಪರಿತಪಿಸುತ್ತಿವೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗದ ಕಾರಣ ರೈತರು ದುಡಿಯುತ್ತೇನೆ ಎಂದರೂ ಕೆಲಸ ಇಲ್ಲದೆ ಕೈ ಕಟ್ಟಿ ಕುಳಿತುಕೊಳ್ಳುವಂತಾಗಿದೆ. ಸದ್ಯಕ್ಕೆ ಅವರಿಗೆ ಇರುವ ಏಕೈಕ ಪರಿಹಾರವೆಂದರೆ ಗುಳೇ ಹೋಗುವುದು.
ರಾಜ್ಯ ಸರ್ಕಾರವೇ ಅಧಿಕೃತವಾಗಿ ಘೋಷಣೆ ಮಾಡಿದಂತೆ 176 ತಾಲ್ಲೂಕುಗಳ ಪೈಕಿ 154 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದೆ. ಸರಿಸುಮಾರು ರಾಜ್ಯದ ಶೇ.85ರಷ್ಟು ಭಾಗ ಬರಪೀಡತವಾಗಿವೆ.
ಒಂದೆಡೆ ಲೋಕಸಭೆ ಚುನಾವಣೆಯಿಂದಾಗಿ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ.ಹೀಗಾಗಿ ಜನಪ್ರತಿನಿಧಿಗಳಿಗೂ ಜನರ ಸಂಕಷ್ಟಗಳನ್ನು ಕೇಳಲು ಪುರುಸೋತ್ತಿಲ್ಲ.
ಕುಡಿಯುವ ನೀರು ಮತ್ತು ಪ್ರಕೃತಿ ವಿಕೋಪ ಕೆಲಸಗಳಿಗೆ ಆಯೋಗ ವಿನಾಯ್ತಿ ನೀಡಿದ್ದರೂ ಜನಪ್ರತಿನಿಧಿಗಳು ಮಾತ್ರ ಅದನ್ನೇ ನೆಪವೊಡ್ಡಿ ಜಾಣಕಿವುಡರಾಗಿದ್ದಾರೆ.
ಕುಡಿಯುವ ನೀರಿಗೆ ಹಾಹಾಕಾರ:
ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಾದ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಚಾಮರಾಜನಗರ, ಮೈಸೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ.
ಇನ್ನು ಹೈದರಾಬಾದ್ ಹಾಗೂ ಮುಂಬೈ ಕರ್ನಾಟಕದ ಪರಿಸ್ಥಿತಿಯಂತೂ ಹೇಳತೀರದು.ಈ ಭಾಗದಲ್ಲಿ ಕಳೆದ ಒಂದು ತಿಂಗಳಿನಿಂದ ವಾರಕ್ಕೆ ಒಂದು ಬಾರಿ ಇಲ್ಲವೇ 15 ದಿನಕ್ಕೆ ಒಂದು ದಿನ ನೀರು ಬಂದರೆ ಅದೇ ಪುಣ್ಯ ಎನ್ನುವಂತಾಗಿದೆ.
ಬಳ್ಳಾರಿ, ರಾಯಚೂರು, ಕೊಪ್ಪಳ, ಯಾದಗಿರಿ, ಬೀದರ್, ಬಿಜಾಪುರ, ಕಲಬುರಗಿ, ಮುಂಬೈ ಕರ್ನಾಟಕದ ಹಾವೇರಿ, ಧಾರವಾಡ, ಬೆಳಗಾವಿ ಭಾಗಗಳಲ್ಲಿ ನೀರಿಗಾಗಿ ಜನ ಪರಿತಪಿಸುತ್ತಿದ್ದಾರೆ.
ಈ ಎಲ್ಲ ಗ್ರಾಮಗಳಿಗೂ ಟ್ಯಾಂಕರ್ ನೀರು ಪೂರೈಸುವ ವ್ಯವಸ್ಥೆಯನ್ನು ಮಾಡಲಾಗಿದ್ದರೂ, ಪರಿಸ್ಥಿತಿ ಮಾತ್ರ ಸುಧಾರಿಸಿಲ್ಲ. ವಿಜಯಪುರ, ದಾವಣಗೆರೆ, ಚಿತ್ರದುರ್ಗದಂಥ ಕೆಲವು ಜಿಲ್ಲೆಗಳಲ್ಲಿ ಹಣ ನೀಡಿದರೂ ಕುಡಿಯಲು ನೀರು ಸಿಗುತ್ತಿಲ್ಲ. ಮೇ ಆರಂಭದ ಹೊತ್ತಿಗೆ ಇದು ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇದ್ದು, ಜೂನ್ ಮೊದಲ ವಾರದಲ್ಲಿ ಸುರಿಯುವ ಮುಂಗಾರು ಮಳೆವರೆಗೆ ಪರಿಸ್ಥಿತಿಯನ್ನು ಜಿಲ್ಲಾಡಳಿತಗಳು ನಿರ್ವಹಿಸಬೇಕಿದೆ.
ಲೋಕಸಭೆ ಚುನಾವಣೆ ನಡೆಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದ ಅಧಿಕಾರಿಗಳು ಹಾಗೂ ಮತದಾಹಕ್ಕಾಗಿ ಅಲೆದಾಡುತ್ತಿದ್ದ ಚುನಾಯಿತ ಪ್ರತಿನಿಧಿಗಳಿಗೆ ಮತದಾನದ ಸಂದರ್ಭದಲ್ಲಿಯೇ ನೀರಿನ ದಾಹದ ಕೂಗು ತಲುಪಿತ್ತು. ನೀರಿಗಾಗಿ ಕೆಲವೆಡೆ ಮತದಾನವನ್ನೇ ಗ್ರಾಮೀಣ ಜನತೆ ಬಹಿಷ್ಕರಿಸಿದ್ದರು. ಹಾಗಾಗಿ, ಎರಡನೇ ಹಂತದ ಮತದಾನ ಮುಕ್ತಾಯಗೊಂಡ ಬೆನ್ನಲ್ಲಿಯೇ ಸರಕಾರ ಎಚ್ಚೆತ್ತುಕೊಂಡಿದ್ದು ಒಟ್ಟು 225 ಕೋಟಿ ರೂ.ಗಳನ್ನು ನಾನಾ ಹಂತದಲ್ಲಿ ಬರ ನಿರ್ವಹಣೆಗೆ ವಿನಿಯೋಗಿಸಲು ನಿರ್ಧರಿಸಿದೆ.
ಕಳೆದ ವರ್ಷಕ್ಕಿಂತಲೂ ಈ ಬಾರಿ ಕುಡಿಯುವ ನೀರಿನ ಬೇಡಿಕೆ ಬಿಗಡಾಯಿಸಿದೆ.ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಜಿಲ್ಲಾಧಿಕಾರಿಗಳ ಖಾತೆಯಿಂದ ಪ್ರತಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ 4ರಿಂದ 5 ಕೋಟಿ ರೂ.ಬಿಡುಗಡೆ ಮಾಡಲಾಗಿದೆ.
ಖಾಸಗಿ ಟ್ಯಾಂಕರ್ಗಳ ಮೂಲಕ ನೀರು ಪೂರೈಕೆಸಲು ರಾಜ್ಯ ಸರಕಾರ ಅನುಮತಿ ನೀಡಿದೆ.ಕಳೆದ ಎರಡು ದಿನಗಳಿಂದ ಗ್ರಾಮೀಣಾಭಿವೃದ್ಧಿ ಇಲಾಖೆ ಈ ಬಗ್ಗೆ ಸತತ ಸಭೆ ನಡೆಸಿ ಪರಿಹಾರ ಮಾರ್ಗಸೂಚಿಗಳನ್ನು ಜಿಲ್ಲೆಗಳಿಗೆ ರವಾನಿಸಿದೆ.
ಮೇವುಗಳಿಗೂ ಬರ: ಈ ಬಾರಿ ಮಲೆನಾಡಿನಂತಹ ಭಾಗಗಳಲ್ಲಿ ಜಾನುವಾರುಗಳಿಗೆ ಮೇವು ಇಲ್ಲದಂತಾಗಿದೆ. ಚಿಕ್ಕಮಗಳೂರು, ಶಿವಮೊಗ್ಗ, ಹಾಸನದ ಕೆಲವು ಭಾಗಗಳು ಕೊಡಗು ಸೇರಿದಂತೆ ಅನೇಕ ಕಡೆ ಬರಗಾಲದಿಂದ ಮೇವಿಲ್ಲದೆ ಜಾನುವಾರುಗಳು ಬಾಧಿಸುತ್ತಿವೆ.
ಕೆಲವು ಕಡೆ ತಾಲ್ಲೂಕು ಕೇಂದ್ರಗಳಲ್ಲಿ ಗೋಶಾಲೆಗಳನ್ನು ತೆರೆಯಲಾಗಿದ್ದರೂ ಈಗಾಗಲೇ ಸಂಗ್ರಹಣೆಯಾಗಿದ್ದ ಮೇವು ಖಾಲಿಯಾಗಿದೆ. ಮುಂದಿನ ದಿನಗಳಲ್ಲಿ ಇರುವ ಹಸುಗಳನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುದೇ ಜಿಲ್ಲಾಡಳಿತಕ್ಕೆ ಯಕ್ಷ ಪ್ರಶ್ನೆಯಾಗಿದೆ.
ಗ್ರಾಮದ ಜಾನುವಾರುಗಳ ತೊಟ್ಟಿಗಳಲ್ಲಿ ನೀರು ಇಲ್ಲದಂತಾಗಿದೆ.ರೈತರು ಪೈಪ್ಲೈನ್ ಇದ್ದ ಕಡೆ ದನಕರುಗಳನ್ನು ಕರೆದುಕೊಂಡು ಹೋಗಿ ನೀರು ಕುಡಿಸಿಕೊಂಡು ಬರುತ್ತಿದ್ದಾರೆ. ಮುಂದೆ ಏನು ಮಾಡಬೇಕೆಂಬುದು ಅನ್ನದಾತನಿಗೆ ತೋಚದಂತಾಗಿದೆ. ರೈತರು ಹಣ ಕೊಟ್ಟು ಮೇವು ಖರೀದಿಸುವಂತಹ ಪರಿಸ್ಥಿತಿಯಲ್ಲೂ ಇಲ್ಲ.
ಕೆರೆ ಅಂಗಳ ಅಥವಾ ಗುಡ್ಡದಲ್ಲಿ ಜಾನುವಾರುಗಳು ಗರಿಕೆ ಹುಲ್ಲಿಗಾಗಿ ಒಣಗಿದ ನೆಲವನ್ನೇ ನೆಕ್ಕುತ್ತಿವೆ. ಈ ಭಾಗದಲ್ಲಿ ಮಳೆಯ ಕೊರತೆಯಿಂದ ಕೆರೆಗಳು ತುಂಬಿ 12 ವರ್ಷಗಳಾಗಿವೆ. ಬಂಜರಾಗಿರುವ ಕೆರೆಯಂಗಳದಲ್ಲಿ ಮುಳ್ಳಿನ ಗಿಡಗಳು ತುಂಬಿ ಹೋಗಿವೆ. ಹೊಲ ಗದ್ದೆಗಳಲ್ಲಿ ಎಲ್ಲಿ ನೋಡಿದರೂ ಜಾಲಿ, ಗಾರೆ ಗಿಡಗಳು, ಲಾಂಟಾನ ಗಿಡಗಳು ಮತ್ತು ಎಕ್ಕದ ಗಿಡಗಳು ಬೆಳೆದಿವೆ. ಮನೆಯಿಂದ ಬೆಳಿಗ್ಗೆ ಎಂಟು ಗಂಟೆಗೆ ಕುರಿ-ಮೇಕೆಗಳನ್ನು ಬಯಲಿಗೆ ಕರೆದೊಯ್ಯುವ ಕುರಿಗಾಹಿಗಳು ಹುಲ್ಲು ಸಿಗದ ಕಾರಣ ಮರಗಳಲ್ಲಿನ ಸೊಪ್ಪನ್ನು ದೋಟಿಯಿಂದ ಕಿತ್ತು ಹಾಕುತ್ತಾರೆ. ಇದರಿಂದ ಕುರಿ-ಮೇಕೆಗಳಿಗೆ ಅಲ್ಪಸ್ವಲ್ಪ ಮೇವು ಸಿಗುತ್ತಿದೆ.
ಕೆಲವು ಗ್ರಾಮಗಳಲ್ಲಿ ಕುಂಟೆಗಳನ್ನು ನಿರ್ಮಿಸಿದ್ದು, ಮೋಟರ್ನಿಂದ ನೀರು ತುಂಬಿಸಲಾಗುತ್ತಿದೆ.ಇದು ಇಲ್ಲಿನ 7-8 ಗ್ರಾಮದ ಕುರಿ, ಮೇಕೆಗಳಿಗೆ ಕುಡಿಯುವ ನೀರಿನ ಮೂಲವಾಗಿದೆ.
ಗುಳೇ ಹೊರಟ ಜನ:
ಉತ್ತರಕರ್ನಾಟಕದ ಬಹುತೇಕ ಕಡೆ ಕೆಲಸವಿಲ್ಲದೆ ಖಾಲಿ ಕುಳಿತಿರುವ ಜನರು ಗುಳೇ ಹೊರಟಿದ್ದಾರೆ.ರಾಯಚೂರು, ಕೊಪ್ಪಳ, ಬಳ್ಳಾರಿ ಸೇರಿದಂತೆ ಈ ಭಾಗದಲ್ಲಿರುವ ಜನರು ತಮ್ಮ ಹಸುಕರುಗಳನ್ನು ಮಾರಿ ಮನೆಗಳಿಗೆ ಬೀಗ ಜಡಿದು, ಬೆಂಗಳೂರು, ಗೋವಾ, ಮುಂಬೈನತ್ತ ಪ್ರಯಾಣ ಬೆಳೆಸಿದ್ದಾರೆ. ಯಾವುದೇ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳ ಬಸ್ ನಿಲ್ದಾಣಕ್ಕೆ ಹೋದರೆ ಇಂತಹ ದೃಶ್ಯಗಳು ಸರ್ವೇ ಸಾಮಾನ್ಯ.
ಮಳೆಗಾಲ ಆರಂಭವಾಗಲು ಕನಿಷ್ಟ ಒಂದು ತಿಂಗಳಾದರೂ ಬೇಕು.ಅಲ್ಲಿಯವರೆಗೂ ಪರಿಸ್ಥಿತಿಯನ್ನು ನಿಭಾಯಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.