![Karnataka-SSLC-Result-2019](http://kannada.vartamitra.com/wp-content/uploads/2019/04/Karnataka-SSLC-Result-2019-678x359.png)
ಬೆಂಗಳೂರು ಏ.30-ಬೆಂಗಳೂರು ಉತ್ತರ ಸೌಂದರ್ಯ ಶಾಲೆಯ ವಿದ್ಯಾರ್ಥಿನಿ ಭಾವನಾ 624 ಅಂಕ ಗಳಿಸಿ ಸೆಕೆಂಡ್ ಟಾಪರ್ ಆಗಿ ಹೊರಹೊಮ್ಮಿರುವುದಕ್ಕೆ ಇಡೀ ಶಾಲೆಯ ಸಿಬ್ಬಂದಿಗೆ ಬಹಳ ಸಂತೋಷವಾಗಿದೆ ಎಂದು ಮುಖ್ಯ ಶಿಕ್ಷಕಿ ದಾಕ್ಷಾಯಿಣಿ ಹರ್ಷ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾವನಾ ತರಗತಿಯಲ್ಲಿ ಶಿಕ್ಷಕರು ಮಾಡುವ ಪಾಠವನ್ನು ಅತ್ಯಂತ ಶ್ರದ್ಧೆಯಿಂದ ಆಲಿಸುತ್ತಿದ್ದಳು. ಅವಳಿಗೆ 625 ಅಂಕಗಳು ಬರಬಹುದೆಂದು ಎಣಿಸಿದ್ದೆವು. ಒಂದು ವಿಷಯದ ದಿನ ಅವರ ಮನೆಯಲ್ಲಿ ದುಃಖವಿತ್ತು. ಆದರೂ ಆಕೆ ಪರೀಕ್ಷೆಯನ್ನು ಧೈರ್ಯದಿಂದಲೇ ಬರೆದಿದ್ದಳು.
ಇಡೀ ಶಿಕ್ಷಕ ವೃಂದ ಅವಳಿಗೆ ಬೆಂಬಲ ನೀಡಿತ್ತು. ಅವಳು ಸೆಕೆಂಡ್ ಟಾಪರ್ ಆಗಿರುವುದು ನನಗೆ ಹೆಮ್ಮೆ ಎಂದು ಹೇಳಿದರು.
ಭಾವನಾ ತಂದೆ ಶಿವಶಂಕರ್ ಹಾಗೂ ತಾಯಿ ಮಾತನಾಡಿ, ನಮ್ಮ ಪುತ್ರಿ ಮನೆಯಲ್ಲಿ ಓದುತ್ತಲೇ ಇರಲಿಲ್ಲ. ದಿನದಲ್ಲಿ ಒಂದು ಗಂಟೆ ಓದಿದರೆ ಹೆಚ್ಚು. ನಾವೂ ಕೂಡ ಒತ್ತಡ ಹಾಕುತ್ತಿರಲಿಲ್ಲ. ಶಾಲೆಯಲ್ಲಿ ಅವರ ಟೀಚರ್ಗಳು ಮಾಡುವ ಪಾಠಗಳನ್ನು ಶ್ರದ್ಧೆಯಿಂದ ಆಲಿಸುತ್ತಿದ್ದಳು ಎಂದು ಹೇಳಿದರು.
ಪರೀಕ್ಷೆಯ ದಿನವೇ ಅವಳ ತಾತಾ ನಿಧನ ಹೊಂದಿದ್ದರು. ಆದರೂ ಅದೇ ದುಃಖದಲ್ಲೇ ಹೋಗಿ ಪರೀಕ್ಷೆ ಬರೆದಿದ್ದಳು. ವಿಜ್ಞಾನ ವಿಷಯದಲ್ಲಿ ಒಂದು ಅಂಕದ ವಿಷಯಕ್ಕೆ ಉತ್ತರ ಗೊತ್ತಿದ್ದರೂ ಬರೆಯಲಾಗಲಿಲ್ಲ ಎಂದು ಬೇಸರ ಪಟ್ಟುಕೊಂಡಿದ್ದಳು. ಹಾಗಾಗಿ ತನಗೆ 624ಅಂಕ ಬಂದೇ ಬರುತ್ತದೆ ಎಂದು ದೃಢವಾಗಿ ಹೇಳಿದ್ದಳು. ಅದು ನಿಜವಾಗಿದೆ.ಅವಳು ಸೆಕೆಂಡ್ ಟಾಪರ್ ಆಗಿರುವುದು ತುಂಬಾ ಹೆಮ್ಮೆಯ ವಿಷಯ ಎಂದು ತಂದೆ ಹರ್ಷ ವ್ಯಕ್ತಪಡಿಸಿದರು.