ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶ ಪ್ರಕಟ-ಶೇ.73.70 ವಿದ್ಯಾರ್ಥಿಗಳು ತೇರ್ಗಡೆ

ಬೆಂಗಳೂರು, ಏ.30- ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟವಾಗಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ರಾಜ್ಯದಲ್ಲಿ ಶೇ.73.70 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಕಳೆದ ವರ್ಷಕ್ಕಿಂತಲೂ 1.77ರಷ್ಟು ಹೆಚ್ಚು ಫಲಿತಾಂಶ ಬಂದಿದೆ.

ಪತ್ರಿಕಾಗೋಷ್ಠಿಯಲ್ಲಿಂದು ಫಲಿತಾಂಶದ ವಿವರ ಪ್ರಕಟಿಸಿದ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಅವರು, ರಾಜ್ಯದಲ್ಲಿ ಒಟ್ಟು 8,25,468 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ 6,08,336 ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಕಳೆದ ವರ್ಷ 8,38,088 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 6,02,802 ವಿದ್ಯಾರ್ಥಿಗಳು ಪಾಸಾಗಿ 71.93ರಷ್ಟು ಫಲಿತಾಂಶ ಬಂದಿತ್ತು. ಕಳೆದ ಮಾರ್ಚ್ 21 ರಿಂದ ಏಪ್ರಿಲ್ 4ರ ವರೆಗೆ ನಡೆದ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಏಪ್ರಿಲ್ 10 ರಿಂದ ಏಪ್ರಿಲ್ 25ರ ವರೆಗೆ ಮೌಲ್ಯಮಾಪನ ಮಾಡಲಾಯಿತು.ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳ 228 ಮೌಲ್ಯಮಾಪನ ಕೇಂದ್ರಗಳಲ್ಲಿ 58,876 ಮಂದಿ ಮೌಲ್ಯಮಾಪನ ಮಾಡಿದ್ದರು.

ಈ ಬಾರಿಯ ಫಲಿತಾಂಶದ ವಿಶೇಷವೆಂದರೆ, ಸರ್ಕಾರಿ ಶಾಲೆಗಳಲ್ಲಿ ಯಾವುದೂ ಶೂನ್ಯ ಫಲಿತಾಂಶ ಪಡೆದಿಲ್ಲ. ಆದರೆ, ಅನುದಾನಿತ 9 ಶಾಲೆಗಳು, ಅನುದಾನ ರಹಿತ 37 ಶಾಲೆಗಳು ಶೂನ್ಯ ಫಲಿತಾಂಶ ಪಡೆದಿವೆ.

593 ಸರ್ಕಾರಿ ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದರೆ 130ರಷ್ಟು ಅನುದಾನಿತ ಶಾಲೆಗಳು, 903ರಷ್ಟು ಅನುದಾನ ರಹಿತ ಶಾಲೆಗಳು ಸೇರಿ ಒಟ್ಟು 1626 ಶಾಲೆಗಳು ಶೇ.100ಕ್ಕೆ 100ರಷ್ಟು ಫಲಿತಾಂಶ ಪಡೆದಿವೆ.

ಜಿಲ್ಲಾವಾರು ಫಲಿತಾಂಶಗಳ ಪೈಕಿ ಈ ಬಾರಿ ಹಾಸನ ಮೊದಲ ಸ್ಥಾನದಲ್ಲಿದ್ದರೆ, ಯಾದಗಿರಿ ಕೊನೆಯ ಸ್ಥಾನದಲ್ಲಿದೆ.ಶಿಕ್ಷಣ ಇಲಾಖೆ ಇದೇ ಮೊದಲ ಬಾರಿಗೆ ಅಂಕಗಳ ಆಧಾರದ ಜತೆಗೆ ಗುಣಮಟ್ಟದ ಆಧಾರದ ಮೇಲೆಯೂ ಮೌಲ್ಯಮಾಪನ ನಡೆಸಿದೆ.ಅಂಕಗಳಿಕೆ ಮತ್ತು ಗುಣಮಟ್ಟ ಎರಡರಲ್ಲೂ ಹಾಸನ ಪ್ರಥಮ ಸ್ಥಾನ ಗಳಿಸಿದೆ.

ಪ್ರತಿ ಬಾರಿ ಪ್ರಥಮ ಸ್ಥಾನದಲ್ಲಿರುತ್ತಿದ್ದ ಉಡುಪಿ ಜಿಲ್ಲೆ ಈ ಬಾರಿ ಅಂಕ ಗಳಿಕೆಯಲ್ಲಿ 5ನೆ ಸ್ಥಾನಕ್ಕೆ ಕುಸಿದಿದ್ದು, ಗುಣಮಟ್ಟದಲ್ಲಿ 2ನೆ ಸ್ಥಾನದಲ್ಲಿದೆ.ಬೆಂಗಳೂರು ದಕ್ಷಿಣ, ರಾಯಚೂರು, ಯಾದಗಿರಿ ಈ ಮೂರೂ ಶೈಕ್ಷಣಿಕ ಜಿಲ್ಲೆಗಳು ಗುಣಮಟ್ಟ ಮತ್ತು ಅಂಕ ಗಳಿಕೆ ಎರಡರಲ್ಲೂ ಕೊನೆಯ ಸ್ಥಾನಗಳನ್ನು ಪಡೆದಿವೆ.

ಇದೇ ಮೊದಲ ಬಾರಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಎಸ್‍ಎಂಎಸ್ ಮೂಲಕ ಫಲಿತಾಂಶ ರವಾನಿಸಲಾಗಿದೆ.ಶಾಲೆಯ ಲಾಗಿನ್ ಐಡಿಯಲ್ಲಿ ವಿದ್ಯಾರ್ಥಿಗಳ ಮಾದರಿ ಅಂಕಪಟ್ಟಿ ಸಹಿತವಾಗಿ ಫಲಿತಾಂಶ ಬಿಡುಗಡೆ ಮಾಡಲಾಗಿದೆ.ಮಧ್ಯಾಹ್ನದ ನಂತರ ವೆಬ್‍ಸೈಟ್‍ಗಳಲ್ಲಿ ಫಲಿತಾಂಶ ಪ್ರಕಟಗೊಂಡಿದೆ ಎಂದು ಅವರು ತಿಳಿಸಿದರು.

ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ