ಕಲಬುರಗಿ, ಏ.30- ನಾನು ಹಣಕ್ಕಾಗಿ ಮಾರಾಟವಾಗಿದ್ದೇನೆ ಎಂಬುದನ್ನು ಕಾಂಗ್ರೆಸ್ ಹಿರಿಯ ನಾಯಕ ಎಂ.ಮಲ್ಲಿಕಾರ್ಜುನ ಖರ್ಗೆ ಇಲ್ಲವೇ ಅವರ ಪುತ್ರ ಪ್ರಿಯಾಂಕ ಖರ್ಗೆ ಸಾಬೀತು ಮಾಡಬೇಕು. ಇಲ್ಲವೇ ಇವರ ವಿರುದ್ದ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಕಲಬುರ್ಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಎಚ್ಚರಿಸಿದ್ದಾರೆ.
ಕಲಬುರಗಿಯಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನನ್ನ ಮೇಲೆ ಆರೋಪ ಮಾಡಲು ಯಾವುದೇ ವಿಷಯವಿಲ್ಲ. ಹೀಗಾಗಿ ಪದೇಪದೇ ಮಾರಾಟವಾಗಿದ್ದೀರಾ ಎಂದು ಆರೋಪ ಮಾಡುತ್ತಿದ್ದಾರೆ.ಮಲ್ಲಿಕಾರ್ಜುನ ಖರ್ಗೆ ತುಂಬಾ ಬಲಿಷ್ಠರಿದ್ದಾರೆ, ಪವರ್ಫುಲ್ ಆನ್ ದಿ ಅರ್ಥ್. ದಿ ಗ್ರೇಟ್ ಲೀಡರ್ ಮಲ್ಲಿಕಾರ್ಜುನ ಖರ್ಗೆ ಅವರು, ಯಾವುದಾದರೂ ತನಿಖಾ ಸಂಸ್ಥೆಯಿಂದ ತನಿಖೆ ಮಾಡಿಸಲಿ.ಜಗತ್ತಿನ ಯಾವುದೇ ಏಜೆನ್ಸಿ ಮೂಲಕ ತನಿಖೆ ಮಾಡಿಸಿ, ದುಡ್ಡು ಪಡೆದದ್ದು ಸಾಬೀತು ಮಾಡಿದರೆ, , ರಾಜಕೀಯ ನಿವೃತ್ತಿ ಪಡೆಯುವೆ. ಪದೇ ಪದೇ ಮಾರಾಟವಾಗಿದ್ದೀರ? ಎಂದು ಹೇಳಿಕೆ ಕೊಟ್ಟರೆ, ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಜಾಧವ್ ಎಚ್ಚರಿಕೆ ನೀಡಿದರು.
ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕ್ ಖರ್ಗೆಗೆ ಹಣ ಬಲ ಎಷ್ಟಿದೆ ಎಂದು ಎಲ್ಲರಿಗೂ ಗೊತ್ತು.ಪ್ರಜಾಪ್ರಭುತ್ವ ಅಂದರೆ, ಹಣದಿಂದ, ಹಣಕ್ಕಾಗಿ, ಹಣಕ್ಕೋಸ್ಕರ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಗವರ್ನಮೆಂಟ್ ಆಫ್ ಮಲ್ಲಿಕಾರ್ಜುನ ಖರ್ಗೆ, ಫಾರ್ ಪ್ರಿಯಾಂಕ್ ಖರ್ಗೆ, ಫಾರ್ ದಿ ಪಿಪಲ್ ಆಫ್ ಪ್ರಿಯಾಂಕ್ ಖರ್ಗೆ. ಇದು ಮಲ್ಲಿಕಾರ್ಜುನ ಖರ್ಗೆರವರ ಪ್ರಿನ್ಸಿಪಲ್ ಎಂದು ವಾಗ್ದಾಳಿ ನಡೆಸಿದರು.
ಮಲ್ಲಿಕಾರ್ಜುನ್ ಖರ್ಗೆ ಕಾಂಗ್ರೆಸ್ ಬಿಟ್ಟು ದೇವರಾಜ ಅರಸು ಜೊತೆ ಹೋಗಿ ಮತ್ತೆ ಪಕ್ಷಕ್ಕೆ ಮರಳಿದ್ದರು, ಮಾಜಿ ಸಿಎಂ ಸಿದ್ದರಾಮಯ್ಯ ಜೆಡಿಎಸ್ ಬಿಟ್ಟಿದ್ರು, ಇವರೆಲ್ಲ ದುಡ್ಡು ತಗೆದುಕೊಂಡು ಬಿಟ್ರಾ ಎಂದು ಪ್ರಶ್ನಿಸಿದರು.
ಡಾ.ರಾಮರಾವ್ ಮಹಾರಾಜರು ಬಿಜೆಪಿಗೆ ವೋಟ್ ಹಾಕಿ ಅಂದಿದ್ದಾರೆ.ಡಾ.ರಾಮರಾವ್ ಮಹಾರಾಜರು ಎಲ್ಲರ ಸ್ವತ್ತು, ನಮ್ಮ ದೇಶದ ಸುರಕ್ಷತೆಗಾಗಿ ವೋಟ್ ಹಾಕಿ ಎಂದು ಹೇಳಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಕಾಲಿಗೆ ಬಿದ್ದು ಸುಭಾಷ್ ರಾಠೋಡ್ ಚಿಂಚೋಳಿ ಟಿಕೆಟ್ ಪಡೆದಿದ್ದಾನೆ. ಆತ ಖರ್ಗೆಗೆ ನಿಷ್ಟವಂತಾನೇ ಹೊರೆತು ಬೇರೆಯವರಿಗಲ್ಲ. ಇಟ್ ಈಸ್ ಫೈಟ್ ಬಿಟ್ವಿನ್ ಪ್ರಿಯಾಂಕ್ ಖರ್ಗೆ ಮತ್ತು ಜಾಧವ್, ನಾಟ್ ಸುಭಾಷ್ ರಾಠೋಡ್.ಅವರು ಚುನಾವಣೆಯನ್ನು ವೈಯಕ್ತಿಕವಾಗಿ ತಗೆದುಕೊಂಡರೆ ನಾವು ನೋಡುತ್ತೇವೆ ಎಂದು ಹರಿಹಾಯ್ದರು.