ಕಾಂಗ್ರೇಸ್ಸಿನಲ್ಲಿ ಭುಗಿಲೆದ್ದ ಬಂಡಾಯ

ಧಾರವಾಡ/ಕಲಬುರಗಿ,ಏ.30- ಕುಂದಗೋಳ ಮತ್ತು ಚಿಂಚೋಳಿ ಕ್ಷೇತ್ರದ ನಾಮಪತ್ರ ಸಲ್ಲಿಕೆ ಅಂತ್ಯವಾದ ಬೆನ್ನಲ್ಲೇ ಕಾಂಗ್ರೆಸ್‍ನಲ್ಲಿ ಬಂಡಾಯ ಭುಗಿಲೆದ್ದಿದೆ. ಬಣ ರಾಜಕೀಯ ಜೋರಾಗಿದೆ.

ಕುಂದಗೋಳದಲ್ಲಿ ಸುಮಾರು 7 ಅಭ್ಯರ್ಥಿಗಳು ಬಂಡಾಯವಾಗಿ ಸ್ಪರ್ಧಿಸಿರುವುದು ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ. ಅದೇ ರೀತಿ ಚಿಂಚೋಳಿಯಲ್ಲಿ ಮೂವರು ನಾಯಕರು ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಬಂಡಾಯ ಸಾರಿದ್ದಾರೆ.ಈ ಕ್ರಮ ವರಿಷ್ಠರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ನಿನ್ನೆ ತಡ ರಾತ್ರಿ ಸಿದ್ದರಾಮಯ್ಯ ಕುಂದಗೋಳದಲ್ಲಿ ಸಭೆ ನಡೆಸಿ ಬಂಡಾಯಗಾರರ ಮನವೊಲಿಕೆ ಮಾಡುವ ಪ್ರಯತ್ನ ನಡೆಸಿದ್ದಾರೆ.7 ಮಂದಿಯಲ್ಲಿ ನಾಲ್ವರು ನಾಮಪತ್ರ ಹಿಂಪಡೆಯಲು ಒಪ್ಪಿದ್ದು ಇನ್ನೂ ಮೂವರು ನಾಮಪತ್ರ ಹಿಂತೆಗೆದುಕೊಳ್ಳಲು ಒಪ್ಪದೇ ಇರುವುದು ಕಾಂಗ್ರೆಸ್ಸಿಗೆ ಬಂಡಾಯದ ಭೀತಿ ಎದುರಾಗಿದೆ.

ಬಂಡಾಯಗಾರರೊಂದಿಗೆ ಮಾತುಕತೆ ನಡೆಸಿದ ಸಿದ್ದರಾಮಯ್ಯ ಎಲ್ಲರೂ ಕಣದಿಂದ ಹಿಂದೆ ಸರಿದು ಪಕ್ಷದ ಅಧಿಕೃತ ಅಭ್ಯರ್ಥಿ ಪರ ಕೆಲಸ ಮಾಡಬೇಕು. ನಿಮ್ಮ ಬೇಡಿಕೆಗಳೇನಿದ್ದರೂ ಈಡೇರಿಸಲು ಸಿದ್ದರಿದ್ದೇವೆ ಎಂದು ಭರವಸೆ ನೀಡಿದರು.ನಾಳೆಯೊಳಗೆ ನಾಮಪತ್ರವನ್ನು ಹಿಂಪಡೆಯಿರಿ ಎಂದು ಸೂಚನೆ ನೀಡಿದ್ದಾರೆ.

ಶಿವಾನಂದ ಬೆಂತೂರ್, ಸುರೇಶ್ ಸವಣೂರ್ ಹಾಗೂ ನದಾಫ್ ಇವರು ನಾಮಪತ್ರ ವಾಪಸ್ ಪಡೆಯಲು ಹಿಂದೇಟು ಹಾಕುತ್ತಿದ್ದು , ಬೆಂಬಲಿಗರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ. ಎಲ್ಲರೂ ಒಟ್ಟಾಗಿ ಕುಸುಮಾ ಶಿವಳ್ಳಿಯವರ ಪರವಾಗಿ ಪ್ರಚಾರ ನಡೆಸಿ ಗೆಲುವಿಗೆ ಸಿದ್ಧರಾಗಬೇಕೆಂದು ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಮನವಿ ಮಾಡಿದ್ದಾರೆ.

ಅತ್ತ ಚಿಂಚೋಳಿಯಲ್ಲೂ ಕೂಡಾ ಪಕ್ಷಕ್ಕೆ ಬಂಡಾಯದ ಭೀತಿ ಎದುರಾಗಿದೆ. ಪಕ್ಷದ ಅಧಿಕೃತ ಅಭ್ಯರ್ಥಿ ಸುಭಾಶ್ ರಾಠೋಡ್ ಅವರ ವಿರುದ್ಧ ಬಾಬುರಾವ್ ಚೌವ್ಹಾಣ್, ಬಾಬು ಹೊನ್ನಾನಾಯಕ್ ಅವರು ಅಸಮಾಧಾನಗೊಂಡಿದ್ದಾರೆ. ಈ ಇಬ್ಬರು ಪ್ರಬಲ ಆಕಾಂಕ್ಷಿಯಾಗಿದ್ದರು.

ಟಿಕೆಟ್ ಕೈತಪ್ಪಿದ್ದಕ್ಕೆ ತೀವ್ರ ಅಸಮಾಧಾನಗೊಂಡಿರುವ ಅವರು ಪ್ರಚಾರ ಕಣದಿಂದ ದೂರ ಉಳಿದಿದ್ದಾರೆ ಅಲ್ಲದೇ ನಿನ್ನೆ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಹಾಜರಿರಲಿಲ್ಲ. ಇವರು ಅಸಮಾಧಾನಗೊಂಡಿರುವುದರಿಂದ ಬಂಜಾರ ಸಮುದಾಯದ ಮತಗಳು ಕೈತಪ್ಪುವ ಭೀತಿ ಎದುರಾಗಿದೆ. ಹೀಗಾಗಿ ಖುದ್ದು ಮಲ್ಲಿಕಾರ್ಜುನ ಖರ್ಗೆಯವರೇ ಬಂಡಾಯ ಶಮನಗೊಳಿಸಲು ಕಣಕ್ಕಿಳಿದಿದ್ದಾರೆ.ಎಲ್ಲಾ ಅತೃಪ್ತರೊಂದಿಗೆ ಮಾತುಕತೆ ನಡೆಸಲು ಮುಂದಾಗಿದ್ದಾರೆ.

ಪಕ್ಷದ ಅಭ್ಯರ್ಥಿ ಪರ ಎಲ್ಲರೂ ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ.ಈ ಮೂಲಕ ದೇಶಕ್ಕೆ ಒಂದು ಸಂದೇಶ ನೀಡಬೇಕಿದೆ.ಕುಟುಂಬ ರಾಜಕಾರಣ ವಿರೋಧಿಸಿ ಟೀಕೆ ಮಾಡುವವರಿಗೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ