ಬೆಂಗಳೂರು, ಏ.29- 2025ರ ವೇಳೆಗೆ ರಾಜ್ಯವನ್ನು ಮಲೇರಿಯಾ ಮುಕ್ತ ಮಾಡಲು ಸಾರ್ವಜನಿಕರು ಕೈ ಜೋಡಿಸಬೇಕೆಂದು ಜಿಲ್ಲಾ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ಟಿ.ಕೆ. ಸುನಂದ ತಿಳಿಸಿದರು.
ವಿಶ್ವ ಮಲೇರಿಯಾ ದಿನದ ಅಂಗವಾಗಿ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
2019ರಲ್ಲಿ ಯಾವುದೇ ಮಲೇರಿಯಾ ಪ್ರಕರಣಗಳು ಕಂಡು ಬಂದಿಲ್ಲ. ಮಲೇರಿಯಾ ರೋಗಾಣವು ಕಣ್ಣಿಗೆ ಕಾಣಿಸದ ಒಂದು ಅತಿಸಣ್ಣ ಕ್ರಿಮಿ. ಇದಕ್ಕೆ ಪರಾವಲಂಬಿ ಜೀವಿ ಎಂದು ಕರೆಯಲಾಗುತ್ತದೆ. ಈ ಪರಾವಲಂಬಿ ಜೀವಿಯನ್ನು ಸೂಕ್ಷ್ಮದರ್ಶಕ ಯಂತ್ರದಿಂದ ಮಾತ್ರ ನೋಡಲು ಸಾಧ್ಯ. ಅನಾಫೀಲೀಸ್ ಜಾತಿಯ ಹೆಣ್ಣು ಸೊಳ್ಳೆಗಳು ಮಲೇರಿಯಾ ರೋಗವನ್ನು ಒಬ್ಬರಿಂದೊಬ್ಬರಿಗೆ ಹರಡುತ್ತದೆ ಎಂದು ತಿಳಿಸಿದರು.
ಶುಚಿನೀರಿನಲ್ಲೂ ಸಹ ಅನಾಫೀಲೀಸ್ ಎಂಬ ಸೊಳ್ಳೆ ಕಂಡು ಬರುತ್ತದೆ. ಪ್ರತಿನಿತ್ಯವೂ ಮಲಗುವಾಗ ಸೊಳ್ಳೆ ಪರದೆ ಕಟ್ಟಿಕೊಂಡು ಮಲಗಬೇಕು. ಮನೆಯಲ್ಲಿ ನೀರನ್ನು ಮುಚ್ಚಿಡಬೇಕು. ಮನೆಯ ಸುತ್ತಮುತ್ತು ಶುಚಿತ್ವವನ್ನು ಕಾಪಾಡಬೇಕು ಎಂದು ಸಲಹೆ ನೀಡಿದರು.
ಯಾವುದೇ ಜ್ವರವಿರಲಿ ತಡ ಮಾಡದೆ ರಕ್ತಪರೀಕ್ಷೆ ಮಾಡಿಸಬೇಕು. ಕ್ಲೋರೋಕ್ವೀನ್ ಮಾತ್ರೆಗಳನ್ನು ತೆಗೆದುಕೊಳ್ಳುವುದು ರಕ್ತಪರೀಕ್ಷೆಯಲ್ಲಿ ಮಲೇರಿಯಾ ರೋಗವೆಂದು ದೃಢಪಟ್ಟರೆ ಚಿಕಿತ್ಸೆಗೆ ಒಳಗಾಗಬೇಕು ಎಂದು ಹೇಳಿದರು.
2019ರಲ್ಲಿ ರಾಜ್ಯದಲ್ಲಿ ಯಾವುದೇ ಮಲೇರಿಯಾ ಪ್ರಕರಣಗಳು ಕಂಡು ಬಂದಿಲ್ಲ. 115 ಪ್ರಾಥಮಿಕ ಕೇಂದ್ರಗಳಲ್ಲೂ ರಕ್ತಲೇಪನ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದರು.
ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕೆ.ಎಸ್.ಪ್ರಕಾಶ್ ಮತ್ತಿತರರು ಇದ್ದರು.