ನಾಳೆ ಐಪಿಎಲ್ ಟಿ-20 ಪಂದ್ಯದ ಹಿನ್ನಲೆ-ಕೆಎಸ್‍ಸಿಎ ಸ್ಟೇಡಿಯಂ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ನಿರ್ಬಂಧನೆ

ಬೆಂಗಳೂರು, ಏ.29-ನಗರದ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಾಳೆ ಆರ್‍ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಐಪಿಲ್ ಟಿ-20 ಕ್ರಿಕೆಟ್ ಪಂದ್ಯ ನಡೆಯಲಿದ್ದು, ಪಂದ್ಯ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ವಾಹನಗಳಲ್ಲಿ ಬರುವುದರಿಂದ ಕೆಎಸ್‍ಸಿಎ ಸ್ಟೇಡಿಯಂ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ನಿರ್ಬಂಧನೆ ಮಾಡಲಾಗಿರುತ್ತದೆ.

ನಾಳೆ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 11.30ರವರೆಗೆ ವಾಹನಗಳ ನಿಲುಗಡೆಯನ್ನು ಕ್ವೀನ್ಸ್ ರಸ್ತೆ, ಬಾಳೇಕುಂದ್ರಿ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ರಸ್ತೆಯ ಎರಡೂ ಕಡೆ ನಿಷೇಧಿಸಲಾಗಿದೆ.

ಎಂ.ಜಿ.ರಸ್ತೆಯಲ್ಲಿ ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ರಸ್ತೆಯ ಎರಡೂ ಕಡೆ, ಲಿಂಕ್ ರಸ್ತೆಯಲ್ಲಿ ಎಂ.ಜಿ.ರಸ್ತೆಯಿಂದ ಕಬ್ಬನ್ ರಸ್ತೆವರೆಗೆ, ರಾಜಭವನ ರಸ್ತೆ, ಟಿ.ಚೌಡಯ್ಯ ರಸ್ತೆ ಮತ್ತು ರೇಸ್‍ಕೋರ್ಸ್ ರಸ್ತೆಗಳಲ್ಲಿ, ಸೆಂಟ್ರಲ್ ಸ್ಟ್ರೀಟ್ ರಸ್ತೆಯಲ್ಲಿ ರಸ್ತೆ ಎರಡೂ ಕಡೆ, ಕಬ್ಬನ್ ರಸ್ತೆಯಲ್ಲಿ, ಸಿಟಿಓ ವೃತ್ತದಿಂದ ಡಿಕೆನ್ಸ್‍ನ್ ರಸ್ತೆ ಜಂಕ್ಷನ್‍ವರೆಗೆ ರಸ್ತೆಯ ಎರಡೂ ಕಡೆ ಕಬ್ಬನ್ ರಸ್ತೆಯಲ್ಲಿ ಕಾಮರಾಜ ರಸ್ತೆ ಜಂಕ್ಷನ್‍ನಿಂದ ಡಿಕೆನ್ಸ್‍ನ್ ರಸ್ತೆ ಜಂಕ್ಷನ್‍ವರೆಗೆ ಬಿಎಂಟಿಸಿ ಬಸ್‍ಗಳನ್ನು ಹೊರತುಪಡಿಸಿ ಇತರೆ ಎಲ್ಲಾ ತರದ ವಾಹನಗಳ ನಿಲುಗಡೆಯನ್ನು ನಿಷೇಧಿಸಿದೆ.

ನಿಲುಗಡೆಗೆ ವ್ಯವಸ್ಥೆ:
ಪಂದ್ಯ ವೀಕ್ಷಣೆ ಮಾಡಲು ಬರುವ ಸಾರ್ವಜನಿಕರ ವಾಹನಗಳನ್ನು ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನ ಮತ್ತು ಯುಬಿಸಿಟಿ ನಿಲುಗಡೆ ಸ್ಥಳದಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

ಶಿವಾಜಿನಗರ ಬಸ್ ನಿಲ್ದಾಣದ 1ನೇ ಮಹಡಿಯಲ್ಲಿ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ. ಕೆಎಸ್‍ಸಿಎ ಸದಸ್ಯರ ವಾಹನಗಳನ್ನು ಬೌರಿಂಗ್ ಇನ್ಸ್ಟಿಟ್ಯೂಟ್ ಮತ್ತು ಸೆಂಟ್ ಜೋಸೆಫ್ (ಯುರೋಪಿಯನ್) ಬಾಲಕರ ಶಾಲೆ ಮೈದಾನ (ಮ್ಯೂಸಿಯಂ ರಸ್ತೆ) ಇಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತಮುತ್ತ ವಾಹನಗಳ ನಿಲುಗಡೆ ಸ್ಥಳ ಕೊರತೆ ಇರುವುದರಿಂದ ಹಾಗೂ ಕ್ರೀಡಾಂಗಣ ಸುತ್ತಮುತ್ತ ಸಂಚಾರ ದಟ್ಟಣೆ ತಪ್ಪಿಸಲು ಕ್ರಿಕೆಟ್ ಪಂದ್ಯ ವೀಕ್ಷಣೆಗೆ ಬರುವ ಪ್ರೇಕ್ಷಕರು ಸಾರ್ವಜನಿಕ ಸಾರಿಗೆ (ಬಿಎಂಟಿಸಿ) ವಾಹನಗಳನ್ನು ಹಾಗೂ ಮೆಟ್ರೋ ಸೇವೆಯನ್ನು ಬಳಸಲು ಕೋರಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ