ಸಚಿವ ಡಿ.ಕೆ.ಶಿವಕುಮಾರ್ ಅವರ ತಾಯಿ ಹೆಸರಿನಲ್ಲೆ ಬೇನಾಮಿ ಆಸ್ತಿ-ಜಪ್ತಿ ಮಾಡಲು ಮುಂದಾಗಿರುವ ಐಟಿ ಇಲಾಖೆ

ಬೆಂಗಳೂರು, ಏ.26- ಪ್ರಭಾವಿ ಸಚಿವ ಡಿ.ಕೆ.ಶಿವಕುಮಾರ್ ಅವರು ತನ್ನ ತಾಯಿ ಹೆಸರಿನಲ್ಲಿ ಹೊಂದಿರುವ ನೂರಾರು ಕೋಟಿ ಮೌಲ್ಯದ 20 ಎಕರೆ ಬೇನಾಮಿ ಆಸ್ತಿಯನ್ನು ಜಪ್ತಿ ಮಾಡಲು ಆದಾಯ ತೆರಿಗೆ ಇಲಾಖೆ ಮುಂದಾಗಿದೆ.

ಶಿವಕುಮಾರ್ ತಾಯಿ ಗೌರಮ್ಮ ಹೆಸರಿನಲ್ಲಿ ನೂರಾರು ಕೋಟಿ ರೂ. ಬೇನಾಮಿ ಆಸ್ತಿ ಹೊಂದಿರುವುದಾಗಿ ಐಟಿ ಅಧಿಕಾರಿಗಳ ತನಿಖೆಯಿಂದ ಬೆಳಕಿಗೆ ಬಂದಿದೆ.

ಸಚಿವರ ತಾಯಿ ಗೌರಮ್ಮ ಬೇನಾಮಿ ಹೆಸರಿನಲ್ಲಿ ಹೊಂದಿದ್ದ 20 ಎಕರೆ ಜಮೀನು ಮತ್ತು ಕಟ್ಟಡ ಜಪ್ತಿ ಮಾಡುವುದಾಗಿ ತೆರಿಗೆ ಇಲಾಖೆ ತಾತ್ಕಾಲಿಕ ಆದೇಶ ಹೊರಡಿಸಿದೆ.

ಅಲ್ಲದೇ ಮುಂದಿನ ಮೂರು ತಿಂಗಳಿನಲ್ಲಿ ಈ ಆಸ್ತಿ ಬಗ್ಗೆ ಸೂಕ್ತ ಉತ್ತರ ನೀಡಬೇಕು.ಇಲ್ಲದೇ ಹೋದಲ್ಲಿ ತತ್‍ಕ್ಷಣವೇ ಆಸ್ತಿ ಜಪ್ತಿ ಮಾಡಲಾಗುವುದು ಎಂದು ಸಚಿವ ಡಿ.ಕೆ ಶಿವಕುಮಾರ್ ಅವರಿಗೆ 42 ಪುಟಗಳ ಮುಟ್ಟುಗೋಲು ಆದೇಶವನ್ನು ಹೊರಡಿಸಲಾಗಿದೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಲು ಮುಂದಾಗಿರುವ ಆಸ್ತಿ ಸಂಬಂಧ ಶಿವಕುಮಾರ್ ಸೂಕ್ತ ದಾಖಲೆ ಸಲ್ಲಿಸಬೇಕಿದೆ.ಒಂದು ವೇಳೆ ಸಲ್ಲಿಸುವಲ್ಲಿ ವಿಫಲರಾದರೆ ಈ ಬೇನಾಮಿ ಆಸ್ತಿಯನ್ನು ಜಪ್ತಿ ಮಾಡಲಾಗುತ್ತದೆ.

ಶಿವಕುಮಾರ್ ತಮ್ಮ ಕುಟುಂಬಸ್ಥರ ಹೆಸರಿನಲ್ಲಿ ನೂರಾರು ಕೋಟಿ ರೂ.ಬೇನಾಮಿ ಆಸ್ತಿ ಹೊಂದಿದ್ದಾರೆ.ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಈಗಾಗಲೇ ಕೆಲ ಸಾಕ್ಷ್ಯಗಳು ಲಭಿಸಿದ್ದು, ಸದ್ಯದಲ್ಲೇ ಅವರ ಇನ್ನಷ್ಟು ಅಕ್ರಮ ಆಸ್ತಿಗಳನ್ನು ಜಪ್ತಿ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಐಟಿ ಮೂಲಗಳು ತಿಳಿಸಿವೆ.

ತನಿಖೆ ಬಳಿಕ ಮುಟ್ಟುಗೋಲು:
ತಾಯಿ, ಪತ್ನಿ ಸೇರಿ ಇತರರ ಹೆಸರಲ್ಲಿ ಶಿವಕುಮಾರ್ ಬೇನಾಮಿ ಆಸ್ತಿ ಮಾಡಿರುವುದು ಕಂಡು ಬಂದಿದೆ.ಈ ಬಗ್ಗೆ ಐಟಿ ಅಧಿಕಾರಿಗಳ ವಿಚಾರಣೆ ಮುಂದುವರಿದಿದೆ.ಐಟಿ ಇಲಾಖೆ ತನಿಖೆ ಮುಗಿದ ಬಳಿಕ ಸರ್ಕಾರ ಅಧಿಕೃತವಾಗಿ ಮುಟ್ಟಗೋಲು ಹಾಕಿಕೊಳ್ಳಲಿದೆ. ಈ ಹಿಂದೆ 2017ರ ಆಗಸ್ಟ್‍ನಲ್ಲಿ ಐಟಿ ಅಧಿಕಾರಿಗಳು ಶಿವಕುಮಾರ್ ಮನೆ ಮೇಲೆ ನಡೆಸಿದ ದಾಳಿ ವೇಳೆ ಸುಮಾರು 400 ಕೋಟಿ ರೂ.ಗೂ ಅಧಿಕ ಮೌಲ್ಯದ ಅಘೋಷಿತ ಆಸ್ತಿ ಪತ್ತೆಯಾಗಿತ್ತು. ಆ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿದಾಗ ಹಲವರ ಹೆಸರಲ್ಲಿ ಆಸ್ತಿ ಮಾಡಿರುವುದು ಬೆಳಕಿಗೆ ಬಂದಿತ್ತು ಎನ್ನುತ್ತಿವೆ ಮೂಲಗಳು.

ಐಟಿ ಮುಂದೆ ಡಿಕೆಶಿ ಅಮ್ಮ ಹೇಳಿದ್ದೇನು?:
ನನ್ನ ಹೆಸರಿನಲ್ಲಿ 60 ಎಕರೆ ಕೃಷಿ ಜಮೀನಿದೆ. ಆಲಹಳ್ಳಿ, ಕೋಡಿಹಳ್ಳಿ, ಬಿಡದಿ, ಹೊಸಕೆರೆಹಳ್ಳಿ, ಕೋಗಿಲು, ದೊಡ್ಡಾಲಹಳ್ಳಿ, ಕನಕಪುರ, ಬಿ.ಎಂ ಕಾವಲ್, ಉಯ್ಯಂಬನಹಳ್ಳಿಯಲ್ಲಿ ಜಮೀನು ಹೊಂದಿದ್ದೇನೆ. 1 ಎಕರೆಗೆ 30 ಸಾವಿರದಿಂದ 1 ಲಕ್ಷ ಲಾಭ ಬರುತ್ತಿತ್ತು.ಇದೇ ಲಾಭದಿಂದಲೇ ಹಿಂದೆ ಜಮೀನು ಖರೀದಿಸಿದ್ದೆ.

ಆದರೆ ಯಾವುದೇ ಬ್ಯಾಂಕ್ ವಹಿವಾಟಿನ ಮಾಹಿತಿ ಇಲ್ಲ ಎಂದಿದ್ದಾರೆ.

ಡಿಕೆಶಿ ಬೇನಾಮಿ ಗೇಮ್:
ಸಚಿವ ಡಿ.ಕೆ ಶಿವಕುಮಾರ್ 2013 ರಲ್ಲಿ 850 ಕೋಟಿ ಮೌಲ್ಯದ ಆಸ್ತಿ ತೋರಿಸಿದ್ದರು.ಬಳಿಕ ಪ್ರತಿ ವರ್ಷವೂ ಶೇ.230ರಷ್ಟು ಆಸ್ತಿ ಏರಿಕೆ ಆಗ್ತಾ ಇತ್ತು ಎಂದು ಹೇಳಲಾಗುತ್ತಿತ್ತು.ಆದರೆ, ಕಾಂಗ್ರೆಸ್ ಕಟ್ಟಾಳು ಬೇನಾಮಿ ಆಸ್ತಿ ಮಾಡಿ ಕುಟುಂಬಸ್ಥರಿಗೆ ಗಿಫ್ಟ್ ಡೀಡ್ ಕೊಟ್ಟಿರುವುದಾಗಿ ಬೆಳಕಿಗೆ ಬಂದಿದೆ.

ಬೇನಾಮಿ ಆಸ್ತಿ ನಿಯಂತ್ರಣ ಕಾಯೆ
ಕೇಂದ್ರ ಸರ್ಕಾರ 2016ರಲ್ಲಿ ಬೇನಾಮಿ ಆಸ್ತಿ ನಿಯಂತ್ರಣ ಕಾಯ್ದೆ ಜಾರಿಗೆ ತಂದಿತ್ತು.ಬೇನಾಮಿ ಆಸ್ತಿ ಹೊಂದಿದ್ದರೆ ಅಂಥವರಿಗೆ ಬೇನಾಮಿ ಆಸ್ತಿ ನಿಯಂತ್ರಣ ಕಾಯ್ದೆ ಪ್ರಕಾರ ಭಾರಿ ಪ್ರಮಾಣದ ದಂಡ ಹಾಗೂ ಶಿಕ್ಷೆ ವಿಧಿಸಲಾಗುತ್ತದೆ.ಈ ಕಾಯ್ದೆ ಪ್ರಕಾರ 1 ಕೋಟಿ ರೂ.ಮೌಲ್ಯದ ಬೇನಾಮಿ ಆಸ್ತಿ ಹೊಂದಿರುವುದು ಪತ್ತೆಯಾದರೆ 7 ವರ್ಷ ಜೈಲು ಶಿಕ್ಷೆ ಮತ್ತು 25 ಲಕ್ಷ ರೂ.ದಂಡ ವಿಧಿಸಲಾಗುತ್ತದೆ. ಅಲ್ಲದೆ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವಿದೆ.ಬೇನಾಮಿ ಆಸ್ತಿ ಬಗ್ಗೆ ತಪ್ಪು ಮಾಹಿತಿ ಕೊಟ್ಟಿರುವುದು ಕಂಡು ಬಂದರೆ ಪ್ರಸ್ತುತ ಆ ಆಸ್ತಿಗೆ ಇರುವ ಬೆಲೆಯ ಶೇ.10 ದಂಡ ವಿಧಿಸಿ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ