ಚುನಾವಣೆ ಮುಗಿದರೂ ಮಂಡ್ಯದಲ್ಲಿ ಇನ್ನೂ ಆರದ ಚುನಾವಣೆ ಕಾವು

ಬೆಂಗಳೂರು,ಏ.26- ಚುನಾವಣೆ ಮುಗಿದರೂ ಹೈವೋಲ್ಟೆಜ್ ಕ್ಷೇತ್ರವಾಗಿದ್ದ ಮಂಡ್ಯದಲ್ಲಿ ಮಾತ್ರ ಇನ್ನೂ ಚುನಾವಣಾ ಕಾವು ಆರಿಲ್ಲ. ಎಲ್ಲೆ ಹೋದರೂ ಯಾರು ಗೆಲ್ಲುತ್ತಾರೆ ಎಂಬ ಬಗ್ಗೆಯೇ ಬಿಸಿಬಿಸಿ ಚರ್ಚೆಯಾಗುತ್ತಿದೆ.

ಮಂಡ್ಯ ಜಿಲ್ಲೆಯ ರಸ್ತೆರಸ್ತೆಯ ಮೂಲೆಗಳಲ್ಲಿ, ಟೀ ಅಂಗಡಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಮನೆಯ ಜಗುಲಿಗಳಲ್ಲಿ ಯಾರು ಗೆಲ್ಲುತ್ತಾರೆ ಎಂಬುದೇ ಪ್ರಧಾನ ವಿಷಯವಾಗಿದೆ.

ಸುಮಲತಾ ಅಂಬರೀಷ್ ಅಥವಾ ನಿಖಿಲ್ ಕುಮಾರಸ್ವಾಮಿ ಇಬ್ಬರಲ್ಲಿ ಯಾರು ಸಂಸತ್ತು ಪ್ರವೇಶಿಸುತ್ತಾರೆ ಮತ್ತು ಎಷ್ಟು ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಎಂಬ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.

ಈ ಕುರಿತು ಜಿಲ್ಲೆಯಲ್ಲಿ ಬೆಟ್ಟಿಂಗ್ ದಂಧೆ ಕೂಡ ನಡೆಯುತ್ತಿದ್ದು, ನಿಖಿಲ್ ಕುಮಾರಸ್ವಾಮಿ ಸೋತರೆ ರಾಜ್ಯದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಮತ್ತು ಸರ್ಕಾರ ಉಳಿಯುತ್ತದೋ ಅಥವಾ ಉರುಳುತ್ತದೆಯೋ ಎಂಬುದೇ ತೀವ್ರ ಚರ್ಚೆಯಾಗುತ್ತಿರುವ ವಿಷಯವಾಗಿದೆ.

ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ದಾಖಲೆಯ ಶೇಕಡಾ 80.31ರಷ್ಟು ಮತದಾನವಾಗಿದೆ, 13 ಲಕ್ಷದ 74 ಸಾವಿರದ 189 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಸುಮಲತಾ ಮತ್ತು ನಿಖಿಲ್ ಕುಮಾರಸ್ವಾಮಿ ಬೆಂಬಲಿಗರು ಮತಗಟ್ಟೆಗಳ ಬಳಿ ತೆರಳಿ ಅಲ್ಲಿನ ಬೆಳವಣಿಗೆಗಳನ್ನು ಗಮನಿಸಿ ಲೆಕ್ಕಾಚಾರ ಹಾಕುತ್ತಿದ್ದಾರೆ.ಅನೇಕ ಹಳ್ಳಿಗಳಲ್ಲಿ ಎರಡೂ ಕಡೆಯವರ ಬೆಂಬಲಿಗರ ಮಧ್ಯೆ ಜಗಳ, ವ್ಯಾಗ್ಯುದ್ಧಗಳು ನಡೆಯುತ್ತಿವೆ. ತಮ್ಮ ಬೆಂಬಲಿಗರ ಮೇಲೆ ಜೆಡಿಎಸ್ ಕಾರ್ಯಕರ್ತರು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಸುಮಲತಾ ಅಂಬರೀಷ್ ಆರೋಪಿಸಿದ್ದಾರೆ.

ಮಂಡ್ಯ ಜಿಲ್ಲೆಯ ಮೇಲುಕೋಟೆ, ಶ್ರೀರಂಗಪಟ್ಟಣ, ಕೆ ಆರ್ ಪೇಟೆ ಜೆಡಿಎಸ್ ನ ಭದ್ರ ಕೋಟೆಯಾಗಿದ್ದರೂ ಕೂಡ ಸುಮಲತಾ ಬೆಂಬಲಿಗರು ಹೆಚ್ಚಾಗಿ ಇರುವುದರಿಂದ ಇಲ್ಲಿ ಅವರೇ ಗೆಲ್ಲುತ್ತಾರೆ ಎಂದು ಅವರ ಬೆಂಬಲಿಗರು ಮತ್ತು ಕಾಂಗ್ರೆಸ್ ನ ಬಂಡಾಯ ಶಾಸಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ