ವಿಧಾನಸಭಾ ಎರಡು ಕ್ಷೇತ್ರಗಳ ಉಪಚುನಾವಣೆ- ಬಿಜೆಪಿಯಿಂದ ಇಂದು ಕೇಂದ್ರ ವರಿಷ್ಟರಿಗೆ ಪಟ್ಟಿ ರವಾನೆ

ಬೆಂಗಳೂರು,ಏ.26-ಮುಂದಿನ ತಿಂಗಳು 19ರಂದು ನಡೆಯಲಿರುವ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ಇಂದು ಪಟ್ಟಿಯನ್ನು ಕೇಂದ್ರ ವರಿಷ್ಠರಿಗೆ ರವಾನಿಸಲಿದೆ.

ಕಲಬುರಗಿ ಜಿಲ್ಲೆ ಚಿಂಚೋಳಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಡಾ.ಉಮೇಶ್ ಜಾಧವ್ ಅವರ ಪುತ್ರ ಅವಿನಾಶ್ ಜಾಧವ್ ಹಾಗೂ ಧಾರವಾಡ ಜಿಲ್ಲೆಯ ಕುಂದಗೋಳ ವಿಧಾನಸಭಾ ಕ್ಷೇತ್ರದಿಂದ ಎಸ್.ಐ.ಚಿಕ್ಕನಗೌಡರ್ ಅವರನ್ನು ಬಿಜೆಪಿ ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಲಾಗುತ್ತಿದೆ.

ಚಿಂಚೋಳಿಯಿಂದ ಉಮೇಶ್ ಜಾಧವ್ ಸಹೋದರ ರಾಮಚಂದ್ರ ಜಾಧವ್, ಮಾಜಿ ಸಚಿವ ಸುನಿಲ್ ವಲ್ಯಾಪುರೆ ಪ್ರಬಲ ಆಕಾಂಕ್ಷಿಗಳಾಗಿದ್ದರು. ಅಂತಿಮವಾಗಿ ತಮ್ಮ ಪುತ್ರನಿಗೆ ಟಿಕೆಟ್ ನೀಡಿದರೆ ಗೆಲ್ಲಿಸುವ ಹೊಣೆಗಾರಿಕೆಯನ್ನು ನಾನೇ ನೋಡಿಕೊಳ್ಳುತ್ತೇನೆ ಎಂದು ಜಾಧವ್ ಹೇಳಿರುವುದರಿಂದ ಪಕ್ಷ ಅವರ ಪುತ್ರನಿಗೆ ಮಣೆ ಹಾಕಿದೆ.

ಟಿಕೆಟ್ ಸಿಗದೆ ಮುನಿಸಿಕೊಂಡಿರುವ ಸುನೀಲ್ ವಲ್ಯಾಪುರೆ ಕೊನೆ ಕ್ಷಣದಲ್ಲಿ ಪಕ್ಷಕ್ಕೆ ಕೈ ಕೊಟ್ಟರೆಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬುದನ್ನು ಪಕ್ಷದ ನಾಯಕರು ಮನಗಂಡಿರುವುದರಿಂದ ಅವರಿಗೆ ಮೇಲ್ಮನೆಯಲ್ಲಿ ಸ್ಥಾನ ನೀಡುವ ಭರವಸೆ ಕೊಡಲಾಗಿದೆ.

ಸುನೀಲ್ ವಲ್ಯಾಪುರೆಯನ್ನು ಕಾಂಗ್ರೆಸ್ ಸೆಳೆಯಲು ನಡೆಸಿರುವ ಪ್ರಯತ್ನ ಯಡಿಯೂರಪ್ಪನವರ ಗಮನಕ್ಕೆ ಬಂದಿದೆ. ನಿನ್ನೆಯೇ ಅವರ ಜೊತೆ ಮಾತುಕತೆ ನಡೆಸಿ ಯಾವುದೇ ಕಾರಣಕ್ಕೂ ಪಕ್ಷ ಬಿಡುವಂತಹ ನಿರ್ಧಾರವನ್ನು ಕೈಗೊಳ್ಳಬಾರದು.

ಮೇಲ್ಮನೆಗೆ ನಿಮ್ಮನ್ನು ಆಯ್ಕೆ ಮಾಡುವ ಜವಾಬ್ದಾರಿ ನನ್ನದು ಎಂದು ಯಡಿಯೂರಪ್ಪ ಆಶ್ವಾಸನೆ ನೀಡಿದ ನಂತರವೇ ವಲ್ಯಾಪುರೆ ಪಕ್ಷ ಬಿಡುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ಕೊನೆಯ ಅವಕಾಶ:
ಕುಂದಗೋಳದಿಂದ ಯಡಿಯೂರಪ್ಪನವರ ಸಂಬಂಧಿಯೂ ಆಗಿರುವ ಎಸ್.ಐ.ಚಿಕ್ಕನಗೌಡರಿಗೆ ಇದು ಕೊನೆಯ ಅವಕಾಶ ಎಂಬ ಷರತ್ತಿನ ಮೇಲೆಯೇ ಟಿಕೆಟ್ ನೀಡಲು ಪಕ್ಷ ತೀರ್ಮಾನಿಸಿದೆ.

ಕಳೆದ ಚುನಾವಣೆಯಲ್ಲಿ ಬೆರಳೆಣಿಕೆಯ ಮತಗಳ ಅಂತರದಿಂದ ಸೋತಿರುವ ಅನುಕುಂಪ ಹಾಗೂ ಸ್ವತಃ ಯಡಿಯೂರಪ್ಪನವರ ಸಂಬಂಧಿಯೂ ಆಗಿರುವುದರಿಂದ ಇದೊಂದು ಬಾರಿ ಚಿಕ್ಕನಗೌಡರ್‍ಗೆ ಅವಕಾಶ ಕಲ್ಪಿಸುವುದು ಸೂಕ್ತ ಎಂದು ಧಾರವಾಡ ಜಿಲ್ಲೆ ಪದಾಧಿಕಾರಿಗಳು ಮನವಿ ಮಾಡಿದ್ದರಿಂದ ಒಲ್ಲದ ಮನಸ್ಸಿನಿಂದಲೇ ಅವರಿಗೆ ಟಿಕೆಟ್ ನೀಡಲಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಿವಳ್ಳಿ ವಿರುದ್ಧ 634 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಚಿಕ್ಕನಗೌಡರ ವಿರುದ್ಧ ಗೆದ್ದು ಮೈತ್ರಿ ಸರ್ಕಾರದಲ್ಲಿ ಸಚಿವರೂ ಆಗಿದ್ದ ಸಿ.ಎಸ್.ಶಿವಳ್ಳಿ ಅವರು ಇತ್ತೀಚೆಗೆ ಹೃದಯಾಘಾತದಿಂದ ನಿಧನರಾಗಿದ್ದರು.

ಶಿವಳ್ಳಿ ನಿಧನದಿಂದ ತೆರವಾಗಿರುವ ಕುಂದಗೋಳ ವಿಧಾನಸಭಾ ಕ್ಷೇತ್ರಕ್ಕೆ ಮೇ 19ರಂದು ಉಪಚುನಾವಣೆ ನಡೆಯುತ್ತಿದ್ದು, ಚಿಕ್ಕನಗೌಡರ್ ಬಿಜೆಪಿ ಅಭ್ಯರ್ಥಿಯಾಗಿ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.ಕಾಂಗ್ರೆಸ್‍ನಿಂದ ಶಿವಳ್ಳಿ ಅವರ ಪತ್ನಿ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ