ಬೆಂಗಳೂರು,ಏ.25-ನಾವು ಮರಳಿ ತಾಯ್ನಾಡಿಗೆ ಬರುತ್ತೇವೆ ಎಂಬ ನಂಬಿಕೆಯನ್ನು ಕಳೆದುಕೊಂಡಿದ್ದೆವು. ತಂದೆತಾಯಿಗಳ ಆಶೀರ್ವಾದ, ದೇವರ ಕೃಪೆಯಿಂದ ಮತ್ತೆ ಸ್ವದೇಶಕ್ಕೆ ಮರಳಿರುವುದು ಹೋದ ಜೀವ ಬಂದಂತಾಗಿದೆ.
ಇದು ಶ್ರೀಲಂಕಾದ ರಾಜಧಾನಿ ಕೊಲೊಂಬೋಕ್ಕೆ ಕುಟುಂಬ ಸಮೇತರಾಗಿ ತೆರಳಿದ್ದ ಬಸವನಗುಡಿಯ ನಿವಾಸಿ, ವೈದ್ಯಗುಪ್ತ ಅವರ ಮನದಾಳದ ಮಾತು.
ಕೊಲೊಂಬೋಕ್ಕೆ ತೆರಳಿದ್ದ ಅವರು ಅಲ್ಲಿನ ಘಟನೆ ಕುರಿತು ತಮಗಾದ ಅನುಭವವನ್ನು ಹಂಚಿಕೊಂಡರು.
ಕುಟುಂಬ ಸಮೇತ ನಾವು ರಜೆ ಕಳೆಯಲು ಕೊಲೊಂಬೋಕೆ ಹೋಗಿದ್ದೆವು.ಪ್ಯಾಕೇಜ್ ಟೂರಿನಲ್ಲಿ ನಮ್ಮನ್ನು ಕರೆದುಕೊಂಡು ಹೋಗಲಾಗಿತ್ತು. ನಾವು ಕೊಲೊಂಬೋದ ಶಾಂಗ್ರೀಲಾ ಹೋಟೆಲ್ನಲ್ಲಿ ತಂಗಿದ್ದೆವು.
ಭಾನುವಾರ ಬೆಳಗ್ಗೆ ಎಂದಿನಂತೆ ದಿನನಿತ್ಯ ಚಟುವಟಿಕೆಗಳನ್ನು ಮುಗಿಸಿಕೊಂಡು ತಿಂಡಿ ತಿನ್ನಲು ಎಲ್ಲರೂ ಹೋಟೆಲ್ನ ಒಂದು ಹಾಲ್ನಲ್ಲಿ ಸೇರಿದ್ದೆವು.
ಇದ್ದಕ್ಕಿದ್ದಂತೆ ಬೆಳಗ್ಗೆ 8.55ಕ್ಕೆ ದೊಡ್ಡ ಶಬ್ದವಾಯಿತು.
ಮೊದಲು ಇದೊಂದು ಮಾಮೂಲಿ ಶಬ್ದವೆಂದು ಉದಾಸೀನ ಮಾಡಿದೆವು.ಇದ್ದಕ್ಕಿದ್ದಂತೆ ಎರಡನೇ ಬಾರಿಗೆ ಊಹೆಗೂ ಮೀರಿದ ರೀತಿಯಲ್ಲಿ ಶಬ್ದವಾಗಿದ್ದರಿಂದ ಎಲ್ಲರೂ ಬೆಚ್ಚಿ ಬಿದ್ದವು. ನೋಡು ನೋಡುತ್ತಿದ್ದಂತೆ ಏನಾಯಿತು ಎಂದು ಊಹಿಸುವಷ್ಟರಲ್ಲೇ ನಮ್ಮ ಕಣ್ಣ ಮುಂದೆಯೇ ಬಾಂಬ್ ಸಿಡಿತಕ್ಕೆ 30ರಿಂದ 50 ಜನ ಸಾವನ್ನಪ್ಪಿದರು.
ನಾನು ಕೂತಿದ್ದ ಕೆಲವೇ ಅಂತರದಲ್ಲಿ ಇಂಡೋನೇಷ್ಯಾ ದಂಪತಿ ಕುಳಿತಿದ್ದರು.ಪರಿಚಯವಿಲ್ಲದಿದ್ದರೂ ನಾವೆಲ್ಲರೂ ಪರಿಚಯಸ್ಥರಂತೆ ಇದ್ದೆವು.ಒಂದೇ ದಿನದಲ್ಲಿ ಹಾಯ್, ಬಾಯ್ ಸ್ನೇಹ ಬೆಳೆದಿತ್ತು.ಎಲ್ಲರೂ ನಗುನಗುತ್ತಾ ಖುಷಿಯಿಂದ ತಿಂಡಿ ತಿನ್ನುತ್ತಿರುವಾಗ ನಡೆದ ಬಾಂಬ್ ಸ್ಫೋಟ ಒಂದು ಕ್ಷಣವೂ ಊಹೆ ಮಾಡಲು ಸಾಧ್ಯವಾಗಲಿಲ್ಲ.
ಏಕೆಂದರೆ ಕಣ್ಣು ಬಿಡುವಷ್ಟರಲ್ಲಿ ಹೆಣಗಳು ಮುದ್ದೆ ಮುದ್ದೆಯಾಗಿ ಬಿದ್ದಿದ್ದವು.ಬಾಂಬ್ ಸ್ಫೋಟ ಎಷ್ಟು ಭೀಕರವಾಗಿತ್ತೆಂದರೆ ಕೈ ಒಂದು ಕಡೆ, ಕಾಲೊಂದು ಕಡೆ, ದೇಹದ ಅಂಗಾಂಗಗಳು ಬಿದ್ದಿದ್ದವು.
ನಾವು ಇಂಥ ದೃಶ್ಯಗಳನ್ನು ಸಿನಿಮಾದಲ್ಲಿ ಮಾತ್ರ ನೋಡುತ್ತಿದ್ದೆವು ಯಾರನ್ನಾದರೂ ರಕ್ಷಣೆ ಮಾಡೋಣ ಅಂದುಕೊಂಡರೂ ಹತ್ತಿರ ಹೋಗಲು ಸಾಧ್ಯವಾಗಲಿಲ್ಲ.ನಮ್ಮ ಕಣ್ಣೆದುರೇ ಅನೇಕ ಜನರು ರಕ್ಷಣೆಗಾಗಿ ಅಂಗಲಾಚುತ್ತಿದ್ದರೂ ಎಲ್ಲಿ ಮತ್ತೆ ಬಾಂಬ್ ಸ್ಫೋಟವಾಗಬಹುದೆಂಬ ಕಾರಣಕ್ಕಾಗಿ ಯಾರನ್ನೂ ಕೂಡ ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ. ಇದು ನಮ್ಮನ್ನು ಅತಿಯಾಗಿ ಕಾಡಿತು.
ಸ್ವಲ್ಪದರಲೇ ಬಚಾವ್:
ತಂದೆತಾಯಿ ಆಶೀರ್ವಾದವೋ, ದೇವರ ದಯೆಯೋ, ಗುರುಹಿರಿಯರ ಕೃಪೆಯಿಂದ ನಾವು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದೆವು. 10 ಅಡಿ ಅಂತರದಲ್ಲಿ ಪಿಲ್ಲರ್ ಅಡ್ಡ ಇದ್ದ ಕಾರಣ ಬಾಂಬ್ ಸ್ಫೋಟಿಸಲು ಸಾಧ್ಯವಾಗಲಿಲ್ಲ. ಒಂದು ವೇಳೆ ಪಿಲ್ಲರ್ ಇಲ್ದಿದ್ದರೆ ನಾವು ಕೂಡ ಹೆಣವಾಗಿ ಬರಬೇಕಾಗಿತ್ತು.
ಈ ಘಟನೆಯಿಂದಾಗಿ ಹೋಟೆಲ್ ಒಂದು ರೀತಿ ಯುದ್ಧಭೂಮಿಯಂತಾಯಿತು. ಇದು ಬಾಂಬ್ ಸ್ಫೋಟವೋ ಇಲ್ಲವೇ ಆತ್ಮಾಹುತಿಯಉಗ್ರರ ಸ್ಫೋಟವೊ ಎಂಬುದು ಗೊತ್ತಾಗಲಿಲ್ಲ.
ಹೋಟೆಲ್ನಿಂದ ಹೊರಬರಲು ನಾವು ಹರಸಾಹಸಪಟ್ಟೆವು. ಘಟನೆ ನಡೆದು ಕೆಲವೆ ಕ್ಷಣಗಳಲ್ಲಿ ಪೊಲೀಸರು ಇಡೀ ಹೋಟೆಲ್ನ್ನು ವಶಕ್ಕೆ ಪಡೆದುಕೊಂಡರು.ನಾವು ಹೇಳುವವರೆಗೂ ಯಾರೊಬ್ಬರು ಹೊರಬರಬಾರದು ಎಂದು ಕಟ್ಟಾಜ್ಞೆ ಹೊರಡಿಸಿದರು.
ನೋಡು ನೋಡುತ್ತಿದ್ದಂತೆ ಸೇನಾ ಪಡೆ, ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಸೇರಿದಂತೆ ಮತ್ತಿತರರು ಆಗಮಿಸಿ ಹೋಟೆಲ್ ಸುತ್ತುವರೆದರು. ಅಲ್ಲಿ ನಮ್ಮನ್ನು ತಪಾಸಣೆಗೊಳಪಡಿಸಿ ಬಳಿಕ ಮತ್ತೊಂದು ಹೋಟೆಲ್ಗೆ ಕರೆದುಕೊಂಡು ಹೋದರು.
ಆದರೆ ಆ ವೇಳೆಗಾಗಲೆ 8 ಗಂಟೆ ಬಾಂಬ್ ಸ್ಫೋಟಿಸಿದ್ದರಿಂದ ಇಡೀ ಕೊಲಂಬೋ ನಗರದಾದ್ಯಂತ ಪೊಲೀಸರು ಮತ್ತು ಸೇನಾಪಡೆಗಳು ಲಾಠಿ ಏನು ಕೇಳುತ್ತಿತ್ತು.ಉಗ್ರರು ಇನ್ನಷ್ಟು ಕಡೆ ಅಟ್ಟಹಾಸ ಮೆರೆಯಬಹುದೆಂಬ ಕಾರಣಕ್ಕಾಗಿ ಎಲ್ಲೆಡೆ ಕಫ್ರ್ಯೂ ವಿಧಿಸಲಾಯಿತು.
ಹೋಟೆಲ್ನಲ್ಲಿ ನಮಗೆ ಊಟ, ತಿಂಡಿ ಸಿಗಲಿಲ್ಲ. ನಮಗೆ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದರೆ ಸಾಕು ಎಂಬ ಭೀತಿಯಲ್ಲಿದ್ದೆವು. ತಕ್ಷಣವೇ ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆ ಸಹಾಯವಾಣಿಯನ್ನು ತೆರೆಯಿತು. ಕೂಡಲೇ ಶ್ರೀಲಂಕಾದಲ್ಲಿರುವ ಭಾರತದ ಹೈ ಕಮೀಷನರ್ ಕಚೇರಿಗೆ ಮಾಹಿತಿ ನೀಡಿದೆವೆ.
ನಾವು ಉಳಿದುಕೊಂಡಿರುವ ಹೋಟೆಲ್ ವಿಳಾಸ ಪಡೆದುಕೊಂಡು ಆಗಮಿಸಿದರು.
ಆ ವೇಳೆಗಾಗಲೇ ಕೊಲಂಬೋದಾದ್ಯಂತ ಕಫ್ರ್ಯೂ ವಿಧಿಸಲಾಗಿತ್ತು. ಹೆಚ್ಚು ಜನರು ಗುಂಪುಗೂಡುವಂತಿರಲಿಲ್ಲ. ಸಂಶಯ ಬಂದ ಪ್ರತಿಯೊಬ್ಬರನ್ನು ವಿಚಾರಣೆ ಗೊಳಪಡಿಸುತ್ತಿದ್ದರು.
ಹೈಕಮೀಷನರ್ ಕಚೇರಿಯಿಂದ ಬಂದ ಅಧಿಕಾರಿಗಳು ನಮ್ಮ ವಿಳಾಸವನ್ನೆಲ್ಲ ಪರಿಶೀಲನೆ ನಡೆಸಿ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲು ವ್ಯವಸ್ಥೆ ಮಾಡಿದರು.
ಈ ಸಂದರ್ಭದಲ್ಲಿ ಕೊಲಂಬೋದ ಸ್ಥಳೀಯ ಜನರು ಕೂಡ ಸಾಕಷ್ಟು ಸಹಾಯ ನೀಡಿದ್ದನ್ನು ಮರೆಯುವಂತಿಲ್ಲ. ಅಂಥಹ ಸ್ಥಿತಿಯಲ್ಲೂ ವಿದೇಶಿಗರ ಬಗ್ಗೆ ಲಂಕಾ ಜನರು ತೋರಿಸಿದ ಪ್ರೀತಿ ಅನನ್ಯ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾಲಿಟ್ಟಾಗಲೇ ನಮಗೆ ಹೋದ ಜೀವ ಮರಳಿ ಬಂದಾಂತಾಯಿತು.