ಉಪಚುನಾವಣೆ ಹಿನ್ನಲೆ ಕಾರ್ಯಕಾರಿ ಸಮಿತಿ ಸಭೆ ನಡೆಸಿದ ಬಿಜೆಪಿ

ಬೆಂಗಳೂರು, ಏ.25- ಗುಲ್ಬರ್ಗಾ ಜಿಲ್ಲೆ ಚಿಂಚೋಳಿ ಕ್ಷೇತ್ರ ಹಾಗೂ ಕುಂದಗೋಳ ಕ್ಷೇತ್ರಗಳಿಗೆ ಮೇ 19ರಂದು ನಡೆಯಲಿರುವ ಉಪಚುನಾವಣೆ ಕುರಿತು ಬಿಜೆಪಿ ಕೇಂದ್ರ ಕಚೇರಿಯಲ್ಲಿಂದು ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಾರ್ಯಕಾರಿ ಸಮಿತಿ ಸಭೆ ನಡೆಸಲಾಯಿತು.

ಚಿಂಚೋಳಿ ಕ್ಷೇತ್ರದಲ್ಲಿ ಉಮೇಶ್ ಜಾಧವ್ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರಿಂದ ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಸಚಿವರಾಗಿದ್ದ ಶಿವಳ್ಳಿ ಅವರ ಹಠಾತ ನಿಧನದಿಂದ ಕುಂದಗೊಳ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ.

ಇವೆರಡು ಕ್ಷೇತ್ರಗಳಿಗೆ ಯಾರನ್ನು ಅಭ್ಯರ್ಥಿಯಾಗಿಸಬೇಕೆಂಬ ಬಗ್ಗೆ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಸಚಿವ ಅರವಿಂದ ಲಿಂಬಾವಳಿ ಸೇರಿದಂತೆ ಮತ್ತಿತರ ಮುಖಂಡರು ಸೇರಿದಂತೆ ಚರ್ಚಿಸಲಾಯಿತು.

ಇದೇ ವೇಳೆ ಧಾರವಾಡ ಮತ್ತು ಗುಲ್ಬರ್ಗಾ ಜಿಲ್ಲೆಗಳ ಪದಾಧಿಕಾರಿಗಳ ಸಭೆ ನಡೆಸಿ ಟಿಕೆಟ್ ಯಾರಿಗೆ ಕೊಟ್ಟರೆ ಸೂಕ್ತ, ಚುನಾವಣೆ ಹೇಗೆ ಎದುರಿಸಬೇಕು ಎಂಬ ಬಗ್ಗೆ ಸಲಹೆಗಳನ್ನು ಪಡೆಯಲಾಯಿತು.

ಕುಂದಗೊಳದಲ್ಲಿ ಕಳೆದ ಬಾರಿ ಕೆಲವೆ ಮತಗಳ ಅಂತರದಿಂದ ಸೋಲು ಅನುಭವಿಸಿದ್ದ ಎಸ್.ಐ.ಚಿಕ್ಕನಗೌಡರ ಅವರಿಗೆ ಟಿಕೆಟ್ ಕೊಡುವ ಕುರಿತು ಮುಖಂಡರು ಚರ್ಚಿಸಿದರು.

ಚಿಂಚೋಳಿಯಲ್ಲಿ ಮಾಜಿ ಸಚಿವ ಸುನಿಲ್ ವಲ್ಯಾಪುರೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ.ಆದರೆ ಬಿಜೆಪಿಗೆ ಹೋಗಿರುವ ಉಮೇಶ್ ಜಾಧವ್ ತನ್ನ ಸಹೋದರಿಗೆ ಅಥವಾ ಸಂಬಂಧಿಕರಿಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.

ಈ ಎಲ್ಲದರ ಬಗ್ಗೆ ಯಡಿಯೂರಪ್ಪ ಗಹನವಾಗಿ ಚರ್ಚಿಸಿ ಇವೆರಡೂ ಸ್ಥಾನ ಗೆದ್ದರೆ ಸರ್ಕಾರ ರಚನೆಗೆ ನಮಗೆ ಇನ್ನೂ ನೈತಿಕ ಬಲ ಬರುತ್ತದೆ. ಯಾರಿಗೆ ಟಿಕೆಟ್ ಕೊಡಲಿ ಭಿನ್ನಾಭಿಪ್ರಾಯಗಳು, ಭಿನ್ನಮತವನ್ನು ಬಿಟ್ಟು ಒಗ್ಗಟಾಗಿ ಶ್ರಮಿಸಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಸೂಚಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ