ವಿಕಲಚೇತನರಿಗೆ ನೀಡುವ ಪ್ರಮಾಣಪತ್ರ-ಶಾಶ್ವತ ಅಥವಾ ಗುಣಮುಖವಾಗುವ ಅಂಗವಿಕಲತೆಯೇ ಎಂಬುದನ್ನು ನಮೂದಿಸಬೇಕು

ಬೆಂಗಳೂರು,ಏ.25- ವಿಕಲಚೇತನರಿಗೆ ನೀಡಲಾಗುವ ಅಂಗವಿಕಲ ಪ್ರಮಾಣಪತ್ರಗಳಲ್ಲಿ ಅಂಗವಿಕಲತೆಯ ಸ್ವರೂಪ, ಪ್ರಮಾಣ, ಶಾಶ್ವತ ಅಥವಾ ಗುಣಮುಖವಾಗುವ ಅಂಗವಿಕಲತೆಯೇ ಎಂಬುದನ್ನು ಸ್ಪಷ್ಟವಾಗಿ ನಮೂದಿಸಿ ಪ್ರಮಾಣ ಪತ್ರ ನೀಡುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.

ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ವೈದ್ಯಕೀಯ ಪ್ರಮಾಣ ಪತ್ರಗಳನ್ನು ನೀಡುವಾಗ ಎಲ್ಲಾ ವೈದ್ಯಾಧಿಕಾರಿಗಳು, ವೈದ್ಯಕೀಯ ಮಂಡಳಿಗಳು ಕಟ್ಟುನಿಟ್ಟಾಗಿ ರಾಜ್ಯ ಸರ್ಕಾರದ ಸೂಚನೆಯನ್ನು ಪಾಲಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ.

ಅಂಗವೈಕಲ್ಯತೆಯು ಶಾಶ್ವತ ಅಂಗವಿಕಲತೆ ಅಥವಾ ತಾತ್ಕಾಲಿಕ ಅಂಗವಿಕಲತೆ ಇವರೆಡರಲ್ಲಿ ಯಾವುದು ಅನ್ವಯವಾಗಲಿದೆ ಎಂಬುದನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಸುತ್ತೋಲೆ ಹೊರಡಿಸಿದ್ದಾರೆ.

ತಾತ್ಕಾಲಿಕ ಅಂಗವಿಕಲತೆ ಹೊಂದಿರುವವರು ಉದ್ಯೋಗದಲ್ಲಿ ಮೀಸಲಾತಿ ಪಡೆಯಲು ಅರ್ಹರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಾಜ್ಯ ಸಿವಿಲ್ ಸೇವಾ ಹುದ್ದೆಗಳ ನೇರ ನೇಮಕಾತಿಯಲ್ಲಿ ವಿಕಲಚೇತನರಿಗೆ ಮೀಸಲಾಗಿರುವ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಪರಿಗಣಿಸಲು ವೈದ್ಯಕೀಯ ಪ್ರಮಾಣ ಪತ್ರ ನಿಗದಿಪಡಿಸಿದ್ದು, ಮಾರ್ಗಸೂಚಿಗಳನ್ನು ಸರ್ಕಾರ ಹೊರಡಿಸಿದೆ.

ಆದರೂ ಪ್ರಮಾಣ ಪತ್ರಗಳಲ್ಲಿ ಅಂಗವಿಕಲತೆಯ ಸ್ವರೂಪ ಮತ್ತು ಪ್ರಮಾಣವನ್ನು ಸ್ಪಷ್ಟವಾಗಿ ನಮೂದಿಸದ ಪ್ರಮಾಣಪತ್ರಗಳಿಂದ ಅರ್ಹ ಅಭ್ಯರ್ಥಿಗಳನ್ನು ಆಯ್ಕೆಗೆ ಪರಿಗಣಿಸಲು ಕಷ್ಟವಾಗುತ್ತಿರುವುದನ್ನು ಮನಗಂಡು ಸುತ್ತೋಲೆ ಹೊರಡಿಸಲಾಗಿದೆ.

ಕೆಲವು ನಿರ್ಧಿಷ್ಟ ಅಂಗವಿಕಲತೆಗಳಿಗೆ ಯಂತ್ರೋಪಕರಣಗಳ ಮೂಲಕ ಅಂಗವೈಕಲ್ಯತೆ ಪ್ರಮಾಣವನ್ನು ಖಚಿತಪಡಿಸಿಕೊಂಡ ನಂತರ ನಿಖರವಾದ ಕಾರಣಗಳನ್ನು ಪ್ರಮಾಣಪತ್ರದಲ್ಲಿ ನಮೂದಿಸಬೇಕು.ವೈದ್ಯಕೀಯ ಪ್ರಮಾಣ ಪತ್ರದಲ್ಲಿ ಅಭ್ಯರ್ಥಿಯ ಭಾವಚಿತ್ರ, ಹೆಸರು, ವಯಸ್ಸು, ತಂದೆ ಅಥವಾ ಪೋಷಕರ ವಿವರ ಸೇರಿದಂತೆ ವಿಳಾಸವನ್ನು ಸ್ಪಷ್ಟವಾಗಿ ನಮೂದಿಸಬೇಕು.

ಸರ್ಕಾರದಿಂದ ಪ್ರಾಧೀಕರಿಸಲ್ಪಟ್ಟ ವೈದ್ಯಕೀಯ ಪ್ರಾಧಿಕಾರ ಗಣಕೀಕೃತ ವೈದ್ಯಕೀಯ ಪ್ರಮಾಣ ಪತ್ರಗಳನ್ನು ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2016ರಂದೇ ಕಡ್ಡಾಯವಾಗಿ ವಿತರಿಸಲು ಕ್ರಮ ಕೈಗೊಳ್ಳಬೇಕು.

ಗಣಕೀಕೃತ ಪ್ರಮಾಣಪತ್ರದಲ್ಲಿ ವೈದ್ಯಾಧಿಕಾರಿಗಳ ಸಹಿ, ಹೆಸರು, ಸಂಪೂರ್ಣ ವಿಳಾಸ ಹಾಗೂ ಮೊಹರನ್ನು ಮುದ್ರಿಸಿ ವಿತರಿಸಬೇಕು ಎಂದು ಸೂಚಿಸಲಾಗಿದೆ.

ಕೇಂದ್ರ ಸರ್ಕಾರ ಅಂಗವಿಕಲತೆ ಪ್ರಮಾಣಪತ್ರವನ್ನು ವಿತರಿಸಲು ಅಂಗವಿಕಲರ ವಿಶಿಷ್ಟ ಗುರುತಿನಚೀಟಿ ಯೋಜನೆಯನ್ನು 2018ರಲ್ಲಿ ಜಾರಿಗೆ ತಂದಿದೆ. ಈ ಯೋಜನೆಯಡಿ 21 ಅಂಗವಿಕಲತೆಗೆ ಸಂಬಂಧಿಸಿದಂತೆ ಅಧಿಕೃತವಾಗಿ ವೈದ್ಯಕೀಯ ಪ್ರಾಧಿಕಾರಗಳನ್ನು ನೇಮಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಹೊಸದಾಗಿ ವೈದ್ಯಕೀಯ ಪ್ರಾಧಿಕಾರಿಗಳು ನೇಮಕವಾದ ಬಳಿಕ ಹೊಸ ಯೋಜನೆಯನ್ನು ಅಳವಡಿಸಿಕೊಂಡು ಅಂಗವಿಕಲ ವೈದ್ಯಕೀಯ ಪ್ರಮಾಣ ಪತ್ರಗಳನ್ನು ನೀಡುವ ಪ್ರಕ್ರಿಯೆ ಪ್ರಾರಂಭವಾಗಲಿದೆ. ಆಗ ಚಾಲ್ತಿಯಲ್ಲಿರುವ ಅಂಗವಿಕಲತೆ ವೈದ್ಯಕೀಯ ಪ್ರಮಾಣ ಪತ್ರ ನೀಡುವ ಯೋಜನೆಯನ್ನು ರದ್ದುಪಡಿಸಲಾಗುತ್ತದೆ ಅಲ್ಲದೆ ಈಗಾಗಲೇ ಪ್ರಮಾಣಪತ್ರ ಹೊಂದಿರುವ ವ್ಯಕ್ತಿಗಳು ಕೂಡ ಕಡ್ಡಾಯವಾಗಿ ವಿಶಿಷ್ಟ ಗುರುತಿನ ಚೀಟಿ ಯೋಜನೆಯಡಿ ನೋಂದಾಯಿಸಿಕೊಳ್ಳಬೇಕಾಗಿದ್ದು, ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪಕ ಪ್ರಚಾರ ನೀಡಲು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ