ಬೆಂಗಳೂರು: ರಾಜ್ಯದಲ್ಲಿ 2ನೇ ಹಂತದ ಮತದಾನ ಮುಗಿಯುತ್ತಿದ್ದಂತೆಯೇ ಆಪರೇಷನ್ ಕಮಲ ಮತ್ತೆ ಸದ್ದು ಮಾಡುತ್ತಿದೆ. ನಿನ್ನೆ ಮತದಾನದ ಬಳಿಕ ಗೋಕಾಕ್ನಲ್ಲಿ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ, ‘ತಾಂತ್ರಿಕವಾಗಷ್ಟೇ ಕಾಂಗ್ರೆಸ್ನಲ್ಲಿದ್ದೇನೆ’ ಎಂದು ಹೇಳಿದ್ದರು. ರಮೇಶ್ ಜಾರಕಿಹೊಳಿಯವರ ಈ ಹೇಳಿಕೆ ಕಾಂಗ್ರೆಸ್ಗೆ ತಾವು ನೀಡುತ್ತಿರುವ ರಾಜೀನಾಮೆ ಬಗ್ಗೆ ಸುಳಿವು ನೀಡಿತ್ತು. ಹಾಗಾಗಿ ರಮೇಶ್ ಬಂಡಾಯ ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ಕರೆದೊಯ್ಯುವುದು ಬಹುತೇಕ ಖಚಿತ, ಆಪರೇಷನ್ ಕಮಲ ಇನ್ನೂ ನಿಂತಿಲ್ಲ ಎಂಬ ಚರ್ಚೆ ನಡೆಯುತ್ತಿದೆ.
ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಆಪರೇಷನ್ ಕಮಲ ನಡೆಯುತ್ತಿದೆ ಎಂಬುದಕ್ಕೆ ಪುಷ್ಟಿ ನೀಡಿದೆ. ಈ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರೂ ಕೂಡ, ರಮೇಶ್ ಜತೆ ನಾಗೇಂದ್ರ, ಮಹೇಶ್ ಕುಮಠಳ್ಳಿ ಸೇರಿ 10ಕ್ಕೂ ಹೆಚ್ಚು ಶಾಸಕರು ಮೈತ್ರಿ ಸರ್ಕಾರದಿಂದ ಬೇಸತ್ತಿದ್ದಾರೆ ಎನ್ನುವ ಮೂಲಕ ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಹಾಗಾಗಿ ಆಪರೇಷನ್ ಕಮಲದ ಭೀತಿಯಿಂದ ಮೈತ್ರಿ ಸರ್ಕಾರ ಆತಂಕಕ್ಕೊಳಾಗಿದೆ.
ಬಿ.ಎಸ್ ಯಡಿಯೂರಪ್ಪನವರು ನುಡಿದಂತೆ ಆಪರೇಷನ್ ಈಗಲೇ ನಡೆಯುತ್ತದೋ ಅಥವಾ ಮೇ 23 ಫಲಿತಾಂಶದ ಬಳಿಕ ನಡೆಯಲಿದೆಯೋ ಎಂಬ ಪ್ರಶ್ನೆ ಮೂಡಿದೆ. ಮುಂದಿನ ದಿನಗಳಲ್ಲಿ ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಡೆಯಲಿದೆ. ಬಳಿಕ ತಾವೇ ಮತ್ತೂಂದು ಸುತ್ತಿನ ಆಪರೇಷನ್ ನಡೆಸಬಹುದು ಎಂದು ಬಿಜೆಪಿ ಆಂತರಿಕ ಮೂಲಗಳು ಹೇಳಿವೆ.
ಈ ಮಧ್ಯೆ ಕಾಂಗ್ರೆಸ್ ರಾಜ್ಯ ನಾಯಕರು ಬಹಿರಂಗವಾಗಿಯೇ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಕಿಡಿಕಾರಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಸಹೋದರ ಸತೀಶ್ ಜಾರಕಿಹೊಳಿ ಅವರು ಕೂಡ, ರಮೇಶ್ ಪಕ್ಷ ಬಿಟ್ಟುಹೋಗಲಿ ಪರವಾಗಿಲ್ಲ ಎಂದಿದ್ದಾರೆ. ಈ ಮೂಲಕ ಗೊಂದಲದಲ್ಲಿ ಸರ್ಕಾರ ನಡೆಸುವುದು ಬೇಡ ಎಂಬ ಅಭಿಪ್ರಾಯಕ್ಕೆ ಸತೀಶ್ ಬಂದಿದ್ದಾರೆ.
ಇನ್ನೊಂದೆಡೆ ಮೈತ್ರಿ ಸರ್ಕಾರದ ಸಿಎಂ ಎಚ್.ಡಿ ಕುಮಾರಸ್ವಾಮಿ, ಡಿಸಿಎಂ ಡಾ.ಜಿ ಪರಮೇಶ್ವರ್ ಸೇರಿದಂತೆ ಸಚಿವ ಡಿ.ಕೆ ಶಿವಕುಮಾರ್ ಅಸಮಾಧಾನಿತ ಕಾಂಗ್ರೆಸ್ ಶಾಸಕರನ್ನು ಮನವೊಲಿಸುವ ಪ್ರಯತ್ನಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಹಾಗೆಯೇ ಒಂದು ವೇಳೆ ಕಾಂಗ್ರೆಸ್ ಶಾಸಕರು ಬಿಜೆಪಿಯತ್ತ ಮುಖ ಮಾಡಿದರೇ, ಬಿಜೆಪಿ ಶಾಸಕರನ್ನು ಕರೆತರುವ ಪ್ರಯತ್ನವೂ ಮೈತ್ರಿ ನಾಯಕರು ಮಾಡುತ್ತಿದ್ದಾರೆ.
ಉತ್ತರ ಕರ್ನಾಟಕದ ಐವರು ಬಿಜೆಪಿ ಶಾಸಕರಿಗೆ ಸಿಎಂ ಎಚ್.ಡಿ ಕುಮಾರಸ್ವಾಮಿ ಗಾಳ ಹಾಕಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅಲ್ಲದೇ ಸಿಎಂ ಈ ಬಗ್ಗೆ ದೇವೇಗೌಡ ಬಳಿಯೂ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.