ಶ್ರೀಲಂಕಾ ಸರಣಿ ಸ್ಫೋಟ ಪ್ರಕರಣ: ಬೆಂಗಳೂರಿಗೆ ಕನ್ನಡಿಗರ ನಾಲ್ಕು ಮೃತದೇಹ ರವಾನೆ

ಬೆಂಗಳೂರುಶ್ರೀಲಂಕಾ ಬಾಂಬ್​ ಸ್ಫೋಟ ಪ್ರಕರಣದಲ್ಲಿ ಮೃತಪಟ್ಟವರ ನಾಲ್ವರ ಮೃತದೇಹಗಳನ್ನು ಬೆಂಗಳೂರಿಗೆ ತರಲಾಗಿದೆ. ಉಳಿದ ಮೂರು ದೇಹಗಳನ್ನು ಮಧ್ಯಾಹ್ನ ತರಲಾಗುತ್ತದೆ.

ಭಾನುವಾರ ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರಿದ ಏಳು ಜನರು ಮೃತಪಟ್ಟಿದ್ದರು. ಗುರುತುಪತ್ತೆ ಕಾರ್ಯ ಮುಗಿದ ನಂತರ ಶ್ರೀಲಂಕಾ ಏರ್ಲೈನ್ಸ್​​ನ ಯುಎಲ್​-173 ವಿಮಾನದಲ್ಲಿ ಅವರನ್ನು ತಡರಾತ್ರಿ 2:30ಕ್ಕೆ ಬೆಂಗಳೂರಿಗೆ ತರಲಾಗಿದೆ.

ನೆಲಮಂಗಲದ ಕಾಚನಹಳ್ಳಿಯ ಹನುಮಂತರಾಯಪ್ಪ, ಲಕ್ಷ್ಮೀನಾರಾಯಣ, ದಾಸರಹಳ್ಳಿಯ ರಂಗಪ್ಪ, ನೆಲಮಂಗಲದ ಶಿವಕುಮಾರ್ ಅವರ ಮೃತದೇಹಗಳನ್ನು ಬೆಂಗಳೂರಿಗೆ ತರಲಾಗಿದೆ. ರಂಗಪ್ಪ ಮೃತ ದೇಹ ದಾಸರಹಳ್ಳಿ ಚೊಕ್ಕಸಂದ್ರ ಸ್ವಗೃಹಕ್ಕೆ ರವಾನೆ ಮಾಡಲಾಗಿದೆ. ಉಳಿದ ಮೂರು ಕಳೆಬರಹಗಳನ್ನು ನೆಲಮಂಗಲ ಜೂನಿಯರ್ ಕಾಲೇಜ್ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ.

ದೇಹದ ಗುರುತು ಪತ್ತೆ ಹಚ್ಚಲು ವಿಳಂಬವಾಯಿತು ಎನ್ನುವ ವಿಧಾನ ಪರಿಷತ್ ಸದಸ್ಯ ಇ.ಕೃಷ್ಣಪ್ಪ, “ಫೋಟೋ ನೋಡಿ ದೇಹ ಗುರುತು ಪತ್ತೆ ಹಚ್ಚಿದೆವು. ದೇಹ ಗುರುತು ಹಿಡಿಯಲು ಸಾಧ್ಯವಾಗಿಲ್ಲ. ಕಳೆ ಬರಹ ಪತ್ತೆ ಹಚ್ಚಲು ಸಮಯ ಹಿಡಿಯಿತು. ಶಾಂಗ್ರೀಲಾ ಹೋಟೆಲ್​ನಲ್ಲಿ ತಿಂಡಿ ತಿನ್ನುವ ಸಮಯದಲ್ಲಿ ಈ ಘಟನೆ ನಡೆದಿದೆ. ದುರಾದೃಷ್ಟವಶಾತ್ ಏಳು ಜನ ಸ್ನೇಹಿತರನ್ನು ಕಳೆದು ಕೊಂಡಿದ್ದೇವೆ,” ಎಂದಿದ್ದಾರೆ.

ತುಮಕೂರು ನಿವಾಸಿ ರಮೇಶ್, ಅಡಕಮಾರನಹಳ್ಳಿ ನಿವಾಸಿ ಮಾರೇಗೌಡ, ಹಾರೋ ಕ್ಯಾತನಹಳ್ಳಿಯ ಪುಟ್ಟರಾಜ ಕೂಡ ಬಾಂಬ್​ ಸ್ಫೋಟದಲ್ಲಿ ಮೃತಪಟ್ಟಿದ್ದರು. ಇಂದು ಮಧ್ಯಾಹ್ನ ಇಂಡಿಗೋ ಫ್ಲೈಟ್​ನಲ್ಲಿ ಮೂರು ಮೃತದೇಹ ಬೆಂಗಳೂರಿಗೆ ತರಲಾಗುತ್ತದೆ.

ಶ್ರೀಲಂಕಾ ಸುರಕ್ಷಿತವಲ್ಲ ಎಂದು ಮೃತ ದೇಹದ ಜೊತೆ ಬಂದ ತಿಮ್ಮರಾಯಪ್ಪ ಹೇಳಿಕೆ ನೀಡಿದ್ದಾರೆ. “ಶ್ರೀಲಂಕಾದಲ್ಲಿ ಭಯದ ವಾತಾವರಣ ಇದೆ. ಯಾವುದೇ ಹೊಟೇಲ್​ನಲ್ಲಿ ಯಾರನ್ನು ತಪಾಸಣೆ ಮಾಡುವುದಿಲ್ಲ. ಬಾಂಬ್ ಸ್ಫೋಟದಲ್ಲಿ ಮೃತಪಟ್ಟ 300 ಮಂದಿಯನ್ನು ಒಂದೇ ಕೊಠಡಿಯಲ್ಲಿ ಇಟ್ಟಿದ್ದರು.

ಶ್ರೀಲಂಕಾದಲ್ಲಿ ಕರ್ಪ್ಯೂ ಜಾರಿ ಇದೆ. ಕಾರಿನಲ್ಲೂ ಓಡಾಡುವುದು ಕಷ್ಟ. ನಾವು ಬಾಡಿ ತರಲು ಹೋದಾಗ ಕೂಡ ಎರಡು ಬಾಂಬ್ ಬ್ಲಾಸ್ಟ್ ಆಗಿತ್ತು. ದಯವಿಟ್ಟು ಯಾರು ಶ್ರೀಲಂಕಾಗೆ ಪ್ರವಾಸಕ್ಕೆ ಹೋಗಬೇಡಿ,” ಎಂದು ಕೋರಿದ್ದಾರೆ.

ಕರ್ನಾಟಕದ 10 ಮಂದಿ ಕೊಲಂಬೋ ಬಾಂಬ್​ ದಾಳಿಯಲ್ಲಿ ಮೃತಪಟ್ಟಿರುವ ಬಗ್ಗೆ ವಿದೇಶಾಂಗ ಇಲಾಖೆ ಮತ್ತು ಶ್ರೀಲಂಕನ್ ಡೆಪ್ಯುಟಿ ಹೈ ಕಮಿಷನ್​ ಖಚಿತಪಡಿಸಿದೆ. ಕರ್ನಾಟಕದ ಹನುಮಂತರಾಯಪ್ಪ, ಲಕ್ಷ್ಮೀನಾರಾಯಣ, ರಂಗಪ್ಪ, ರಮೇಶ್​, ನಾರಾಯಣ ಚಂದ್ರಶೇಖರ್, ಶೆಟ್ಟಿಪಾಳ್ಯ ರಾಮಕೃಷ್ಣಪ್ಪ ನಾಗರಾಜ್, ಹನುಮಯ್ಯ ಶಿವಕುಮಾರ್, ರೆಮುರೈ ತುಳಸಿರಾಮ್, ಮಾರೇಗೌಡ, ಪುಟ್ಟರಾಜು ಸಾವನ್ನಪ್ಪಿದವರು.

ಭಾನುವಾರ ಈಸ್ಟರ್​ ಪ್ರಾರ್ಥನೆ ವೇಳೆ  ಕೊಲಂಬೋದ ಚರ್ಚ್​ ಹಾಗೂ ಸ್ಟಾರ್​ ಹೋಟೆಲ್​ಗಳಲ್ಲಿ ಬಾಂಬ್​​ ಸರಣಿ ಸ್ಫೋಟ ಸಂಭವಿಸಿತ್ತು. ಒಟ್ಟು ಎಂಟು ಕಡೆಗಳಲ್ಲಿ ಬಾಂಬ್​ ಸ್ಫೋಟವಾಗಿತ್ತು. ಭಾನುವಾರ ಬೆಳಗ್ಗೆ 8:45ರ ಸುಮಾರಿಗೆ ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ 6 ಬಾಂಬುಗಳು ಸ್ಪೋಟಗೊಂಡವು.

ಕೆಲ ಹೊತ್ತಿನ ಬಳಿಕ ಮತ್ತೆರಡು ಬಾಂಬ್ ಸ್ಫೋಟಗೊಂಡವೆನ್ನಲಾಗಿದೆ. ಈಸ್ಟರ್ ದಿನ ಪ್ರಾರ್ಥನೆ ನಡೆಯುತ್ತಿರುವಾಗ ಚರ್ಚ್‌ನಲ್ಲಿ ಮೊದಲು ಬಾಂಬ್ ಸ್ಫೋಟವಾಯಿತು. ಒಟ್ಟು ಮೂರು ಚರ್ಚ್​ಗಳು ಹಾಗೂ ಮೂರು ಹೈಟೆಕ್ ಹೋಟೆಲ್​ಗಳಲ್ಲಿ ಸ್ಫೋಟಗಳು ಸಂಭವಿಸಿವೆ. 300 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ