ಬಿಜೆಪಿಯನ್ನು ಬೆಚ್ಚಿಬೀಳಿಸಿದ ಅತೃಪ್ತ ಶಾಸಕರ ಷರತ್ತುಗಳು!

ಬೆಂಗಳೂರು: ರಾಜ್ಯದಲ್ಲಿ ಆಪರೇಷನ್ ಕಮಲಕ್ಕೆ ಪೂರ್ಣ ವಿರಾಮ ಬೀಳುವ ಲಕ್ಷಣಗಳು ಕಾಣಿಸುತ್ತಿಲ್ಲ. ಲೋಕಸಮರಕ್ಕೂ ಮುನ್ನ ರಾಜ್ಯದಲ್ಲಿ ಕೈ-ದಳದ ದೋಸ್ತಿಯನ್ನು ಕೆಡವಲು ಕಮಲ ನಾಯಕರು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಇತ್ತ ಸಚಿವ ಸ್ಥಾನ ಸಿಗದೇ ಕಾಂಗ್ರೆಸ್ 8 ಶಾಸಕರು ಕೈಯಲ್ಲಿ ಬಂಡಾಯದ ಬಾವುಟ ಹಿಡಿದುಕೊಂಡು ಕುಳಿತ್ತಿದ್ದಾರೆ. ಬಾವುಟ ಹಾರಿಸಲು ಸೂಕ್ತ ಸಮಯಕ್ಕಾಗಿ ಅತೃಪ್ತರು ಕಾಯುತ್ತಿದ್ದಾರೆ. ಸಂಕ್ರಾಂತಿ ಸಮಯದಲ್ಲಿ ಮುಂಬೈ ರೆಸಾರ್ಟ್ ಸೇರಿದ್ದ 8 ಶಾಸಕರು ಬಿಜೆಪಿ ನಾಯಕರ ಮುಂದೆ ಈಗ ಕೆಲವು ಷರತ್ತುಗಳನ್ನು ಇಟ್ಟಿದ್ದಾರೆ ಎನ್ನಲಾಗಿದೆ.

ಕೆಲ ಕಾಂಗ್ರೆಸ್ ಶಾಸಕರು ಬಹಿರಂಗವಾಗಿ ಸಮ್ಮಿಶ್ರ ಸರ್ಕಾರದ ಆಡಳಿತ ವೈಖರಿಯ ಬಗ್ಗೆ ಅಸಮಾಧಾನ ಹೊರಹಾಕುತ್ತಿದ್ದಾರೆ. ಇತ್ತೀಚೆಗೆ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಗೆ ಶಾಸಕರಾದ ಉಮೇಶ್ ಜಾಧವ್, ಮಹೇಶ್ ಕುಮಟಳ್ಳಿ, ನಾಗೇಂದ್ರ ಮತ್ತು ರಮೇಶ್ ಜಾರಕಿಹೊಳಿ ಗೈರಾಗುವ ಮೂಲಕ ಅಸಮಾಧಾನವನ್ನು ಹೊರ ಹಾಕಿದ್ದರು. ಈ ಎಲ್ಲ ಬೆಳವಣಿಗೆಗಳ ನಡುವೆ ಉಮೇಶ್ ಜಾಧವ್ ಮತ್ತು ಮಹೇಶ್ ಕುಮಟಳ್ಳಿ ಬಿಜೆಪಿ ಸೇರಲಿದ್ದಾರೆ ಎಂಬ ಮಾತುಗಳು ಬಲವಾಗಿಯೇ ಕೇಳಿ ಬರುತ್ತಿವೆ. ರಮೇಶ್ ಜಾರಕಿಹೊಳಿ ನಾನು ಡಿಸಿಎಂ ಆಗೋವರೆಗೂ ಕರ್ನಾಟಕಕ್ಕೆ ಬರಲ್ಲ ಪ್ರತಿಜ್ಞೆ ಮಾಡಿದ್ದಾರೆ ಎನ್ನಲಾಗಿದ್ದು ಅಜ್ಞಾತ ಸ್ಥಳದಲ್ಲಿದ್ದಾರೆ.

ನಿಮಗಾಗಿ ನಾವು ಕ್ರಾಸ್ ವೋಟ್ ಮಾಡಲಿಕ್ಕೆ ಸಿದ್ಧವಾಗಿದ್ದೇವೆ. ನಾವು 8 ಜನ ನಿಮಗೆ ನಮ್ಮ ಬೆಂಬಲ ನೀಡಿ ರಾಜೀನಾಮೆಯನ್ನು ನೀಡುತ್ತೇವೆ. ಈ ಕೆಲಸಕ್ಕೆ ಪ್ರತಿಫಲವಾಗಿ ನಮಗೆ ನಮ್ಮ ಕೆಲವು ಷರತ್ತುಗಳನ್ನು ಒಪ್ಪಿಕೊಳ್ಳುಬೇಕೆಂದು ಅತೃಪ್ತ ಶಾಸಕರು ಬಿಜೆಪಿ ನಾಯಕರಿಗೆ ತಿಳಿಸಿದ್ದಾರಂತೆ. ಸಂಕ್ರಾಂತಿಯ ಕ್ರಾಂತಿ ವಿಫಲವಾದ ಬೆನ್ನಲ್ಲೇ ಆಪರೇಷನ್ ಮೌನ ಕ್ರಾಂತಿಗೆ ಮುಂದಾಗಿದ್ದ ಬಿಜೆಪಿಗೆ ಅತೃಪ್ತರ ಷರತ್ತು ಕೇಳಿ ಒಂದು ಕ್ಷಣ ಸುಸ್ತಾಗಿದ್ದಾರೆ. ಬಜೆಟ್ ಅಧಿವೇಶನಕ್ಕೂ ಮುನ್ನವೇ ಸರ್ಕಾರ ಬೀಳಿಸಲು ಮುಂದಾಗಿದ್ದ ಬಿಜೆಪಿಗೆ ಷರತ್ತುಗಳು ಹಿಮಾಲಯದಂತೆ ಕಾಣಿಸುತ್ತಿದೆ ಎಂಬ ಚರ್ಚೆಗಳು ಪಕ್ಷದ ಅಂಗಳದಲ್ಲಿ ಆರಂಭಗೊಂಡಿವೆ.

ಅತೃಪ್ತರ ಷರತ್ತುಗಳು ಏನು?
ನಮ್ಮ ರಾಜೀನಾಮೆ ಬಳಿಕ ಕೂಡಲೇ ಚುನಾವಣೆ ನಡೆಯುವಂತೆ ನೋಡಿಕೊಳ್ಳಬೇಕು. ಲೋಕಸಭೆ ಜೊತೆಗೆ ನಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆದು, ನಾವು ಮತ್ತೊಮ್ಮೆ ಗೆಲ್ಲುವಂತಾಗಬೇಕು. ಒಂದು ವೇಳೆ ಲೋಕಸಮರ ಜೊತೆಗೆ ಆಗದೇ ಇದ್ದಲ್ಲಿ ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯ ಜೊತೆಯಲ್ಲಿ ನಮ್ಮಲ್ಲಿ ಎಲೆಕ್ಷನ್ ನಡೆಯಬೇಕು. ಈ ಷರತ್ತುಗಳಿಗೆ ನೀವು ಒಪ್ಪಿದ್ರೆ ನಾವು ನಿಮಗೆ ಬೆಂಬಲ ನೀಡುತ್ತೇವೆ ಎಂದು ಅತೃಪ್ತ ಶಾಸಕರು ಹೇಳಿದ್ದಾರೆ.

ಬಿಎಸ್ವೈ ನಡೆಯ ಮೇಲೆ ನಿರ್ಧಾರ:
ಅತೃಪ್ತ ಶಾಸಕರ ಷರತ್ತುಗಳನ್ನು ಕೇಳಿಸಿಕೊಂಡಿರುವ ಯಡಿಯೂರಪ್ಪನವರ ಮುಂದಿನ ನಡೆಯ ಮೇಲೆ ನಿರ್ಧಾರವಾಗಲಿದೆ. ಬಿಜೆಪಿ ನೀಡುವ ಈ ಭರವಸೆಯನ್ನು ನಂಬಿಕೊಂಡು ಅತೃಪ್ತ 8 ಶಾಸಕರು ವಿಶ್ವಾಸಮತಯಾಚನೆ ವೇಳೆ ಕ್ರಾಸ್ ವೋಟ್ ಮಾಡ್ತಾರಾ? ಅತೃಪ್ತರು ಮಾತೃ ಪಕ್ಷಕ್ಕೆ ಮರಳ್ತಾರಾ? ಹಾಗಾದ್ರೆ ಫೆಬ್ರವರಿ 6ರಿಂದ 10 ಈ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಹೊಸ ಬದಲಾವಣೆ ಆಗುತ್ತಾ ಎಂಬುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

ಪಕ್ಷಾಂತರ ಕಾಯ್ದೆ ಏನು ಹೇಳುತ್ತೆ?
ಪಕ್ಷಾಂತರ ನಿಷೇಧ ಕಾಯ್ದೆಯಡಿ ಪಕ್ಷದ ಆದೇಶ ಉಲ್ಲಂಘಿಸಿದರೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತೆಗೆದು ಹಾಕಬಹುದು. ಆಗ ಸಹಜವಾಗಿಯೇ ಶಾಸಕರು ಅನರ್ಹರಾಗುತ್ತಾರೆ. ಅನರ್ಹ ಶಾಸಕರು ವಿಧಾನಸಭೆ ಅವಧಿ ಮುಗಿಯುವವರೆಗೆ ಬೇರೆ ಪಕ್ಷಕ್ಕೆ ಸೇರುವಂತಿಲ್ಲ. ಹಾಲಿ ವಿಧಾನಸಭೆ ಅವಧಿ ಮುಗಿಯುವವರೆಗೂ ಉಪ ಚುನಾವಣೆಯಲ್ಲೂ ಸ್ಪರ್ಧಿಸುವಂತಿಲ್ಲ. ಅನರ್ಹಗೊಂಡ ಶಾಸಕರು ಮಂತ್ರಿ ಸ್ಥಾನ ಸೇರಿದಂತೆ ಯಾವುದೇ ಸರ್ಕಾರಿ ಹುದ್ದೆಯನ್ನು ಹೊಂದುವಂತಿಲ್ಲ.

ಅನರ್ಹಗೊಂಡ ದಿನದಿಂದ ಅವರ ಶಾಸಕತ್ವ ಅವಧಿ ಯಾವಾಗ ಮುಗಿಯುತ್ತೋ ಅಲ್ಲಿವರೆಗೆ ಹುದ್ದೆಗಳನ್ನ ಹೊಂದುವಂತಿಲ್ಲ. ಪಕ್ಷದ ಒಟ್ಟು ಶಾಸಕರಲ್ಲಿ 2/3ರಷ್ಟು ಶಾಸಕರು ಗುಂಪಾಗಿ ಪಕ್ಷಾಂತರ ಮಾಡಿದರಷ್ಟೇ ಅನರ್ಹತೆ ಅನ್ವಯಿಸಲ್ಲ. ಶಾಸಕರನ್ನು ಅನರ್ಹಗೊಳಿಸುವ ಅಧಿಕಾರ ವಿಧಾನಸಭೆ ಸ್ಪೀಕರ್ ಕೈಯಲ್ಲಿದ್ದು, ಅನರ್ಹತೆ ಪ್ರಶ್ನಿಸಿ ಸ್ಪೀಕರ್ ಅವರಿಗೂ ಮನವಿ, ಕಾನೂನು ಹೋರಾಟವನ್ನೂ ಮಾಡಬಹುದು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ