ಬೆಂಗಳೂರು, ಏ.24-ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡುವುದಾಗಿ ನೀಡಿದ ಹೇಳಿಕೆ ಬೆನ್ನಲ್ಲೇ ಸಮ್ಮಿಶ್ರ ಸರ್ಕಾರ ಎಚ್ಚೆತ್ತುಕೊಂಡಿದ್ದು, ಜೆಡಿಎಸ್-ಕಾಂಗ್ರೆಸ್ ಎಲ್ಲ ಶಾಸಕರ ಮೇಲೆ ತೀವ್ರ ನಿಗಾ ಇಡಲು ಗುಪ್ತಚರ ಇಲಾಖೆಗೆ ಸೂಚನೆ ನೀಡಿದೆ.
ಲೋಕಸಭೆ ಚುನಾವಣೆ ಮುಗಿದಿದ್ದು, ಫಲಿತಾಂಶಕ್ಕಾಗಿ ಇನ್ನೂ ಒಂದು ತಿಂಗಳು ಕಾಲಾವಕಾಶವಿದೆ. ಈ ನಡುವೆ ಬಿಜೆಪಿ ನಾಯಕರು ಕಾಂಗ್ರೆಸ್-ಜೆಡಿಎಸ್ನ ಅತೃಪ್ತ ಶಾಸಕರನ್ನು ಸಂಪರ್ಕಿಸಿ ರಾಜೀನಾಮೆ ಕೊಡಿಸುವ ಮೂಲಕ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲು ವ್ಯೂಹ ರಚಿಸಿದ್ದಾರೆ.
ರಮೇಶ್ ಜಾರಕಿಹೊಳಿ ಹೇಳಿಕೆ ಮೂಲಕ ಸಮ್ಮಿಶ್ರ ಸರ್ಕಾರಕ್ಕೆ ಗಂಡಾಂತರ ಎದುರಾಗಿರುವುದು ಸ್ಪಷ್ಟವಾಗಿದೆ. ಹೀಗಾಗಿ ಶಾಸಕರ ಚಲನವಲನಗಳ ಮೇಲೆ ತೀವ್ರ ನಿಗಾ ವಹಿಸಲು ಗುಪ್ತಚರ ಇಲಾಖೆಗೆ ಸೂಚನೆ ರವಾನೆಯಾಗಿದೆ. ಶಾಸಕರಷ್ಟೇ ಅಲ್ಲ, ಅವರ ಸಂಬಂಧಿಕರು, ಆಪ್ತರು ಮತ್ತು ಜಿಲ್ಲಾ ಮಟ್ಟದ ಪ್ರಭಾವಿ ನಾಯಕರ ಚಲನವಲನಗಳನ್ನು ಗಮನಿಸಿ ಕಾಲ ಕಾಲಕ್ಕೆ ವರದಿ ನೀಡಬೇಕು ಎಂದು ಸೂಚಿಸಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.
ಆಪರೇಷನ್ ಕಮಲದಿಂದ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿರುವ ಬೆನ್ನಲ್ಲೇ ಕಾಂಗ್ರೆಸ್-ಜೆಡಿಎಸ್ ನಾಯಕರು ಬಿಜೆಪಿ ಶಾಸಕರುಗಳನ್ನು ಸಂಪರ್ಕಿಸಿ ಆಪರೇಷನ್ ಕಮಲಕ್ಕೆ ತಿರುಗೇಟು ನೀಡಲು ಮುಂದಾಗಿದ್ದಾರೆ.
ಈಗಾಗಲೇ ಕಾಂಗ್ರೆಸ್ನ ಉಮೇಶ್ ಜಾಧವ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದು, ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ಸ್ಪರ್ಧಿಸಿದ್ದರು. ಆ ಫಲಿತಾಂಶದ ಬಗ್ಗೆ ಅತೃಪ್ತ ಶಾಸಕರು ತೀವ್ರ ಕುತೂಹಲ ಹೊಂದಿದ್ದು, ಒಂದು ವೇಳೆ ಉಮೇಶ್ ಜಾಧವ್ ಗೆಲುವು ಕಂಡರೆ ರಾಜೀನಾಮೆ ನೀಡಲು ದೋಸ್ತಿ ಪಕ್ಷಗಳ ಅತೃಪ್ತ ಶಾಸಕರು ಸರತಿ ಸಾಲಿನಲ್ಲಿ ಮುಂದಾಗುವ ಸಾಧ್ಯತೆ ಇದೆ.
ಉಮೇಶ್ ಜಾಧವ್ ಅವರ ರಾಜೀನಾಮೆಯಿಂದ ತೆರವಾಗಿರುವ ಚಿಂಚೋಳಿ ವಿಧಾನಸಭಾ ಕ್ಷೇತ್ರಕ್ಕೂ ಉಪಚುನಾವಣೆ ನಡೆಯುತ್ತಿದ್ದು, ಈ ಕ್ಷೇತ್ರವನ್ನು ಮತ್ತೆ ಗೆಲ್ಲುವ ಮೂಲಕ ಉಮೇಶ್ ಜಾಧವ್ ಅವರಿಗೆ ತಕ್ಕ ಪಾಠ ಕಲಿಸಲು ದೋಸ್ತಿ ಪಕ್ಷಗಳು ಮುಂದಾಗಿವೆ.
ಆಪರೇಷನ್ ಕಮಲಕ್ಕೆ ತುತ್ತಾದವರನ್ನು ಸೋಲಿಸಿ ಮುಂದಿನ ದಿನಗಳಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ಬಿಟ್ಟು ಹೋಗುವವರಿಗೆ ಎಚ್ಚರಿಕೆ ನೀಡುವುದು ಕಾಂಗ್ರೆಸ್ನ ಉದ್ದೇಶವಾಗಿದೆ. ಈ ನಡುವೆ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಏನೆಲ್ಲ ಕಸರತ್ತುಗಳನ್ನು ನಡೆಸಬೇಕು ಎಂಬ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.
ಬಿಜೆಪಿಯಲ್ಲಿ ಅಸಮಾಧಾನಗೊಂಡಿರುವ ಶಾಸಕರನ್ನು ಕೆಲ ಸಚಿವರುಗಳು ಸಂಪರ್ಕಿಸಿದ್ದು, ಕಾಂಗ್ರೆಸ್ ಅಥವಾ ಜೆಡಿಎಸ್ ಪಕ್ಷಗಳಿಂದ ಯಾರಾದರೂ ರಾಜೀನಾಮೆ ನೀಡಿದರೆ ಅದಕ್ಕೆ ಪ್ರತಿಯಾಗಿ ಬಿಜೆಪಿ ಶಾಸಕರಿಂದಲೂ ರಾಜೀನಾಮೆ ಕೊಡಿಸಿ ತಿರುಗೇಟು ನೀಡುವ ಬಗ್ಗೆ ಚರ್ಚೆಗಳು ನಡೆದಿವೆ.
ಸಾಮಾನ್ಯವಾಗಿ ಬಿಜೆಪಿಯಲ್ಲಿ ಸೈದ್ಧಾಂತಿಕ ಹಿನ್ನೆಲೆಯಿಂದ ಬಂದ ಬಹಳಷ್ಟು ಮಂದಿ ಶಾಸಕರಿದ್ದು, ಅವರನ್ನು ಸೆಳೆಯುವುದು ಕಷ್ಟದ ವಿಷಯ. ಹೀಗಾಗಿ ಇತ್ತೀಚೆಗಷ್ಟೇ ಬಿಜೆಪಿ ಸೇರಿ ಶಾಸಕರಾಗಿರುವ ಅನ್ಯ ಪಕ್ಷಗಳ ವಲಸೆ ಮುಖಂಡರನ್ನು ದೋಸ್ತಿ ಪಕ್ಷಗಳು ಸಂಪರ್ಕಿಸುತ್ತಿವೆ. ಮೂಲಗಳ ಪ್ರಕಾರ ಬಿಜೆಪಿ ಪಾಳಯದಿಂದಲೂ ಕೆಲವು ಶಾಸಕರು ದೋಸ್ತಿ ಸರ್ಕಾರದ ಜೊತೆ ಕೈ ಜೋಡಿಸಲು ಸಮ್ಮತಿಸಿದ್ದಾರೆ ಎನ್ನಲಾಗಿದೆ.
ಮೇ 23ರಂದು ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿರುವ ಬೆನ್ನಲ್ಲೇ ಸಮ್ಮಿಶ್ರ ಸರ್ಕಾರದ ಅಳಿವು-ಉಳಿವಿನ ಚಟುವಟಿಕೆಗಳು ಚುರುಕು ಪಡೆಯಲಿವೆ. ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಲು ಮುಂದಿನ ತಿಂಗಳ ಮೊದಲ ವಾರದಲ್ಲಿ ಸಮನ್ವಯ ಸಮಿತಿ ಸಭೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.