ಕಾಂಗ್ರೇಸ್ ಅಭ್ಯರ್ಥಿ ಗೆಲ್ಲಬೇಕು-ಸೋತರೆ ಜೆಡಿಎಸ್‍ಗೆ ಕೊಟ್ಟಿರುವ ಬೆಂಬಲ ವಾಪಸ್?-ಮಾಜಿ ಸಿ.ಎಂ.ಸಿದ್ದರಾಮಯ್ಯ

ಬೆಂಗಳೂರು, ಏ.24-ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಜಯ್‍ಶಂಕರ್ ಗೆಲ್ಲಲೇಬೇಕು ಇಲ್ಲದೆ ಹೋದರೆ ಫಲಿತಾಂಶ ಪ್ರಕಟಗೊಂಡ ಮಾರನೆ ದಿನವೇ ಜೆಡಿಎಸ್‍ಗೆ ಕೊಟ್ಟಿರುವ ಬೆಂಬಲವನ್ನು ಹಿಂಪಡೆದುಕೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನೇರ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಮೊದಲ ಹಂತದ ಲೋಕಸಭೆ ಚುನಾವಣೆ ವೇಳೆ ಜಂಟಿಯಾಗಿ ಪ್ರಚಾರಕ್ಕೆ ಇತರೆ ನಾಯಕರೊಂದಿಗೆ ಸಿದ್ದರಾಮಯ್ಯ, ಕುಮಾರಸ್ವಾಮಿ, ದೇವೆಗೌಡರು ಹೋಗಿದ್ದಾಗ ಖಾಸಗಿಯಾಗಿ ಮಾತನಾಡುವಾಗ ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂಪಡೆಯುವ ಬೆದರಿಕೆ ಹಾಕಿದ್ದರು ಎಂದು ತಿಳಿದುಬಂದಿದೆ.

ಮೈಸೂರಿನಲ್ಲಿ ಕಾಂಗ್ರೆಸ್ ಗೆಲ್ಲಬೇಕು. ಅದಕ್ಕಾಗಿ ಹಣ ಹಂಚುತ್ತೀರೋ, ಜನರ ಕೈಕಾಲು ಹಿಡಿಯುತ್ತೀರೋ, ಏನು ಮಾಡುತ್ತಿರೋ ಗೊತ್ತಿಲ್ಲ, ಬಿಜೆಪಿ ಸೋಲಬೇಕು, ವಿಜಯ್‍ಶಂಕರ್ ಗೆಲ್ಲಬೇಕು, ಪ್ರತಾಪ್‍ಸಿಂಹ ಸೋಲಬೇಕು. ಒಂದು ವೇಳೆ ಮೈಸೂರಿನಲ್ಲಿ ಬಿಜೆಪಿ ಗೆದ್ದರೆ ಮೇ 23ರಂದು ಫಲಿತಾಂಶ ಪ್ರಕಟಗೊಳ್ಳುತ್ತದೆ. ಮೇ 24 ರಂದು ಸಮ್ಮಿಶ್ರ ಸರ್ಕಾರಕ್ಕೆ ಕಾಂಗ್ರೆಸ್ ನೀಡಿರುವ ಬೆಂಬಲವನ್ನು ಹಿಂಪಡೆಯಲಾಗುತ್ತದೆ. ನನಗೆ ಹಿಂದೆ-ಮುಂದೆ ಮಾತನಾಡಿ ಗೊತ್ತಿಲ್ಲ. ನನ್ನ ಅಭಿಪ್ರಾಯವನ್ನು ನೇರವಾಗಿ ಹೇಳಿದ್ದೇನೆ. ಈ ವಿಷಯದಲ್ಲಿ ನಾನು ಯಾರ ಮುಲಾಜಿಗೂ ಒಳಗಾಗುವುದಿಲ್ಲ ಎಂದು ಸಿದ್ದರಾಮಯ್ಯ ಖಡಕ್ ಎಚ್ಚರಿಕೆ ನೀಡಿದ್ದರು ಎಂದು ಹೇಳಲಾಗಿದೆ.

ಖಾಸಗಿ ಮಾತುಕತೆಯ ನಂತರ ವೇದಿಕೆಯಲ್ಲಿ ಭಾಷಣ ಮಾಡಿದ ಸಿದ್ದರಾಮಯ್ಯ ಅವರು, ಜಿ.ಟಿ.ದೇವೇಗೌಡ ಅವರನ್ನು ಕುರಿತು ಸಚಿವ ಸ್ಥಾನ ಉಳಿಯಬೇಕಾದರೆ ಮೈಸೂರಿನಲ್ಲಿ ಕಾಂಗ್ರೆಸ್ ಗೆಲ್ಲಲೇಬೇಕೆಂದು ಬಹಿರಂಗವಾಗಿಯೇ ಎಚ್ಚರಿಕೆ ನೀಡಿದ್ದರು.

2014ರ ಲೋಕಸಭಾ ಚುನಾವಣೆಯಲ್ಲಿ ಎಚ್.ವಿಶ್ವನಾಥ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ವೇಳೆ ಅತ್ಯಲ್ಪ ಮತಗಳ ಅಂತರದಿಂದ ಕಾಂಗ್ರೆಸ್ ಸೋಲು ಕಂಡಿತ್ತು. ನಂತರದ ರಾಜಕೀಯ ಬೆಳವಣಿಗೆಯಲ್ಲಿ ವಿಶ್ವನಾಥ್ ಕಾಂಗ್ರೆಸ್ ಬಿಟ್ಟು ಜೆಡಿಎಸ್‍ಗೆ ಹೋಗಿದ್ದರು. ಬಿಜೆಪಿಯಲ್ಲಿದ್ದ ಸಿ.ಎಚ್.ವಿಜಯ್‍ಶಂಕರ್ ಕಾಂಗ್ರೆಸ್‍ಗೆ ಬಂದಿದ್ದರು. ಸಿದ್ದರಾಮಯ್ಯ ಅವರು ಹಠ ಹಿಡಿದು ಮೈತ್ರಿ ಸಂದರ್ಭದಲ್ಲಿ ಮೈಸೂರನ್ನು ಕಾಂಗ್ರೆಸ್ ಪಾಲಿಗೆ ಪಡೆದುಕೊಂಡಿದ್ದರು. ಇದಕ್ಕೂ ಮುನ್ನ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‍ನ ಜಿ.ಟಿ.ದೇವೇಗೌಡ ಹಾಗೂ ಕಾಂಗ್ರೆಸ್‍ನ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪರಸ್ಪರ ಎದುರಾಳಿಗಳಾಗಿ ವಿಧಾನಸಭೆ ಚುನಾವಣೆ ಎದುರಿಸಿದ್ದರು.

ಆರಂಭದಲ್ಲಿ ಈ ಇಬ್ಬರ ನಡುವೆ ಒಂದಷ್ಟು ರಾಜಕೀಯ ವೈರತ್ವವೂ ಬೆಳೆದಿತ್ತು. ಸಚಿವರಾಗಿದ್ದ ಜಿ.ಟಿ.ದೇವೇಗೌಡ ಅವರು ಜಿಲ್ಲಾ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರಿಗೆ ಸೆಡ್ಡು ಹೊಡೆದಿದ್ದರು.ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಮೈಸೂರು ಕ್ಷೇತ್ರವನ್ನು ಕಾಂಗ್ರೆಸ್‍ಗೆ ಬಿಟ್ಟುಕೊಟ್ಟ ನಂತರ ಜಿ.ಟಿ.ದೇವೇಗೌಡ ಅಸಮಾಧಾನಗೊಂಡು ಒಂದಷ್ಟು ದಿನ ಚುನಾವಣೆಗಳಿಂದ ದೂರ ಉಳಿದಿದ್ದರು.

ಮಂಡ್ಯ ಹೊರತುಪಡಿಸಿ ಉಳಿದೆಲ್ಲ ಕಡೆ ಮಿತ್ರ ಪಕ್ಷಗಳು ಸಮನ್ವಯತೆಯಿಂದ ಕೆಲಸ ಮಾಡಿದರೆ, ಮೈಸೂರಿನಲ್ಲಿ ಒಳಬೇಗುದಿಗಳು ಉಳಿದೇ ಇತ್ತು. ಈಗ ಜಂಟಿ ಚುನಾವಣಾ ಪ್ರಚಾರಕ್ಕೆ ತೆರಳಿದಾಗ ನಿಷ್ಠುರವಾಗಿ ಮಾತನಾಡಿದ ಸಿದ್ದರಾಮಯ್ಯ ಅವರು, ಮೈತ್ರಿ ಧರ್ಮ ಬಿಟ್ಟು ಕೆಲಸ ಮಾಡಿದರೆ ಕಾಂಗ್ರೆಸ್ ಅಭ್ಯರ್ಥಿ ಏನಾದರೂ ಸೋತರೆ ಸರ್ಕಾರವನ್ನೇ ಉರುಳಿಸುವುದಾಗಿ ಎಚ್ಚರಿಕೆ ನೀಡಿದ್ದರು ಎಂದು ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ