ಕಾಂಗ್ರೇಸ್ ಶಾಸಕಿ ನೀತಿ ಸಂಹಿತೆ ಉಲ್ಲಂಘನೆ

ಬೆಂಗಳೂರು, ಏ.23- ಜನಸಾಮಾನ್ಯರಿಗೆ ಮಾದರಿಯಾಗಬೇಕಿದ್ದ ಶಾಸಕಿಯೊಬ್ಬರು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಮತಗಟ್ಟೆ ಆವರಣದಲ್ಲಿ ಮತ ಕೇಳಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿಯ ಜಿಲ್ಲೆಯ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಜಿಲ್ಲೆಯ ಮತ ಗಟ್ಟೆ ಸಂಖ್ಯೆ 60(ಹಿಂಡಲಗ)ರಲ್ಲಿ ನೀತಿ ಸಂಹಿತೆ ಉಲ್ಲಂಘಿಸಿ ಇದೊಂದು ಬಾರಿ ಕಾಂಗ್ರೆಸ್ ಬೆಂಬಲಿಸಬೇಕೆಂದು ಮತದಾರರಿಗೆ ಮನವಿ ಮಾಡಿಕೊಂಡರು.

ತಮ್ಮ ಹಕ್ಕು ಚಲಾಯಿಸಿದ ನಂತರ ಹೊರಹೋಗಬೇಕಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಹೊರ ಹೋಗದೆ ಪುನಃ ಸರತಿಯಲ್ಲಿ ನಿಂತಿದ್ದ ಮತದಾರರನ್ನು ಕೈ ಮುಗಿಯುತ್ತಾ ಒಂದು ಬಾರಿ ಕಾಂಗ್ರೆಸ್‍ಗೆ ಬೆಂಬಲ ನೀಡಬೇಕೆಂದು ಕೇಳಿಕೊಂಡರು.

ಕಡೆಪಕ್ಷ ಮತಗಟ್ಟೆಯ ಹೊರಗೆ ನಿಂತಾದರೂ ಕೇಳಬಹುದಿತ್ತು. ಅಷ್ಟಕ್ಕೂ ಸುಮ್ಮನಾಗದ ಅವರು, ಮತದಾನ ಮಾಡುವ ಇವಿಎಂ ಯಂತ್ರಗಳ ಬಳಿಯೂ ಹೋಗಿ ಮತದಾರರಿಗೆ ಕೈ ಮುಗಿಯುತ್ತಿದ್ದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ನಿಯಮಗಳ ಪ್ರಕಾರ ಯಾರೊಬ್ಬರೂ ಮತಗಟ್ಟೆ ಸಂಖ್ಯೆಯ 100 ಮೀಟರ್ ಸುತ್ತಮುತ್ತ ಮತ ಯಾಚನೆ ಮಾಡುವುದಾಗಲಿ, ಅಭ್ಯರ್ಥಿ ಪರ ಮತ ಹಾಕುವಂತೆ ಕೋರುವಂತಿಲ್ಲ. ಮೈಕ್ ಹಿಡಿದುಕೊಂಡು ಮತಯಾಚನೆ ಮಾಡುವಂತಿಲ್ಲ ಎಂದು ನೀತಿ ಸಂಹಿತೆ ಹೇಳುತ್ತದೆ.

ಲಕ್ಷ್ಮಿ ಹೆಬ್ಬಾಳ್ಕರ್ ಮತ ಯಾಚಿಸುತ್ತಿದ್ದ ವೇಳೆ ಚುನಾವಣಾಧಿಕಾರಿಗಳು ತುಟಿಕ್‍ಪಿಟಕ್ ಎನ್ನದೆ ಮೌನಕ್ಕೆ ಶರಣಾಗಿದ್ದರು. ಲಕ್ಷ್ಮಿ ಹೆಬ್ಬಾಳ್ಕರ್ ಈ ಹಿಂದೆಯೂ ಇಂತಹ ವಿವಾದದಿಂದಲೇ ಸಾಕಷ್ಟು ಸುದ್ದಿಯಾಗಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ