ಲಂಕಾ ಸ್ಫೋಟದಲ್ಲಿ ಮೃತಪಟ್ಟವರ ಮನೆಗಳಲ್ಲಿ ನೀರವ ಮೌನ

ಬೆಂಗಳೂರು, ಏ.23- ಶ್ರೀಲಂಕಾ ಪ್ರವಾಸಕ್ಕೆ ತೆರಳಿ ಬಾಂಬ್ ಸ್ಫೋಟದ ದುರಂತದಲ್ಲಿ ಮೃತಪಟ್ಟ ಜೆಡಿಎಸ್‍ನ ಏಳು ಮಂದಿ ಮುಖಂಡರ ಮನೆಗಳಲ್ಲಿ ನೀರವಮೌನ ಆವರಿಸಿದ್ದು, ಅವರ ಕುಟುಂಬ ಸದಸ್ಯರು, ಬಂಧುಗಳು, ಸ್ನೇಹಿತರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.

ಪ್ರಸಕ್ತ ಲೋಕಸಭಾ ಚುನಾವಣೆ ಮುಗಿದ ನಂತರ ಏಳು ಮಂದಿಯೂ ಖುಷಿಯಿಂದ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದರು. ಕೊಲಂಬೊದ ಶಾಂಗ್ರಿಲಾ ಹೋಟೆಲ್ ಬಳಿ ನಡೆದ ಬಾಂಬ್ ಸ್ಪೋಟದಲ್ಲಿ ಮೃತಪಟ್ಟಿದ್ದಾರೆ ಎಂಬ ಸುದ್ದಿ ಬರಸಿಡಿಲಿನಂತೆ ಅವರ ಕುಟುಂಬ ವರ್ಗದವರಿಗೆ ತಲುಪಿದೆ. ಸುದ್ದಿ ತಿಳಿದ ಕೂಡಲೇ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.

ಬೆಂಗಳೂರಿನ ಎಮ್.ಎಸ್.ರಾಮಯ್ಯ ಬಡಾವಣೆ ನಿವಾಸಿ ಹಾಗೂ ದಾಸರಹಳ್ಳಿ ಜೆಡಿಎಸ್ ಘಟಕದ ಕಾರ್ಯದರ್ಶಿ ಹನುಮಂತರಾಯಪ್ಪ ಅವರ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ. ಕುಟುಂಬ ಸದಸ್ಯರಲ್ಲದೆ ಬಂಧುಗಳು, ಸ್ನೇಹಿತರು ಅವರ ಒಡನಾಟವನ್ನು ನೆನೆದು ದುಃಖವನ್ನು ತಡೆಯಲಾಗದೆ ಕಣ್ಣಿರಧಾರೆ ಹರಿಸುತ್ತಿದ್ದಾರೆ. ಜೊತೆ ಕುಟುಂಬದ ಸದಸ್ಯರನ್ನು ನಿರಂತರವಾಗಿ ಸಂತೈಸುತ್ತಿದ್ದಾರೆ.

ನೆಲಮಂಗಲ ತಾ.ಪಂ ಮಾಜಿ ಅಧ್ಯಕ್ಷ ಕೆ.ಎಮ್.ಲಕ್ಷ್ಮಿನಾರಾಯಣ್ ಅವರು ಕೂಡ ಬಾಂಬ್ ಸ್ಪೋಟ್ ದುರಂತದಲ್ಲಿ ಮೃತಪಟ್ಟಿದ್ದು, ನೆಲಮಂಗಲ ನ್ಯೂಟೌನ್‍ನಲ್ಲಿರುವ ಅವರ ಮನೆಯಲ್ಲೂ ಕೂಡ ದುಃಖದ ಛಾಯೆ ಆವರಿಸಿದೆ. ಬಂಧುಗಳು, ಸ್ನೇಹಿತರು, ಹಿತೈಷಿಗಳು ಆಗಮಿಸುತ್ತಿದ್ದು ದುಃಖ ಮಡುಗಟ್ಟಿದೆ.

ದಾಸರಹಳ್ಳಿಯ ಬೂತ್ ಸಮಿತಿ ಅಧ್ಯಕ್ಷ ಹಾಗೂ ಚೊಕ್ಕಸಂದ್ರದ ನಿವಾಸಿ ಎಂ.ರಂಗಪ್ಪ ಮೃತಪಟ್ಟಿದ್ದು, ಅವರ ಮನೆಯಲ್ಲೂ ನೀರವಮೌನ ಆವರಿಸಿದೆ.

ಕುಟುಂಬ ಸದಸ್ಯರ ರೋಧನ ಮುಗಿಲು ಮುಟ್ಟಿದ್ದು, ಎಲ್ಲರ ಮುಖದಲ್ಲೂ ನಿರಾಸೆಯ ಕಾರ್ಮೋಡ ಕವಿದಿದೆ.

ನೆಲಮಂಗಲ ಹರ್ಷಾ ಆಸ್ಪತ್ರೆಯ ನಿರ್ದೇಶಕ ಎಚ್.ಶಿವಕುಮಾರ್ ಕೂಡ ದುರಂತದಲ್ಲಿ ಮೃತಪಟ್ಟಿದ್ದಾರೆ. ನೆಲಮಂಗಲ ಪಟ್ಟಣದಲ್ಲಿರುವ ಅವರ ಮನೆಯಲ್ಲೂ ಸನ್ಮಾಶ ಮೌನ ಆವರಿಸಿದ್ದು, ಕುಟುಂಬಸ್ತರು, ಅಭಿಮಾನಿಗಳು, ಸ್ನೇಹಿತರು, ಬಂಧುಬಾಂಧವರು ದುಃಖ ತಡೆಯಲಾಗದೆ ಉಮ್ಮಳಿಸಿ ಮೃತದೇಹವನ್ನು ಎದುರು ನೋಡುತ್ತಿದ್ದಾರೆ.

ಅಡಕಮಾರನಹಳ್ಳಿಯ ಮಾರೇಗೌಡ ಅವರು ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ. ಅವರ ಕುಟುಂಬದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ, ಪ್ರವಾಸಕ್ಕೆ ಹೋದವರು ಮರಳಿ ಬರಲಿಲ್ಲ ಎಂದು ನಿರಂತರವಾಗಿ ಕುಟುಂಬಸ್ಥರು ಬಂಧು-ಬಾಂಧವರು ದುಃಖಿಸುತ್ತಿದ್ದಾರೆ.

ಹಾರೋಕ್ಯಾತನಹಳ್ಳಿಯ ಪುಟ್ಟರಾಜು ಅವರು ಕೂಡ ಈ ದುರಂತದಲ್ಲಿ ಮೃತಪಟ್ಟಿದ್ದು, ಅವರ ಕುಟುಂಬಸ್ತರಿಗೆ ದಿಕ್ಕೆತೋಚದಂತಾಗಿದೆ. ಕಣ್ಣೀರು ಸುರಿಸುತ್ತಿದ್ದಾರೆ.

ತುಮಕೂರಿನ ರಮೇಶ್‍ಗೌಡ ಅವರು ಕೂಡ ಮೃತಪಟ್ಟಿದ್ದು, ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ. ಬಂಧುಗಳು, ಮಿತ್ರರು ಮನೆಗೆ ಆಗಮಿಸಿ ಸಾಂತ್ವನ ಹೇಳುತ್ತಿದ್ದಾರೆ. ಮನೆಯಲ್ಲಿ ಶೋಕಛಾಯೆ ಆವರಿಸಿದ್ದು ಅವರ ಕಳೆಬರ ಆಗಮನದ ನಿರೀಕ್ಷೆಯಲ್ಲಿದ್ದಾರೆ.

ಹಾಗೆಯೇ ಪ್ರತ್ಯೇಕವಾಗಿ ಪ್ರವಾಸಕ್ಕೆ ಹೋಗಿದ್ದ ರಾಮಲಿಂಗಾರೆಡ್ಡಿಯವ ಆಪ್ತ ನಾಗರಾಜ ರೆಡ್ಡಿ ದುರಂತದಲ್ಲಿ ಅಸುನೀಗಿದ್ದಾರೆ. ಅವರ ಕುಟುಂಬದಲ್ಲೂ ದುಃಖದ ಛಾಯೆ ಆವರಿಸಿದೆ.

ಚುನಾವಣೆ ಮುಗಿಸಿ ಖುಷಿಯಿಂದ ಪ್ರವಾಸಕ್ಕೆ ಹೋಗಿದ್ದವರು, ಶವವಾಗಿ ಮರಳುತ್ತಿರುವುದನ್ನು ನೆನೆದು ದುಃಖಿಸುತ್ತಿದ್ದಾರೆ. ಕಣ್ಣೀರು ಸುರಿಸುತ್ತಿದ್ದಾರೆ.

ಜೆಡಿಎಸ್‍ನ 7ಮಂದಿ ಮುಖಂಡರು ಪ್ರವಾಸಕ್ಕೆ ಹೋಗಿ, ಸಾವಿನಲ್ಲೂ ಒಂದಾಗಿರುವುದು ವಿಧಿಯಾಟವೇ ಸರಿ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ