ಅಲ್ಲಲ್ಲಿ ಕೈಕೊಟ್ಟ ಮತಯಂತ್ರ-ಕೆಲ ಕಾಲ ಮತದಾನ ಸ್ಥಗಿತ

ಬೆಂಗಳೂರು, ಏ.23-ಅಲ್ಲಲ್ಲಿ ಕೈಕೊಟ್ಟ ಮತಯಂತ್ರ, ಹಲವೆಡೆ ಕೆಲ ಕಾಲ ಮತದಾನ ಸ್ಥಗಿತ, ಕೆಲವೆಡೆ ತಡವಾಗಿ ಆರಂಭವಾದ ಮತದಾನ, ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ಸಣ್ಣಪುಟ್ಟ ಗೊಂದಲದ ನಡುವೆ ಇಂದು ನಡೆದ ರಾಜ್ಯದಲ್ಲಿ 14 ಜಿಲ್ಲೆಗಳ ಎರಡನೇ ಹಂತದ ಲೋಕಸಭಾ ಚುನಾವಣೆಗೆ ಮತದಾನ ಬಹುತೇಕ ಶಾಂತಿಯುತವಾಗಿ ಬಿರುಸಿನಿಂದ ಸಾಗಿತ್ತು. ಮತದಾನದ ಪ್ರಮಾಣ ಮಧ್ಯಾಹ್ನದ ವೇಳೆಗೆ ಶೇ.35ರಷ್ಟು ದಾಟಿತ್ತು.

ಬೆಳಗ್ಗೆ ಚುರುಕಿನಿಂದ ನಡೆದ ಮತದಾನ ಮಧ್ಯಾಹ್ನ ಬಿರು ಬಿಸಿಲಿನ ಪರಿಣಾಮ ಮಂದಗತಿಯಲ್ಲಿ ಸಾಗಿತ್ತು.3 ಗಂಟೆಯ ನಂತರ ಮತದಾನ ಮತ್ತಷ್ಟು ವೇಗ ಪಡೆದುಕೊಂಡಿತ್ತು.ಬೆಳಗಾವಿ, ಚಿಕ್ಕೋಡಿ, ಕೊಪ್ಪಳ, ಬಳ್ಳಾರಿ, ಬಾಗಲಕೋಟೆ, ಹಾವೇರಿ, ವಿಜಯಪುರ, ಧಾರವಾಡ, ಕಲಬುರಗಿ, ಉತ್ತರ ಕನ್ನಡ, ರಾಯಚೂರು, ದಾವಣಗೆರೆ, ಬೀದರ್, ಶಿವಮೊಗ್ಗ ಜಿಲ್ಲೆಗಳಲ್ಲಿ ಮತದಾರರು ಉತ್ಸಾಹದಿಂದ ಮತ ಚಲಾಯಿಸುತ್ತಿದ್ದುದು ಕಂಡು ಬಂದಿತು.

ರಾಯಚೂರಿನಲ್ಲಿ ಎಂಜಿನೀಯರಿಂಗ್ ವಿದ್ಯಾರ್ಥಿನಿ ಮಧುಪತ್ತಾರ ನಿಗೂಢ ಸಾವು ಪ್ರಕರಣ ಖಂಡಿಸಿ ಹಲವು ಮತಗಟ್ಟೆಗಳಲ್ಲಿ ಮತದಾರರು ಕಪ್ಪು ಪಟ್ಟಿ ಧರಿಸಿ ಮತದಾನ ಮಾಡಿದ್ದು ವಿಶೇಷವಾಗಿತ್ತು.

ಕಲಬುರಗಿ, ವಿಜಯಪುರ ಮುಂತಾದೆಡೆ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಕ್ಕೆ ಆಗ್ರಹಿಸಿ ಮತದಾನ ಬಹಿಷ್ಕರಿಸಿ ವಿವಿಧ ಪಕ್ಷಗಳ ಮುಖಂಡರು ಅವರ ಮನವೊಲಿಕೆ ಯತ್ನದಲ್ಲಿ ತೊಡಗಿದ್ದರು.

ಹೈವೋಲ್ಟೆಜ್ ಕ್ಷೇತ್ರಗಳಾದ ಶಿವಮೊಗ್ಗ, ಕಲಬುರಗಿ, ಉತ್ತರ ಕನ್ನಡ ಮುಂತಾದೆಡೆ ಇಂದು ಬೆಳಗ್ಗೆ 7 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಮತದಾರರು ತಮ್ಮ ಹಕ್ಕು ಚಲಾಯಿಸಿದರು.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ವ್ಯಾಪಕ ಭದ್ರತೆ ಕೈಗೊಳ್ಳಲಾಗಿತ್ತು.ಅಭ್ಯರ್ಥಿಗಳು ಹಾಗೂ ಗಣ್ಯರು ತಮ್ಮ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆಯಲ್ಲಿ ಕುಟುಂಬದವರೊಂದಿಗೆ ಆಗಮಿಸಿ ಮತ ಚಲಾಯಿಸಿದರು.

ಹಲವೆಡೆ ಕೈಕೊಟ್ಟ ಮತ ಯಂತ್ರ:
ಬಾಗಲಕೋಟೆ ಜಿಲ್ಲೆಯ ಸಿಟಿ ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆಯಲ್ಲಿನ ವಾರ್ಡ್ ನಂ.3ರ ಮತಗಟ್ಟೆಯ ಸಂಖ್ಯೆ 140ರಲ್ಲಿ ಜನರು ಮತಚಲಾಯಿಸಲು ಸರದಿ ಸಾಲಿನಲ್ಲಿ ನಿಂತಿದ್ದರು.ಆದರೇ ಮತಯಂತ್ರದಲ್ಲಿ ದೋಷ ಕಂಡುಬಂದ ಹಿನ್ನಲೆಯಲ್ಲಿ 50 ನಿಮಿಷ ಮತದಾನ ವಿಳಂಬವಾಯಿತು. ಹೀಗಾಗಿ ಮತ ಚಲಾಯಿಸಲು ಸರದಿ ಸಾಲಿನಲ್ಲಿ ನಿಂತಿದ್ದ ಮತದಾರರು ವಿಧಿಯಿಲ್ಲದೇ ವಾಪಾಸ್ ಹೋಗಬೇಕಾಯಿತು.

ಹುಬ್ಬಳ್ಳಿಯ ವಿದ್ಯಾನಗರದ ಬೂತ್ ನಂಬರ್ 86ರಲ್ಲಿ ಕೂಡ ಇವಿಎಂ ಕೈಕೊಟ್ಟಿತು. ಈ ಹಿನ್ನಲೆಯಲ್ಲಿ ವಿದ್ಯಾನಗರದ ಮತಗಟ್ಟೆಯಲ್ಲಿ ಸಿಬ್ಬಂದಿಗಳ ಜೊತೆಗೆ ಮತದಾರರು ವಾಗ್ವಾದಕ್ಕೆ ಇಳಿದು, ಮತದಾನ ವಿಳಂಭವಾಗುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಬೀದರ್ ನ ಭಾಲ್ಕಿ ತಾಲ್ಲೂಕಿನ ಜಹಿನಾಪೂರ್ ನಲ್ಲಿ 45 ನಿಮಿಷ ಚುನಾವಣಾ ಸಿಬ್ಬಂದಿಗಳ ನಿರ್ಲಕ್ಷ್ಯದಿಂದಾಗಿ ಮತದಾನ ತಡವಾದ ಘಟನೆ ನಡೆದಿದೆ.

ಹುಮನಾಬಾದ್ ತಾಲೂಕಿನ ಮಂಗಲಗಿಯಲ್ಲಿ ಮತಯಂತ್ರ ದೋಷದಿಂದಾಗಿ ಮತದಾನಕ್ಕೆ ಬಂದು ಮತದಾರರು ಇವಿಎಂ ಸರಿ ಹೋಗುವವರೆಗೆ ಕಾದು ಕುಳಿತುಕೊಳ್ಳಬೇಕಾಯಿತು.

ಬೆಳಗಾವಿ ಜಿಲ್ಲೆಯ ಮೂರು ಮತಗಟ್ಟೆಯಲ್ಲಿ 8 ಗಂಟೆಯಾದರೂ ಮತದಾನ ಆರಂಭವಾಗಿರಲಿಲ್ಲ. ಜಿಲ್ಲೆಯ ಅಂಜನಗರ ಬೂತ್ ನಂ.28, ಹಿಂಡಲಗಾ ಮರಾಠಿ ಶಾಲೆಯ ಬೂತ್ ನಂ.58 ಹಾಗೂ ನೆಹರು ನಗರದ ಬೂತ್ ನಂ.69ರಲ್ಲಿ ಇವಿಎಂ ಕೈಕೊಟ್ಟಿತ್ತು.

ದಾವಣಗೆರೆ ಜಿಲ್ಲೆಯ ಶಿರಮಗೊಂಡನಹಳ್ಳಿ ಗ್ರಾಮದ ಮತಗಟ್ಟೆ ಸಂಖ್ಯೆ 179ರಲ್ಲಿ ನಿರ್ಮಾಣವಾಗಿದ್ದ ಸಖಿ ಮತಗಟ್ಟೆಯಲ್ಲೂ ಮತಯಂತ್ರ ಕೈಕೊಟ್ಟ ಪರಿಣಾಮ ಒಂದು ಗಂಟೆ ತಡವಾಗಿ ಮತದಾನ ಆರಂಭವಾಯಿತು.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಕಡೆಕೊಪ್ಪ ಗ್ರಾಮದ ಮತಗಟ್ಟೆ ಸಂಖ್ಯೆ 62ರಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ ಉಂಟಾಯಿತು.ಗಂಗಾವತಿಯ ಸಿಪಿಎಸ್ ಸ್ಕೂಲ್ ನ ಮತಗಟ್ಟೆ ಸಂಖ್ಯೆ 131 ಮತ್ತು 128 ಬೂತ್ ನಲ್ಲೂ ಇದೇ ತಾಂತ್ರಿಕ ಸಮಸ್ಯೆ ಕಂಡುಬಂದರೇ, ಜಿಲ್ಲೆಯ ನೀರಲಗಿರಿಯಲ್ಲಿಯೂ ಕೂಡ ಮತಯಂತ್ರ ಕೈಕೊಟ್ಟು, ಮತದಾನ ತಡವಾಗಿ ಆರಂಭವಾಯಿತು.

ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲೂ ಮತಯಂತ್ರ ಕೈಕೊಟ್ಟ ಕಾರಣ ಅರ್ಧಗಂಟೆ ಮತದಾನ ತಡವಾಗಿ ಆರಂಭವಾದ ಘಟನೆ ನಡೆದಿದೆ.ಕಾರವಾರದ ಬಾಯಿ ಕುವರಬಾಯಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 99ರಲ್ಲಿ ಮತಯಂತ್ರ ದೋಷ ಕಂಡುಬಂದಿತ್ತು.

ಅವಾಜ್ ಹಾಕಿದ ಶಾಸಕ:
ಹಾವೇರಿಯ ಹಾನಗಲ್ ಪಟ್ಟಣದ ಮತಗಟ್ಟೆಗೆ ಮತದಾನ ಮಾಡಲು ಆಗಮಿಸಿದ ಶಾಸಕ ಸಿ.ಎಂ.ಉದಾಸಿಯವರನ್ನು ಚುನಾವಣಾಧಿಕಾರಿಗಳು ಐಡಿ ಕಾರ್ಡ್ ಕೇಳಿದ್ದಕ್ಕೆ ಅಧಿಕಾರಿಗಳ ಮೇಲೆ ಹರಿಹಾಯ್ದಿದ್ದಾರೆ.

ಮತದಾನ ಮಾಡಲು ಬರುವವರು ಯಾರೇ ಆದರೂ ಕಡ್ಡಾಯವಾಗಿ ಐಡಿ ಕಾರ್ಡ್ ತರಬೇಕು. ಕಾನೂನಿ ಪ್ರಕಾರ ಅಧಿಕಾರಿಗಳು ಅದನ್ನು ತೋರಿಸುವಂತೆ ಕೇಳಿದ್ದಾರೆ. ಆದರೆ ಅಧಿಕಾರಿಗಳ ವಿರುದ್ಧವೇ ಶಾಸಕರು ಆವಾಜ್ ಹಾಕಿರುವ ಘಟನೆ ನಡೆದಿದೆ.

ಕೊಪ್ಪಳ ಲೋಕಸಭಾ ಕ್ಷೇತ್ರದ ಕಾರಟಗಿ ತಾಲೂಕಿನ ಬೂದುಗುಂಪಾ ಮತಗಟ್ಟೆಯಲ್ಲಿ ವ್ಯಕ್ತಿಯೊಬ್ಬ ಕಾಂಗ್ರೆಸ್‍ಗೆ ಮತಹಾಕಿರುವ ಪೋಟೋ ವೈರಲ್ ಆಗಿದೆ.

ಮಲ್ಲಯ್ಯ ಎನ್ನುವ ವ್ಯಕ್ತಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ ಪೋಟೋ ತೆಗೆದುಕೊಂಡು ವಾಟ್ಸಪ್ ನಲ್ಲಿ ಹರಿಬಿಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ.
ಚಪ್ಪಲಿ ಧರಿಸಲು ಅನುಮತಿ!

ಪಕ್ಷೇತರ ಅಭ್ಯರ್ಥಿಯೊಬ್ಬರ ಚಿಹ್ನೆ ಚಪ್ಪಲಿಯಾಗಿದ್ದು ಮತದಾನ ಕೇಂದ್ರದ ಸುತ್ತ 100 ಮೀ. ವ್ಯಾಪ್ತಿಯಲ್ಲಿ ಅಭ್ಯರ್ಥಿಯ ಚುನಾವಣೆಯ ಚಿಹ್ನೆ ಇರುವಂತೆ ಇಲ್ಲ ಎಂಬ ಚುನಾವಣಾ ಆಯೋಗದ ನಿಯಮದಿಂದ ವಿವಾದಕ್ಕೀಡಾಗಿದ್ದ “ಚಪ್ಪಲಿ” ಚಿಹ್ನೆ ಸಮಸ್ಯೆ ಬಗೆಹರಿದಿದೆ.

ಚುನಾವಣೆ ಆಯೋಗದ ನಿಯಮಾನುಸಾರ ಮತಗಟ್ಟೆಯ 100 ಮೀ.ವ್ಯಾಪ್ತಿಯಲ್ಲಿ ಸ್ಪರ್ಧೆ ಮಾಡಿರುವ ಅಭ್ಯರ್ಥಿಯ ಚಿಹ್ನೆಯ (ಗುರುತು) ಇರುವಂತೆ ಇಲ್ಲ.

ಹೀಗಾಗಿ ಮತಗಟ್ಟೆ ಸಿಬ್ಬಂದಿ ಚಪ್ಪಲಿ ಹಾಕಿಕೊಂಡು ಬರಬಹುದಾ ಅಥವಾ ಬರುವಂತಿಲ್ಲವೋ ಎಂಬ ಜಿಜ್ಞಾಸೆ ನಡೆದಿತ್ತು.ಈಗ ಚುನಾವಣಾಧಿಕಾರಿ ಪಿ.ಸುನೀಲ್‍ಕುಮಾರ ನಿರ್ಧಾರ ಪ್ರಕಟಿಸುವ ಮೂಲಕ ವಿವಾದಕ್ಕೆ ತೆರೆ ಎಳೆದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ