ಬೆಂಗಳೂರು,ಏ.21- ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಕಳೆದೊಂದು ವಾರದಿಂದ ಚದುರಿದಂತೆ ಮಳೆಯಾಗುತ್ತಿದ್ದು, ಇಂದು ಮತ್ತು ನಾಳೆ ಮಳೆ ಮುಂದುವರೆಯಲಿದೆ.
ನಿನ್ನೆ ಬೆಂಗಳೂರು, ತುಮಕೂರು,ಕೋಲಾರ,ಮಂಡ್ಯ, ಚಾಮರಾಜನಗರ, ರಾಮನಗರ, ಮೈಸೂರು ಸೇರಿದಂತೆ ಹಲವೆಡೆ ಮಳೆಯಾಗಿದೆ. ಕೆಲವು ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗಿದ್ದರೆ ಮತ್ತೆ ಕೆಲವು ಜಿಲ್ಲೆಗಳಲ್ಲಿ ವ್ಯಾಪಕ ಪ್ರಮಾಣದ ಉತ್ತಮ ಮಳೆಯಾಗಿದೆ.
ಬೇಸಿಗೆ ಮಳೆಯಿಂದಾಗಿ ಕೆಲವು ಕಡೆ ವಾತಾವರಣ ತಂಪಾಗಿದ್ದು, ಬಿಸಿಲಿನ ಬೇಗೆಯಿಂದ ತತ್ತರಿಸಿದ ಜನರಿಗೆ ಸಂತಸವನ್ನುಂಟು ಮಾಡಿದೆ.ಮಳೆ ಬಿದ್ದಿರುವ ಕಡೆಗಳಲ್ಲಿ ಕೃಷಿ ಚಟುವಟಿಕೆಗಳು ಆರಂಭವಾಗಿವೆ.
ಗ್ರಾಮೀಣ ಭಾಗದ ಕೆಲವು ಕಡೆ ಬಿರುಗಾಳಿ ಸಹಿತ ಗುಡುಗು- ಮಿಂಚಿನಿಂದ ಕೂಡಿದ ಮಳೆಯಾಗಿದ್ದು, ಬಾಳೆ,ಮಾವು ಸೇರಿದಂತೆ ವಿವಿಧ ಬೆಳೆಗಳಿಗೆ ಹಾನಿ ಉಂಟಾಗಿದೆ. ಕೆಲವು ಕಡೆ ಗಾಳಿ ಹೆಚ್ಚಾಗಿ ಮರಗಳು, ವಿದ್ಯುತ್ ಕಂಬಗಳು ಮುರಿದುಬಿದ್ದಿವೆ.
ಹವಾಮಾನ ತಜ್ಞರ ಪ್ರಕಾರ ಮುಂಗಾರು ಪೂರ್ವ ಅಥವಾ ಬೇಸಿಗೆ ಮಳೆ ಏಪ್ರಿಲ್ನಲ್ಲಿ ಬೀಳುವುದು ಸಹಜ. ಚದುರಿದಂತೆ ಅಲ್ಲಲ್ಲಿ ಸಾಧಾರಣ ಮಳೆ ಮುಂದುವರೆಯುತ್ತದೆ. ಕೆಲವು ಕಡೆ ಭಾರೀ ಮಳೆಯಾದರೆ ಇನ್ನು ಕೆಲವು ಕಡೆ ತುಂತುರು ಮಳೆಯಾಗುವ ಸಾಧ್ಯತೆಗಳಿವೆ.
ಹವಾಮಾನ ಮುನ್ಸೂಚನೆ ಪ್ರಕಾರ ಭಾಹಶಃ ಮೋಡ ಕವಿದ ವಾತಾವರಣವಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಗುಡುಗು ಮಿಂಚು ಸಹಿತ ಮಳೆಯಾಗುವ ಸಂಭವವಿದೆ.