ರಾಜ್ಯದ ಎರಡನೇ ಹಂತದ ಚುನಾವಣೆ-ಬೆಳಗಾವಿ ಕ್ಷೇತ್ರದಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿ

ಬೆಂಗಳೂರು, ಏ.21-ರಾಜ್ಯದಲ್ಲಿ ನಡೆಯುತ್ತಿರುವ ಎರಡನೇ ಹಂತದ ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದರೆ, ರಾಯಚೂರು ಕ್ಷೇತ್ರದಲ್ಲಿ ಅತಿ ಕಡಿಮೆ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ಒಟ್ಟು 14 ಕ್ಷೇತ್ರಗಳಿಗೆ ಮಂಗಳವಾರ ಮತದಾನ ನಡೆಯುತ್ತಿದೆ.

ಇದರಲ್ಲಿ ಹಾಲಿ ಸಂಸದರಾದ ಚಿಕ್ಕೋಡಿಯ ಪ್ರಕಾಶ್ ಹುಕ್ಕೇರಿ, ಬೆಳಗಾವಿಯ ಸುರೇಶ್ ಅಂಗಡಿ, ಬಾಗಲಕೋಟೆಯ ಗದ್ದಿಗೌಡರ್, ವಿಜಯಪುರದ ರಮೇಶ್ ಜಿಗಜಿಣಗಿ, ಕಲಬುರಗಿಯ ಮಲ್ಲಿಕಾರ್ಜುನ ಖರ್ಗೆ, ರಾಯಚೂರಿನ ರಾಜ ಅಮರೇಶ್ವರ್ ನಾಯಕ್, ಬೀದರ್‍ನ ಭಗವಂತ ಕೂಬಾ, ಕೊಪ್ಪಳದ ಕರಡಿ ಸಂಗಣ್ಣ, ಬಳ್ಳಾರಿಯ ವಿ.ಎಸ್.ಉಗ್ರಪ್ಪ, ಹಾವೇರಿಯ ಶಿವಕುಮಾರ್ ಉದಾಸಿ, ಧಾರವಾಡದ ಪ್ರಹ್ಲಾದ್ ಜೋಷಿ, ಉತ್ತರ ಕನ್ನಡದ ಅನಂತ್‍ಕುಮಾರ್ ಹೆಗಡೆ, ದಾವಣಗೆರೆಯ ಜಿ.ಎಂ.ಸಿದ್ದೇಶ್ವರ್,ಶಿವಮೊಗ್ಗದ ಬಿ.ವೈ.ರಾಘವೇಂದ್ರ ಅವರು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

14 ಕ್ಷೇತ್ರಗಳ ಪೈಕಿ ಲೋಕಸಭೆಯ ಕಾಂಗ್ರೆಸ್‍ನ ನಾಯಕ ಮಲ್ಲಿಕಾರ್ಜುನ್ ಖರ್ಗೆ ಸ್ಪರ್ಧಿಸಿರುವ ಕಲಬುರಗಿ ಹೈವೋಲ್ಟೇಜ್ ಕ್ಷೇತ್ರವಾಗಿದ್ದು, ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ಉಮೇಶ್ ಜಾಧವ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ಲೋಕಸಭೆಯಲ್ಲಿ ಕಣಕ್ಕಿಳಿದಿದ್ದಾರೆ. ಉತ್ತಮ ಪ್ರಜಾಕೀಯ ಪಾರ್ಟಿ, ಬಿಎಸ್‍ಪಿ, ಸರ್ವಜನತಾ ಪಾರ್ಟಿ, ರಾಷ್ಟ್ರೀಯ ಸಮಾಜ ಪಕ್ಷ ಸೇರಿದಂತೆ ವಿವಿಧ ಪಕ್ಷಗಳ ಸುಮಾರು 12 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ತಮ್ಮ ಹೇಳಿಕೆಗಳ ಮೂಲಕ ಸದಾ ವಿವಾದಕ್ಕೀಡಾಗುವ ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗಡೆ ಸ್ಪರ್ಧಿಸಿರುವ ಉತ್ತರ ಕನ್ನಡ ಕ್ಷೇತ್ರದಲ್ಲಿ 13 ಮಂದಿ ಕಣದಲ್ಲಿದ್ದು, ಜೆಡಿಎಸ್‍ನಿಂದ ಮೈತ್ರಿ ಅಭ್ಯರ್ಥಿಯಾಗಿ ಆನಂದ್ ಅಸ್ನೋಟಿಕರ್ ಪ್ರಬಲ ಪೈಪೋಟಿ ನಡೆಸಿದ್ದಾರೆ.

ವಿಜಯಪುರದಲ್ಲಿ ಮತ್ತೊಬ್ಬ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಕಣದಲ್ಲಿದ್ದು, ಕಾಂಗ್ರೆಸ್ ಈ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟಿದೆ. ಹಾಗಾಗಿ ಮೈತ್ರಿ ಅಭ್ಯರ್ಥಿಯಾಗಿ ಶಾಸಕ ದೇವಾನಂದ್ ಚೌಹಾಣ್ ಅವರ ಪತ್ನಿ ಡಾ.ಸುನೀತಾ ಕಣದಲ್ಲಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 12 ಮಂದಿ ಸ್ಪರ್ಧಿಸಿದ್ದಾರೆ.

ಇನ್ನು ಶಿವಮೊಗ್ಗ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಡಲಾಗಿದ್ದು, ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಪುತ್ರ ಹಾಗೂ ಮಾಜಿ ಶಾಸಕ ಮಧುಬಂಗಾರಪ್ಪ ಸ್ಪರ್ಧಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ, ಹಾಲಿ ಸಂಸದ ಬಿ.ವೈ.ರಾಘವೇಂದ್ರ ಮರು ಆಯ್ಕೆ ಬಯಸಿ ಸ್ಪರ್ಧಿಸಿದ್ದು, ಇದು ಹೈವೋಲ್ಟೇಜ್ ಕ್ಷೇತ್ರವಾಗಿ ಪರಿಗಣಿಸಲ್ಪಟ್ಟಿದೆ. ಇಲ್ಲೂ ಕೂಡ 12 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಹಾಲಿ ಸಂಸದ ಪ್ರಕಾಶ್ ಹುಕ್ಕೇರಿ ವಿರುದ್ಧ ಬಿಜೆಪಿಯ ಶಾಸಕಿ ಶಶಿಕಲಾ ಜೊಲ್ಲೆ ಅವರ ಪತಿ ಅಣ್ಣಾ ಸಾಹೇಬ್ ಜೊಲ್ಲೆ ಸ್ಪರ್ಧಿಸಿದ್ದಾರೆ. ಐವರು ಪಕ್ಷೇತರರು ಸೇರಿ ಒಟ್ಟು 11 ಮಂದಿ ಸ್ಪರ್ಧೆಯಲ್ಲಿದ್ದಾರೆ.

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿರುವುದು ಗಮನಾರ್ಹವಾಗಿದೆ. ಹಾಲಿ ಸಂಸದ ಸುರೇಶ್ ಅಂಗಡಿ ಬಿಜೆಪಿಯಿಂದ, ಡಾ.ವಿರೂಪಾಕ್ಷ ಸಾದುನವರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ, ಉತ್ತಮ ಪ್ರಜಾಕೀಯ ಪಕ್ಷ, ಬಹುಜನ ಸಮಾಜವಾದಿ ಪಾರ್ಟಿ, ಆರ್‍ಪಿಐನ ಅಭ್ಯರ್ಥಿಗಳು ಮತ್ತು 52 ಮಂದಿ ಪಕ್ಷೇತರರು ಸೇರಿ ಒಟ್ಟು 57 ಮಂದಿ ಚುನಾವಣಾ ಕಣದಲ್ಲಿದ್ದಾರೆ.

ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರವಾದ ರಾಯಚೂರಿನಲ್ಲಿ ಹಾಲಿ ಸಂಸದ, ಬಿಜೆಪಿಯ ರಾಜ ಅಮರೇಶ್ವರ ನಾಯಕ, ಕಾಂಗ್ರೆಸ್‍ನ ಭಗವಂತರಾಯ್ ಪ್ರಮುಖ ಅಭ್ಯರ್ಥಿಗಳಾಗಿದ್ದು, ಸೋಶಿಯಲಿಸ್ಟ್ ಕಮ್ಯುನಿಟಿ ಸೆಂಟರ್ ಫಾರ್ ಇಂಡಿಯಾ, ಉತ್ತಮ ಪ್ರಜಾಕೀಯ ಪಾರ್ಟಿ, ಬಹುಜನ ಸಮಾಜ ಪಕ್ಷದ ಅಭ್ಯರ್ಥಿಗಳು ಸೇರಿ ಕೇವಲ ಐವರು ಮಾತ್ರ ಸ್ಪರ್ಧೆಯಲ್ಲಿದ್ದಾರೆ.

ಬಾಗಲಕೋಟೆಯಲ್ಲಿ ಬಿಜೆಪಿ ಹಾಲಿ ಸಂಸದ ಪಿ.ಸಿ.ಗದ್ದಿಗೌಡರ್ ವಿರುದ್ಧ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ಪತ್ನಿ ಹಾಗೂ ಜಿ.ಪಂ. ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಸ್ಪರ್ಧಿಸಿರುವುದರಿಂದ ಚುನಾವಣಾ ಕಣ ರಂಗೇರಿದೆ. ಒಟ್ಟು 14 ಮಂದಿ ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ.

ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಲಿ ಸಂಸದ ಭಗವಂತ ಕೂಬಾ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರಿಗೆ ಸವಾಲೊಡ್ಡಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷರ ಸ್ಪರ್ಧೆಯಿಂದಾಗಿ ಬೀದರ್ ಕೂಡ ಹೈವೋಲ್ಟೇಜ್ ಕಣವಾಗಿದೆ. 8 ಮಂದಿ ಪಕ್ಷೇತರರು ಸೇರಿ 22 ಮಂದಿ ಇಲ್ಲಿ ಸ್ಪರ್ಧೆಯಲ್ಲಿದ್ದಾರೆ.

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸಂಗಣ್ಣ ಕರಡಿ ಕಣದಲ್ಲಿದ್ದರೆ, ಕಾಂಗ್ರೆಸ್‍ನಿಂದ ರಾಜಶೇಖರ ಹಿಟ್ನಾಳ್ ಪೈಪೋಟಿ ನೀಡುತ್ತಿದ್ದಾರೆ. ಒಟ್ಟು 14 ಮಂದಿ ಇಲ್ಲಿ ಕಣದಲ್ಲಿದ್ದಾರೆ.

ಗಣಿ ನಾಡು ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಆರು ತಿಂಗಳ ಹಿಂದೆ ನಡೆದ ಉಪಚುನಾವಣೆಯಲ್ಲಿ ಆಯ್ಕೆಯಾಗಿದ್ದ ಕಾಂಗ್ರೆಸ್‍ನ ವಿ.ಎಸ್.ಉಗ್ರಪ್ಪ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಬಿಜೆಪಿ ವೈ.ದೇವೇಂದ್ರಪ್ಪ ಅವರನ್ನು ಕಣಕ್ಕಿಳಿಸಿದೆ.ಇಲ್ಲಿ 11 ಮಂದಿ ಕಣದಲ್ಲಿದ್ದಾರೆ.

ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸಂಸದ ಶಿವಕುಮಾರ್ ಉದಾಸಿ ಮತ್ತು ಕಾಂಗ್ರೆಸ್ ಪಕ್ಷದಿಂದ ದ್ಯಾವನಗೌಡ ಪಾಟೀಲ್ ಅವರ ನಡುವೆ ನೇರ ಹಣಾಹಣಿ ಇದ್ದು, 10 ಮಂದಿ ಸ್ಪರ್ಧಿಗಳಿದ್ದಾರೆ.

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಲಿ ಸಂಸದ ಪ್ರಹ್ಲಾದ್ ಜೋಷಿಗೆ, ಕಾಂಗ್ರೆಸ್‍ನ ಮಾಜಿ ಸಚಿವ ವಿನಯ್‍ಕುಲಕರ್ಣಿ ಪ್ರತಿಸ್ಪರ್ಧಿಯಾಗಿದ್ದಾರೆ.

ಇತ್ತೀಚೆಗೆ ಕಟ್ಟಡ ಕುಸಿತ ದುರಂತದಿಂದ ಚೇತರಿಸಿಕೊಳ್ಳುತ್ತಿರುವ ಧಾರವಾಡ ಲೋಕಸಭಾ ಕ್ಷೇತ್ರ ಚುನಾವಣೆ ಎದುರಿಸುತ್ತಿದೆ. ಒಟ್ಟು 19 ಮಂದಿ ಹುರಿಯಾಳುಗಳಾಗಿದ್ದಾರೆ.

ದಾವಣಗೆರೆಯ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸಂಸದ ಜಿ.ಎಂ.ಸಿದ್ದೇಶ್ವರ್ ವಿರುದ್ಧ ಹಿರಿಯ ಕಾಂಗ್ರೆಸ್ಸಿಗ ಶಾಮನೂರು ಶಿವಶಂಕರಪ್ಪ ಮತ್ತು ಅವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ಸ್ಪರ್ಧಿಸಲು ಹಿಂದೇಟು ಹಾಕಿದ್ದರು. ಕೊನೆ ಕ್ಷಣದಲ್ಲಿ ಹೈಕಮಾಂಡ್ ಎಚ್.ಬಿ.ಮಂಜಪ್ಪ ಅವರನ್ನು ಕಣಕ್ಕಿಳಿಸಿದೆ. ಇಲ್ಲಿ 25 ಮಂದಿ ಸ್ಪರ್ಧಿಸಿದ್ದಾರೆ.

ಒಟ್ಟು 14 ಕ್ಷೇತ್ರಗಳಲ್ಲಿ 10 ಮಹಿಳಾ ಅಭ್ಯರ್ಥಿಗಳು ಸೇರಿದಂತೆ 237 ಮಂದಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. 2.43 ಕೋಟಿ ಮತದಾರರು ಈ ಅಭ್ಯರ್ಥಿಗಳ ಹಣೆಬರಹವನ್ನು ಮಂಗಳವಾರ ನಿರ್ಧರಿಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ