ಅಂತ್ಯಗೊಂಡ ರಾಜ್ಯದ 2ನೇಹಂತದ ಚುನಾವಣೆಯ ಬಹಿರಂಗ ಪ್ರಚಾರ

ಬೆಂಗಳೂರು,ಏ.21- ಏ.23ರಂದು ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ ಹಾಗೂ ಶಿವಮೊಗ್ಗ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಮತದಾನ ಮುಕ್ತಾಯವಾಗುವ ಅವಧಿಯ 48 ಗಂಟೆಗೂ ಮುನ್ನ ಬಹಿರಂಗ ಪ್ರಚಾರಕ್ಕೆ ತೆರೆಬೀಳಬೇಕಿದೆ.ಇಂದು ಸಂಜೆ 6 ಗಂಟೆ ನಂತರ 14 ಕ್ಷೇತ್ರಗಳಲ್ಲೂ ಮನೆ ಮನೆ ಪ್ರಚಾರವನ್ನು ಅಭ್ಯರ್ಥಿಗಳು ಮುಂದುವರೆಸಬಹುದಾಗಿದೆ.ಆದರೆ ಮತದಾರರಲ್ಲದ ವಿವಿಧ ಪಕ್ಷಗಳ ರಾಜಕೀಯ ನಾಯಕರು, ಮುಖಂಡರು ಕ್ಷೇತ್ರ ಬಿಟ್ಟು ತೆರಳಬೇಕಾಗುತ್ತದೆ.

ಉತ್ತರ ಕರ್ನಾಟಕ ಭಾಗದ 14 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ 11 ಕ್ಷೇತ್ರಗಳಲ್ಲಿ, ಜೆಡಿಎಸ್ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ.

ಒಟ್ಟು 237 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ನಾಳೆ ಚುನಾವಣಾ ಸಿಬ್ಬಂದಿ ಆಯಾ ಲೋಕಸಭಾ ಕ್ಷೇತ್ರದ ಮಸ್ಟರಿಂಗ್ ಕೇಂದ್ರದಿಂದ ಮತಯಂತ್ರ ಹಾಗೂ ಭದ್ರತಾ ಸಿಬ್ಬಂದಿ ಮತಗಟ್ಟೆಗಳಿಗೆ ತೆರಳಲಿದ್ದಾರೆ.

ಇಂದು ಮತಯಾಚನೆಗೆ ಕೊನೆಯ ದಿನವಾಗಿರುವುದರಿಂದ ಪ್ರಮುಖ ರಾಜಕೀಯ ಪಕ್ಷಗಳ ನೇತಾರರು ಬೆಳಗ್ಗಿನಿಂದಲೇ ಬಿರುಸಿನ ಚುನಾವಣೆ ಪ್ರಚಾರ ಕೈಗೊಂಡು ತಮ್ಮ ಅಭ್ಯರ್ಥಿಗಳ ಪರವಾಗಿ ಮತಯಾಚನೆ ನಡೆಸಿದರು.

ಬಿಜೆಪಿ ಹಾಗೂ ದೋಸ್ತಿ ಪಕ್ಷಗಳ ಮುಖಂಡರು ಬಹಿರಂಗ ಸಮಾವೇಶ, ರೋಡ್ ಶೋ, ಪಾದಯಾತ್ರೆ ಮೂಲಕ ಮತಯಾಚನೆ ಮಾಡಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಧುಬಂಗಾರಪ್ಪನವರ ಪರವಾಗಿ ಮತಯಾಚನೆ ಮಾಡಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಡಾ.ವಿರೂಪಾಕ್ಷಪ್ಪ ಸಾಧುನವರ್ ಪರವಾಗಿ ಪ್ರಚಾರ ಮಾಡಿದರು.

ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಪರವಾಗಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಮಾಜಿ ಸಚಿವ ಬಿ.ಶ್ರೀರಾಮುಲು, ನಟಿ ಮಾಳವಿಕ ಅವಿನಾಶ್ ಚುನಾವಣಾ ಪ್ರಚಾರ ನಡೆಸಿದರು.

ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ ಪರವಾಗಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ , ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್‍ಯಡಿಯೂರಪ್ಪ ಬಿರುಸಿನ ಚುನಾವಣಾ ಪ್ರಚಾರ ನಡೆಸಿದರು.

ಕಲಬುರಗಿಯಲ್ಲಿ ಉಮೇಶ್ ಜಾಧವ್ ಪರವಾಗಿ ರಾಜ್ಯ ಬಿಜೆಪಿ ಉಸ್ತುವಾರಿ ಮುರುಳೀಧರ್ ರಾವ್, ಬೀದರ್‍ನಲ್ಲಿ ಭಗವಂತ ಕೂಬ ಪರವಾಗಿ ಮಾಜಿ ಮುಖ್ಯಮಂತ್ರಿ ಆರ್.ಅಶೋಕ್ ಮತಯಾಚನೆ ಮಾಡಿದರು.

ಹೀಗೆ ಎಲ್ಲಾ 14 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಬಿರುಸಿನಿಂದ ಚುನಾವಣಾ ಪ್ರಚಾರ ನಡೆಸಿದರು.

ಈಗಾಗಲೇ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ತಮ್ಮ ತಮ್ಮ ಪಕ್ಷಗಳ ಪರವಾಗಿ ಚುನಾವಣಾ ಪ್ರಚಾರ ನಡೆಸಿದ್ದಾರೆ.ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ರಾಜ್ಯ ಹಾಗೂ ಕೇಂದ್ರ ಸಚಿವರು ಸೇರಿದಂತೆ ಪ್ರಮುಖ ರಾಜಕೀಯ ಪಕ್ಷದ ನಾಯಕರು 2ನೇ ಹಂತದ ಕೆಲವು ಕ್ಷೇತ್ರಗಳಲ್ಲಿ ಈಗಾಗಲೇ ಚುನಾವಣಾ ಪ್ರಚಾರ ನಡೆಸಿ ಮತ ಯಾಚನೆ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ