ಬಳ್ಳಾರಿ,ಏ.21- ಎರಡನೇ ಹಂತದ ಲೋಕಸಭೆ ಚುನಾವಣೆಯ ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು ಐಟಿ ಅಧಿಕಾರಿಗಳು ಬಳ್ಳಾರಿಯಲ್ಲಿ ಭರ್ಜರಿ ದಾಳಿ ನಡೆಸಿದ್ದಾರೆ.
ನಿನ್ನೆಯಷ್ಟೆ ಶಿವಮೊಗ್ಗ, ಬಾಗಲಕೋಟೆ, ವಿಜಯಪುರ ಮುಂತಾದೆಡೆ ರಾಜಕೀಯ ಮುಖಂಡರು, ಆಪ್ತರ ಕಚೇರಿ ಹಾಗೂ ನಿವಾಸಗಳ ಮೇಲೆ ದಾಳಿ ನಡೆಸಿ ನಾಲ್ಕೂವರೆ ಕೋಟಿಗೂ ಹೆಚ್ಚು ನಗದು, ಭಾರೀ ಪ್ರಮಾಣದ ದಾಖಲೆಗಳನ್ನು ವಶ ಪಡಿಸಿಕೊಂಡ ಬೆನ್ನಲ್ಲೇ ಇಂದು ಬೆಳ್ಳಂ ಬೆಳಗ್ಗೆ ಬಳ್ಳಾರಿಯಲ್ಲಿ ಮೂರು ಕಡೆ ಏಕ ಕಾಲದಲ್ಲಿ ಚುನಾವಣಾಧಿಕಾರಿಗಳು ಮತ್ತು ಐಟಿ ಅಧಿಕಾರಿಗಳು ಅಪಾರ ಪ್ರಮಾಣದ ನಗದು ಹಾಗೂ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.
ಬಳ್ಳಾರಿಯ ಮೂವರು ಕಾಂಗ್ರೆಸ್ ನಾಯಕರು, ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಆಪ್ತರು ಹಾಗೂ ಬಿಜೆಪಿ ಶಾಸಕ ಶ್ರೀರಾಮುಲು ಆಪ್ತ ರಾಜು ನಿವಾಸದ ಮೇಲೆ ದಾಳಿ ಮಾಡಲಾಗಿದೆ. ಹಾಗೆಯೇ ಕೆಪಿಸಿಸಿ ಉಪಾಧ್ಯಕ್ಷ ಸೂರ್ಯನಾರಾಯಣ ರೆಡ್ಡಿ ಮನೆ, ಕಚೇರಿ ಹಾಗೂ ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ ಮಾವ ಯರ್ರಿಸ್ವಾಮಿ ಮನೆ ಮೇಲೂ ಐಟಿ ದಾಳಿ ನಡೆದಿದೆ.
ಇಂದು ಬಹಿರಂಗ ಪ್ರಚಾರ ಅಂತ್ಯಗೊಂಡು ಮನೆ ಮನೆಗೆ ತೆರಳಿ ಮತ ಯಾಚಿಸುವ ಸಂದರ್ಭದಲ್ಲಿ ವಿವಿಧ ಪಕ್ಷಗಳ ಮುಖಂಡರು ಮತದಾರರ ಮನವೊಲಿಕೆಗೆ ಭಾರೀ ಪ್ರಮಾಣ ಹಣ ಹಂಚಿಕೆ ಮಾಡಲಿದ್ದಾರೆ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದಾರೆ.
ಐಟಿ ದಾಳಿಯಿಂದ ಚುನಾವಣೆ ಕಾವು ಮತ್ತಷ್ಟು ಹೆಚ್ಚಾಗಿದೆ. ಪ್ರಭಾವಿ ಕಾಂಗ್ರೆಸ್ ಶಾಸಕರೊಬ್ಬರ ಸಂಬಂಧಿ ಅವರ ಮನೆಯಲ್ಲಿ ಭಾರೀ ಪ್ರಮಾಣದ ನಗದು ದೊರೆತಿದೆ ಎಂದು ತಿಳಿದು ಬಂದಿದೆ. ಬಿಜೆಪಿ ನಾಯಕರು ಹಾಗೂ ಆಪ್ತರ ಮನೆಗಳಲ್ಲೂ ಕೂಡ ತೀವ್ರ ಪರಿಶೀಲನೆ ನಡೆಸಲಾಗುತ್ತಿದೆ.ಇನ್ನೂ ಐಟಿ ದಾಳಿ ಮುಂದುವರೆದಿದೆ.