ಎಂಜನಿಯರಿಂಗ್ ವಿದ್ಯರ್ಥಿನಿ ನಿಗೂಡ ಸಾವು-ಸಿಐಡಿ ತನಿಖೆಗೆ ನಿರ್ದೇಶನ

ಹುಬ್ಬಳ್ಳಿ, ಏ.21- ರಾಯಚೂರಿನಲ್ಲಿ ನಡೆದಿರುವ ಎಂಜಿನಿಯರಿಂಗ್ ವಿದ್ಯಾರ್ಥಿನಿ ನಿಗೂಢ ಸಾವಿನ ಕ್ರೂರ ಪ್ರಕರಣ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದು, ವಿವಿಧ ಸಂಘಟನೆಗಳು, ನಾಗರೀಕರು, ಪೋಷಕರು ತೀವ್ರ ಪ್ರತಿಭಟನೆಯ ಬೆನ್ನಲ್ಲೇ ಪ್ರಭಾವಿಗಳ ಕೈವಾಡದಿಂದ ಮುಚ್ಚಿ ಹೋಗುತ್ತಿದ್ದ ಪ್ರಕರಣಕ್ಕೆ ಮರು ಜೀವ ಸಿಕ್ಕಿದೆ.

ಸತ್ಯಕ್ಕೆ ಸಾವಿಲ್ಲ ಎಂಬುದಕ್ಕೆ ಈ ಪ್ರಕರಣವೊಂದು ಜ್ವಲಂತ ನಿದರ್ಶನವಾಗಿದೆ.

ರಾಯಚೂರು ನಗರದ ಎಂಜಿನೀಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ ನಿಗೂಢ ಸಾವಿನ ಪ್ರಕರಣ ಆತ್ಮಹತ್ಯೆ ಎಂಬ ಕತ್ತಲಲ್ಲಿ ಕರಗಿ ಹೋಗುತ್ತಿತ್ತು. ಪೊಲೀಸರು ಕೂಡಾ ಇದು ಆತ್ಮಹತ್ಯೆ ಎಂದೇ ಷರಾ ಬರೆದು ಕೈ ತೊಳೆದುಕೊಂಡಿದ್ದರು. ಸತ್ಯವೆಂಬುದು ಅರಣ್ಯರೋಧನವಾಗಿ ಘೀಳಿಡುತ್ತಿತ್ತು.

ಆದರೆ ಮಧು ಪತ್ತಾರ ತಾಯಿ ತಮ್ಮ ಮಗಳ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ, ನ್ಯಾಯಕ್ಕಾಗಿ ಹೋರಾಟಕ್ಕೆ ಅಣಿಯಾಗುತ್ತಲೇ ಸತ್ಯದ ಮೇಲೆ ಸರಿದಿದ್ದ ಮಸುಕು ದೂರ ಸರಿಯ ತೊಡಗಿತು. ಸದರಿ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತ ಪೊಲೀಸರ ನಡೆಯನ್ನೇ ಶಂಕಿಸುವಂತಾಯಿತು.ಯಾವಾಗ ಪೊಲೀಸರ ತನಿಖೆಯ ಮೇಲೆ ಪ್ರಭಾವಿಗಳ ಒತ್ತಡವಿದೆ ಎಂಬುದು ಗೊತ್ತಾಗುತ್ತಲೇ ಇಡೀ ರಾಜ್ಯಕ್ಕೆ ರಾಜ್ಯವೇ ಸಿಬಿಐ ತನಿಖೆಗೆ ಒತ್ತಾಯಿಸಿ ಬೀದಿಗಿಳಿಯಿತು. ಪ್ರತಿಯೊಂದು ಮನಸುಗಳು ಚಿಗುರುವ ಮುನ್ನವೇ ಬಾಡಿ ಹೋದ ಈ ಮುಗ್ಧ ಜೀವದ ಸಾವಿಗೆ ಮಿಡಿಯತೊಡಗಿತು. ಜಸ್ಟೀಸ್ ಫಾರ್ ಮಧು ಎಂದ ಹ್ಯಾಷ್‍ಟ್ಯಾಗ್‍ನೊಂದಿಗೆ ತೀವ್ರಗೊಂಡ ಹೋರಾಟದ ಫಲವಾಗಿ ಪ್ರಕರಣ ಮರುಜೀವ ಪಡೆದು, ಸಿಐಡಿ ತನಿಖೆಗೆ ನಿರ್ದೇಶನಗೊಂಡಿದೆ.

ಸಾವಿನ ಬಗ್ಗೆ ಪೋಷಕರ ಶಂಕೆ:
ಮಧು ಪತ್ತಾರ ಅವರ ತಾಯಿ ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದನ್ನು ನಂಬಲು ಸಾಧ್ಯವೇ ಇರಲಿಲ್ಲ. ಆಕೆಗೆ ತಮ್ಮ ಮಗಳ ಬಗ್ಗೆ ಬಲವಾದ ನಂಬಿಕೆಯಿತ್ತು.

ನನ್ನ ಮಗಳು ಧೈರ್ಯವಂತೆ. ಅವಳಿಗೆ ಕಿರುಕುಳ ಕೊಟ್ಟು, ಸಂಚು ರೂಪಿಸಿ ಕೊಲೆ ಮಾಡಿದ್ದಾರೆ. ಪೊಲೀಸರು ಆರೋಪಿಗಳನ್ನು ಬಂಧಿಸಿ ಶಿಕ್ಷೆ ಕೊಡಿಸಬೇಕು ಎಂದು ಮಗಳ ಸಾವಿನ ನೋವಿನ ದುಃಖ ತೋಡಿಕೊಂಡರು.

ಇಂಟರ್ನಲ್ ಬರೆದು ಬರುತ್ತೇನೆ ಎಂದು ಏ.13 ರಂದು ಕಾಲೇಜಿಗೆ ಮಗಳು ಹೋದಳು. ಕೆಲ ಹೊತ್ತಿನ ಬಳಿಕ ಮನೆಯೊಳಗೆ ಒಬ್ಬ ಯುವಕ ದಿಢೀರ್ ಬಂದು ಹೋಗಿದ್ದರಿಂದ ಸಂಶಯ ಬಂತು. ಕೂಡಲೇ ಕಾಲೇಜಿಗೆ ತಂದೆ ನಾಗರಾಜ ಹೋಗಿ ಮಧುವಿಗಾಗಿ ಹುಡುಕಿದರೂ ಸಿಗಲಿಲ್ಲ. ಕೂಡಲೇ ಪೊಲೀಸ್ ಠಾಣೆಗೆ ಹೋಗಿ ದೂರು ಸಲ್ಲಿಸಿದರೂ ಪಡೆದುಕೊಳಲಿಲ್ಲ. ಮಗಳು ಶವವಾಗಿ ಸಿಗುವವರೆಗೂ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ ಎಂದು ತಾಯಿ ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದರು.

ಆ ನಂತರದ ಬೆಳವಣಿಯಲ್ಲಿ ಪೊಲೀಸರು ಮಧು ಗೆಳೆಯ ಎನ್ನಲಾದ ಸುದರ್ಶನ್ ಎಂಬಾತನನ್ನು ವಶಕ್ಕೆ ಪಡೆದರು. ಆತನ ವಿಚಾರಣೆಗೆ ಮುಂದಾಗುತ್ತಲೇ ಹಲವು ಆತಂಕಕಾರಿ ಅಂಶಗಳು ಬೆಳಕಿಗೆ ಬಂದು ಪ್ರಕರಣಕ್ಕೆ ಹೊಸ ತಿರುವು ನೀಡುತ್ತಾ ಹೋಯಿತಲ್ಲದೇ ಸಾರ್ವಜನಿಕರು ಈ ನಿಗೂಢ ಸಾವಿನ ಬಗ್ಗೆ ವ್ಯಕ್ತಪಡಿಸುತ್ತಿರುವ ಆಕ್ರೋಷ ಕಂಡು ಸಾವಿನ ಬಗ್ಗೆ ನ್ಯಾಯ ಸಿಗುವ ವಿಶ್ವಾಸವೂ ಕೂಡ ಕೊಂಚ ಮಟ್ಟಿಗೆ ಮೂಡಿದಂತಿದೆ.

ಎಸ್ಸೆಸ್ಸೆಲ್ಸಿ ನಂತರ ಕನ್ನಡ ಬರೆಯವುದನ್ನೆ ಬಿಟ್ಟಿದ್ದ ಮಗಳು ಕನ್ನಡದಲ್ಲಿ ಡೆತ್ ನೋಟ್ ಹೇಗೆ ಬರೆಯಲು ಸಾಧ್ಯ?

ಅವಳು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಅವಳ ಬಳಿಯಿದ್ದ ಸ್ಕೂಟರ್ ಮತ್ತು ಮೊಬೈಲ್ ಕಾಲೇಜಿನ ವಾಟರ್‍ಮನ್ ಸುದರ್ಶನ ಬಳಿ ಹೇಗೆ ಬಂದವು?

ಠಾಣೆಯಲ್ಲಿ ದೂರು ದಾಖಲಾಗದಂತೆ ಸುದರ್ಶನ ಮಾವ ಆಂಜೀನೆಯ ಸಂಚು ಮಾಡಿದ್ದರು. ಠಾಣೆ ದೂರು ಪಡೆದಿದ್ದರೆ ಮಗಳ ಸಾವು ತಪ್ಪಿಸಬಹುದಿತ್ತು? ಎಂಬ ಹಲವಾರು ಪ್ರಶ್ನೆಗಳನ್ನು ಪೋಷಕರು ಸಾರ್ವಜನಿಕವಾಗಿಯೇ ಎತ್ತಿದ್ದಾರೆ. ತನಿಖೆಯ ಮೂಲಕ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ.

ಆತ್ಮಹತ್ಯೆ, ಅತ್ಯಾಚಾರವಾಗಿ ಬದಲಾದ ಕಥೆ:
ಆರಂಭದಲ್ಲಿ ಈ ಪ್ರಕರಣ ಆತ್ಮಹತ್ಯೆ ಎಂದು ದಾಖಲಾಗಿತ್ತು. ಯಾವಾಗ ಸಂಶಯ ಹೆಚ್ಚಾಗಿ ಸಾರ್ವಜನಿಕರ ಆಕ್ರೋಶ ಮುಗಿಲು ಮುಟ್ಟಿತೋ ಪ್ರಕರಣದ ಪ್ರಾಥಮಿಕ ತನಿಖೆ ಕೈಗೊಂಡ ಪೊಲೀಸರು ಕೆಲವೊಂದು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು ಅದರ ಆಧಾರದಡಿ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. ಆದರೆ, ಮರಣೋತ್ತರ ಪರೀಕ್ಷೆ ವರದಿ ಇನ್ನೂ ಬಂದಿಲ್ಲ ಎಂದು ನೇತಾಜಿ ಠಾಣೆ ಪಿಎಸ್‍ಐ ತಿಳಿಸಿದ್ದಾರೆ. ಇದು ಆತ್ಮಹತ್ಯೆಯಲ್ಲ ಕೊಲೆ.

ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳು ಎರಡು ದಿನಗಳಿಂದ ಹೋರಾಟ ನಡೆಸಿ, ತಪ್ಪಿಸ್ಥರ ವಿರುದ್ದ ಕ್ರಮ ಕೈಗೊಳ್ಳಲು ಒತ್ತಾಯಿಸುತ್ತಿವೆ.

ಮುಂದುವರೆದ ಪ್ರತಿಭಟನೆ:
ಅನುಮಾನಾಸ್ಪದವಾಗಿ ಮೃತಪಟ್ಟಿರುವ ವಿದ್ಯಾರ್ಥಿನಿ ಸಾವಿನ ಪ್ರಕರಣದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಂಘಟಕರು ವಿವಿಧ ಕಡೆಗಳಲ್ಲಿ ಪ್ರತಿಭಟನೆ ನಡೆಸಿದರು. ಸಿಂಧನೂರು ನಗರದ ಬಸವ ವೃತ್ತದಿಂದ ಪ್ರತಿಭಟನೆ ಆರಂಭಗೊಂಡು, ಗಾಂಧಿ ವೃತ್ತದವರೆಗೆ ಸಾಗಿತು. ಈ ವೇಳೆ ಪ್ರತಿಭಟನಾಕಾರರು ಮಾನವಸರಪಳಿ ನಿರ್ಮಿಸಿ, ಘೋಷಣೆ ಕೂಗಿದರು. ವಿದ್ಯಾರ್ಥಿನಿಯದ್ದು ಆತ್ಮಹತ್ಯೆಯಲ್ಲ. ಕೊಲೆ ಮಾಡಿರುವ ಅನುಮಾನವಿದೆ. ಇಂತಹ ಪ್ರಕರಣಗಳು ಮತ್ತೆ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.ರಾಜಧಾನಿ ಬೆಂಗಳೂರು, ರಾಯಚೂರು, ಹುಬ್ಬಳ್ಳಿ ಧಾರವಾಡ ಸೇರಿದಂತೆ ರಾಜ್ಯದ ವಿವಿಧ ಮೂಲೆಗಳಿಂದ ಪ್ರತಿಭಟನೆ ನಡೆಯುತ್ತಿವೆ.

ಸಾಮಾಜಿಕ ಜಾಲ ತಾಣಗಳಲ್ಲಿ ಭುಗಿಲೆದ್ದ ಆಕ್ರೋಶ:
ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಅನುಮಾನಗಳು ವ್ಯಕ್ತವಾಗಿದ್ದರು, ಅನುಮಾನಾಸ್ಪದ ಸಾವಿನ ಬಗ್ಗೆ ಸಾಮಾಜಿಕ ತಾಣಗಳಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರಕರಣ ಸದ್ದು ಮಾಡಿದ್ದು, ಚುನಾವಣೆಯ ಸುದ್ದಿಗಳಲ್ಲಿ ಈ ಸುದ್ದಿ ಮುಚ್ಚಿ ಹೋಗಬಾರದು. ಇದು ಇಡೀ ಭಾರತವೇ ತಲೆ ತಗ್ಗಿಸುವಂತ ಹೇಯ ಕೃತ್ಯ ಎಂದು ಬಹುಪಾಲು ಜನರು ಬರೆದುಕೊಂಡಿದ್ದರೆ, ಈ ದೇಶದಲ್ಲಿ ಮತ್ತೆ ಹುಟ್ಟಿ ಬರಬೇಡ ಮಗಳೆ ಎಂದು ಜನರು ಆಕ್ರೋಶ ಭರಿತ ಬರಹದ ಪೋಸ್ಟ್ ಮಾಡಿದ್ದಾರೆ.

ನಿಯೋಗ ಭೇಟಿ:
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಗೊಳಪಡಿಸಲು ಒತ್ತಾಯಿಸಿ ಎಸ್‍ಎಫ್‍ಐ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಪ್ರಮುಖರು ಜಿಲ್ಲಾಧಿಕಾರಿ ಕಚೇರಿಗೆ ನಿಯೋಗದಲ್ಲಿ ತೆರಳಿ ಮನವಿ ಸಲ್ಲಿಸಿದರು.ಕಾಲೇಜು ವಿದ್ಯಾರ್ಥಿನಿಯ ಅನುಮಾನಾಸ್ಪದ ಸಾವು ಪಾಲಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ.

ಮಧುಪತ್ತಾರ ನಿಗೂಢ ಸಾವಿಗೆ ನ್ಯಾಯ ಸಿಗುವುದೇ.. ಇಂತಹ ಪ್ರಕರಣಗಳಿಗೆ ಕಡಿವಾಣ ಬೀಳುವುದೇ..?

ಸೋದರಿಯ ಮನ ಕಲಕುವ ಪತ್ರ;
ಜನ್ಮದಿನದ ಶುಭಾಶಯಗಳು ತಂಗಿ ಮಧು (ಸಿಸ್ಸಿ). ಇಂದು ಏಪ್ರಿಲ್ 17 ನಿನ್ನ ಜನ್ಮದಿನ ಇದ್ದರೂ ಸಂತೋಷ ಸಂಭ್ರಮ ಉಳಿದಿಲ್ಲ. ಏ. 16 ರಂದು ನಿನ್ನ ಅಂತ್ಯಕ್ರಿಯೆ ಮಾಡಿ ಒಬ್ಬಂಟಿಯಾಗಿದ್ದೇನೆ. ಎಲ್ಲ ವಿಷಯಗಳಲ್ಲಿ ಅನುತ್ತೀರ್ಣಳಾಗಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ನೀನು ಡೆತ್‍ನೋಟ್‍ನಲ್ಲಿ ಬರೆದುಕೊಂಡಿದ್ದು ಶುದ್ಧ ಸುಳ್ಳು. ಏ. 12 ರಂದು ಫಲಿತಾಂಶ ನೋಡಿದಾಗ ಎಲ್ಲ ವಿಷಯಗಳಲ್ಲಿ ಉತ್ತೀರ್ಣರಾಗಿರುವುದು ಸ್ಪಷ್ಟವಾಗಿತ್ತು. ಈ ಡೆತ್‍ನೋಟ್ ಬರೆಯುವುದಕ್ಕೆ ಯಾವುದೋ ಪಾಪಿಗಳು ನಿನಗೆ ಒತ್ತಾಯ ಮಾಡಿದ್ದಾರೆ.ಇದು ಆತ್ಮಹತ್ಯೆಯಲ್ಲ ಎನ್ನುವುದಕ್ಕೆ ಇದು ಸಾಕ್ಷಿ.ಇದೊಂದು ಯೋಜಿತ ಕೊಲೆ. ನ್ಯಾಯ ಸಿಗಬೇಕು. ಆರೋಪಿ ಸುದರ್ಶನ ಯಾದವ್ ಮತ್ತು ಜೊತೆಗಿದ್ದವರನ್ನು ಗಲ್ಲಿಗೇರಿಸಬೇಕು…. ಎಂದು ಮಧು ಪತ್ತಾರ ಅವರ ಸಹೋದರಿ ಮೇಘನಾ ಪತ್ತಾರ ಬರೆದ ಪತ್ರವು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ