ಬೆಂಗಳೂರು:ಕರ್ನಾಟಕದಲ್ಲೀಗ 2ನೇ ಹಂತದ ಲೋಕಸಭಾ ಚುನಾವಣೆಗೆ ಎರಡೇ ದಿನ ಬಾಕಿಯಿದೆ. ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 23 ರಂದು 2ನೇ ಹಂತದ ಮತದಾನ ನಡೆಯಲಿದ್ದು, ಬಹಿರಂಗ ಚುನಾವಣಾ ಪ್ರಚಾರಕ್ಕೆ ಇಂದು ತೆರೆ ಬಿದ್ದಿದೆ. ಹಾಗಾಗಿ ನಿನ್ನೆಯೇ ಕಣದಲ್ಲಿರುವ ಅಭ್ಯರ್ಥಿಗಳ ಪರವಾಗಿ ರಾಜ್ಯ ನಾಯಕರು ಕೊನೆ ಕ್ಷಣದ ಅಬ್ಬರದ ಪ್ರಚಾರ ನಡೆಸಿದ್ದಾರೆ.
ಅತ್ತ ಎರಡನೇ ಹಂತದ ಮತದಾನಕ್ಕೆ ಕೇಂದ್ರ ಚುನಾವಣಾ ಆಯೋಗ ಭಾರೀ ಸಿದ್ದತೆ ನಡೆಸಿಕೊಂಡಿದೆ. ಇತ್ತ ಚಿಕ್ಕೋಡಿ, ಕೊಪ್ಪಳ, ಬೆಳಗಾವಿ, ಬಳ್ಳಾರಿ, ಬಾಗಲಕೋಟೆ, ಹಾವೇರಿ, ವಿಜಯಪುರ, ಧಾರವಾಡ, ಕಲಬುರಗಿ, ಉತ್ತರ ಕನ್ನಡ, ರಾಯಚೂರು, ದಾವಣಗೆರೆ, ಬೀದರ್, ಶಿವಮೊಗ್ಗ ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮತ್ತು ಬಿಜೆಪಿ ಪರವಾಗಿ ರಾಷ್ಟ್ರೀಯ ನಾಯಕರು ಕೂಡ ಪ್ರಚಾರದಲ್ಲಿ ಭಾಗಿಯಾಗಿದ್ಧಾರೆ.
ಲೋಕಸಭಾ ಚುನಾವಣೆ ಗೆಲ್ಲಲು ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಸಿಎಂ ಚಂದ್ರಬಾಬು ನಾಯ್ಡು ಸೇರಿದಂತೆ ಸುಷ್ಮಾ ಸ್ವರಾಜ್ ತರಹದ ಗಣ್ಯರು ರಾಜ್ಯದಲ್ಲಿ ಪ್ರಚಾರ ಮಾಡಿ ಹೋಗಿದ್ದಾರೆ. ರಾಷ್ಟ್ರೀಯ ನಾಯಕರ ಪ್ರಚಾರದ ಅಬ್ಬರ ಮುಗಿಲು ಮುಟ್ಟಿದೆ.
ಇನ್ನು ಭದ್ರಾವತಿಯಲ್ಲಿ ರಾಘವೇಂದ್ರ ಪರ ಅಮಿತ್ ಶಾ ಮತ್ತು ಧಾರವಾಡದದಲ್ಲಿ ಪ್ರಹ್ಲಾದ್ ಜೋಶಿ ಪರ ಸುಷ್ಮಾ ಸ್ವರಾಜ್ ಪ್ರಚಾರ ನಡೆಸಿದರೇ, ಬಾಗಲಕೋಟೆಯಲ್ಲಿ ವೀಣಾ ಕಾಶಂಪೂರ್ ಪರ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಮತ ಯಾಚನೆ ಮಾಡಿದ್ದಾರೆ. ಅಲ್ಲದೇ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ವಿನಯ್ ಕುಲಕರ್ಣಿ ಪರ ಸಿದ್ದರಾಮಯ್ಯ, ಮಧು ಪರವಾಗಿ ಭದ್ರಾವತಿಯಲ್ಲಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್ ಭಾರೀ ರೋಡ್ ಶೋ ಮೂಲಕ ಮತಯಾಚನೆ ಮಾಡಿದ್ದಾರೆ.
ಒಟ್ನಲ್ಲಿ ಮತದಾರರ ಮನವೊಲಿಸಲು ಅಂತಿಮ ಕಸರತ್ತು ನಡೆಸಿದ ನಾಯಕರು ಭರ್ಜರಿ ರೋಡ್ ಶೋ, ಬಹಿರಂಗ ಸಮಾವೇಶಗಳನ್ನು ಆಯೋಜಿಸಿದ್ದರು.
ರಾಷ್ಟ್ರೀಯ ನಾಯಕರು ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಭಾಗವಹಿಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿದರು. ಈ ಬೆನ್ನಲ್ಲೀಗ ಬಹಿರಂಗ ಪ್ರಚಾರ ಇಂದು ಅಂತ್ಯಗೊಳ್ಳಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಭಾರೀ ಪ್ರಚಾರ ಸಭೆಗಳು ನಡೆಯಲಿವೆ.