ಬೆಂಗಳೂರು, ಏ.17-ಲೋಕಸಭಾ ಚುನಾವಣೆಯಲ್ಲಿ ತಟಸ್ಥವಾಗಿ ಉಳಿದು ಮುಂದೆ ತನ್ನ ರಾಜಕೀಯ ನಿರ್ಧಾರ ತಿಳಿಸುವುದಾಗಿ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿ ಹೊಳಿ ಹೇಳುವ ಮೂಲಕ ಮತ್ತೊಂದು ರಾಜಕೀಯ ಕ್ರಾಂತಿಯ ಮುನ್ಸೂಚನೆ ನೀಡಿದ್ದಾರೆ.
ಕಳೆದ ಆರು ತಿಂಗಳಿನಿಂದಲೂ ಕಾಂಗ್ರೆಸ್ನಲ್ಲಿ ಒಂದಷ್ಟು ಕಾಲ ಬಂಡಾಯಗಾರನಾಗಿ ಗುರುತಿಸಿಕೊಂಡಿದ್ದ ರಮೇಶ್ ಜಾರಕಿಹೊಳಿ ಇತ್ತೀಚೆಗೆ ತಟಸ್ಥ ನಿಲುವು ತಳೆದಿದ್ದಾರೆ.
ರಮೇಶ್ಜಾರಕಿ ಹೊಳಿ, ನಾಗೇಂದ್ರ, ಉಮೇಶ್ಜಾಧವ್ ಮತ್ತು ಮಹೇಶ್ ಕಮಟಳ್ಳಿ ಅವರು ಕಳೆದ ಡಿಸೆಂಬರ್ನಿಂದ ಫೆಬ್ರವರಿವರೆಗೂ ಮುಂಬೈನಲ್ಲಿದ್ದು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಸಾಥ್ ನೀಡಿದ್ದರು.
ಬಜೆಟ್ ಅಂಗೀಕಾರದ ವೇಳೆ ಖುದ್ದಾಗಿ ಹಾಜರಿರಲೇ ಬೇಕು, ಇಲ್ಲವಾದರೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮಕೈಗೊಳ್ಳುತ್ತೇವೆ ಎಂದು ಕಾಂಗ್ರೆಸ್ ಎಚ್ಚರಿಕೆ ನೀಡಿದ್ದರಿಂದ ಮತ್ತು ಬಿಜೆಪಿ ಆಪರೇಷನ್ ಕಮಲ ವಿಫಲವಾಗಿದ್ದರಿಂದ ಈ ನಾಲ್ಕೂ ಮಂದಿ ರೆಸಾರ್ಟ್ನಿಂದ ಹೊರಬಂದು ವಿಧಾನಸಭೆಯ ಅಧಿವೇಶನದಲ್ಲಿ ಭಾಗವಹಿಸಿದ್ದರು.
ಆದರೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನಾಲ್ವರ ವಿರುದ್ಧ ಪಕ್ಷೇತರ ನಿಷೇಧ ಕಾಯ್ದೆಯಡಿ ಕ್ರಮಕೈಗೊಳ್ಳುವಂತೆ ಸ್ಪೀಕರ್ ರಮೇಶ್ಕುಮಾರ್ ಅವರಿಗೆ ದೂರು ನೀಡಿದ್ದರು.
ನಂತರದ ಬೆಳವಣಿಗೆಯಲ್ಲಿ ಉಮೇಶ್ ಜಾಧವ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಅಭ್ಯರ್ಥಿಯಾಗಿ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ಸ್ಪರ್ಧಿಸಿದ್ದಾರೆ.
ಪಕ್ಷಾಂತರ ನಿಷೇಧ ಕಾಯ್ದೆ ಷೆಡ್ಯೂಲ್ 10ರಡಿ ಸಿದ್ದರಾಮಯ್ಯ ನೀಡಿರುವ ದೂರು ಆಧರಿಸಿ ರಾಜೀನಾಮೆ ನೀಡಿದ ಶಾಸಕರನ್ನು ಚುನಾವಣಾ ಸ್ಪರ್ಧೆಯಿಂದ ಅನರ್ಹಗೊಳಿಸಲು ಸಾಧ್ಯವಿಲ್ಲ ಎಂದು ಸ್ಪೀಕರ್ ಅವರು ಔಪಚಾರಿಕವಾಗಿ ಹೇಳಿಕೆ ನೀಡಿದ್ದಾರೆ. ಜೊತೆಯಲ್ಲಿ ಉಮೇಶ್ ಜಾಧವ್ ಅವರ ರಾಜೀನಾಮೆಯನ್ನೂ ಅಂಗೀಕರಿಸಿದ್ದಾರೆ. ಇದು ಕಾಂಗ್ರೆಸ್-ಜೆಡಿಎಸ್ನ ಅತೃಪ್ತ ಮತ್ತು ಬಂಡಾಯ ಶಾಸಕರಲ್ಲಿ ಹೊಸ ಹುಮ್ಮಸ್ಸನ್ನು ತುಂಬಿದೆ. ಸದ್ಯಕ್ಕೆ ಲೋಕಸಭೆ ಚುನಾವಣೆ ನಡೆಯುತ್ತಿರುವುದರಿಂದ ಶಾಸಕರ ರಾಜೀನಾಮೆ, ಅತೃಪ್ತರು, ಬಂಡಾಯ ಚಟುವಟಿಕೆಗಳಂತಹ ವಿಚಾರಗಳು ಹೆಚ್ಚು ಚರ್ಚೆಯಾಗುತ್ತಿಲ್ಲ. ಚುನಾವಣೆ ಬಳಿಕ ಇವುಗಳಿಗೆ ಪುಷ್ಟಿ ಸಿಗಬಹುದು ಎಂಬ ವದಂತಿಗಳಿವೆ. ಅದಕ್ಕೆ ಪೂರಕವಾಗಿ ರಮೇಶ್ ಜಾರಕಿ ಹೊಳಿ ಅವರು ಹೇಳಿಕೆ ನೀಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ತಾವು ಕಾಂಗ್ರೆಸ್ ಅಥವಾ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವುದಿಲ್ಲ. ಸದ್ಯಕ್ಕೆ ತಟಸ್ಥವಾಗಿರುತ್ತೇನೆ. ಚುನಾವಣೆ ಬಳಿಕ ಕಾಂಗ್ರೆಸ್ನಲ್ಲೇ ಮುಂದುವರೆಯಬೇಕೇ ಅಥವಾ ಬಿಜೆಪಿ ಸೇರಬೇಕೇ ಎಂಬ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.ಇದು ರಾಜಕೀಯವಾಗಿ ಸಂಚಲನ ಮೂಡಿಸಿದೆ.
ಉಮೇಶ್ ಜಾಧವ್ ಪ್ರಕರಣವನ್ನು ಮುಂದಿಟ್ಟುಕೊಂಡು ಆಡಳಿತ ಪಕ್ಷದ ಶಾಸಕರು ರಾಜೀನಾಮೆ ನೀಡಲು ಮುಂದಾದರೆ ಮೈತ್ರಿ ಸರ್ಕಾರ ಬಿಕ್ಕಟ್ಟಿಗೆ ಸಿಲುಕಲಿದ್ದು, ರಾಜಕೀಯ ಅಸ್ಥಿರತೆ ಎದುರಾಗುವ ಸಾಧ್ಯತೆ ಇದೆ.